ಕನ್ನಡ ‘ಬಿಗ್ ಬಾಸ್ ಒಟಿಟಿ 1’ (Bigg Boss OTT) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಪ್ರತಿ ಬಾರಿ ಬಿಗ್ ಬಾಸ್ ಆರಂಭವಾಗುವಾಗ ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ‘ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸ್ಪರ್ಧಿಗಳು ಯಾರು’ ಎಂಬ ಪ್ರಶ್ನೆ ಮೊದಲು ಮೂಡುತ್ತದೆ. ಆ ಬಳಿಕ ಎದುರಾಗುವುದು ‘ಈ ಬಾರಿಯ ಬಿಗ್ ಬಾಸ್ ಮನೆ ಹೇಗಿದೆ’ ಎಂಬ ಪ್ರಶ್ನೆ. ಮೊದಲ ಪ್ರಶ್ನೆಗೆ ಆಗಸ್ಟ್ 6ರಂದೇ ಉತ್ತರ ಸಿಗಬೇಕಿದೆ. ಈಗ ಎರಡನೇ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಾರಿ ‘ಬಿಗ್ ಬಾಸ್’ ಮನೆ ಹೇಗಿರಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಪ್ರತಿ ಬಾರಿ ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಮೊದಲು ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಆಗಸ್ಟ್ 6ರಿಂದ ‘ಬಿಗ್ ಬಾಸ್ ಒಟಿಟಿ’ಯ ಮೊದಲ ಸೀಸನ್ ಪ್ರಾರಂಭವಾಗಲಿದೆ. ಕಿಚ್ಚ ಸುದೀಪ್ ಅವರ ಸಾರಥ್ಯ ಇದಕ್ಕೆ ಇರಲಿದೆ. ಆರು ವಾರಗಳ ಕಾಲ ನಡೆಯುವ ಈ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲು ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಝಲಕ್ ತೋರಿಸಿದ್ದಾರೆ.
ಪ್ರತಿ ಬಾರಿ ‘ಬಿಗ್ ಬಾಸ್’ ಆರಂಭವಾಗುವಾಗ ಮನೆಗೆ ಹೊಸ ಲುಕ್ ನೀಡಲಾಗುತ್ತದೆ. ಈ ಬಾರಿಯೂ ಅಷ್ಟೇ, ದೊಡ್ಮನೆಗೆ ಹೊಸ ವಿನ್ಯಾಸ ನೀಡಲಾಗಿದೆ. ಈ ಫೋಟೋ ನೋಡಿ ವೀಕ್ಷಕರು ಸಾಕಷ್ಟು ಕುತೂಹಲಕ್ಕೆ ಒಳಗಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮನೆಯಲ್ಲಿ ಯಾವ ರೀತಿಯ ವಿಶೇಷತೆಗಳು ಇರಲಿವೆ ಎಂಬ ಕುತೂಹಲಕ್ಕೆ ಆಗಸ್ಟ್ 6ರಂದು ತೆರೆ ಬೀಳಲಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮಾಜಿ ಸ್ಪರ್ಧಿಯ ಮೇಲೆ ನಡೆಯಿತು ಹಲ್ಲೆ; ಪಾಲಕರ ಎದುರೇ ಥಳಿಸಿದ ಆಗಂತುಕ
‘ಕಿಚ್ಚ’ ಸುದೀಪ್ ಅವರು ‘ವಿಕ್ರಾಂತ್ ರೋಣ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅವರು ‘ಬಿಗ್ ಬಾಸ್ ಒಟಿಟಿ’ಗೆ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಅವರು ಈ ಶೋ ನಡೆಸಿಕೊಡಲಿದ್ದಾರೆ. ‘ಬಿಗ್ ಬಾಸ್ ಒಟಿಟಿ’ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ.