ನಿರ್ದೇಶಕ, ನಿರೂಪಕ, ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ ಅವರು ಅನೇಕರಿಗೆ ಗಾಡ್ ಫಾದರ್ ಆಗಿದ್ದಾರೆ. ಸ್ಟಾರ್ ಕಿಡ್ಗಳಿಗೆ ಅವರು ಸುಲಭವಾಗಿ ಅವಕಾಶ ನೀಡುವ ಮೂಲಕ ನೆಪೋಟಿಸಂ (Nepotism) ಹೆಚ್ಚಾಗಲು ಕಾರಣಕರ್ತರಾಗಿದ್ದಾರೆ ಎಂಬುದು ಹಲವರ ವಾದ. ಅದೇ ವಿಚಾರವನ್ನೇ ಇಟ್ಟುಕೊಂಡು ಕರಣ್ ಜೋಹರ್ ಅವರು ಈಗ ಒಂದು ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ‘ಶೋ ಟೈಮ್’ (Showtime) ಎಂದು ಶೀರ್ಷಿಕೆ ಇಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕರಣ್ ಜೋಹರ್ ಅವರ ‘ಧರ್ಮಾಟಿಕ್ ಎಂಟರ್ಟೇನ್ಮೆಂಟ್’ ಮೂಲಕ ‘ಶೋ ಟೈಮ್’ ವೆಬ್ ಸರಣಿ ನಿರ್ಮಾಣ ಆಗಿದೆ. ಇದರಲ್ಲಿ ನಸೀರುದ್ದೀನ್ ಶಾ, ಇಮ್ರಾನ್ ಹಷ್ಮಿ, ಶ್ರೀಯಾ ಶರಣ್, ಮೌನಿ ರಾಯ್, ವಿಜಯ್ ರಾಝ್ ಮುಂತಾದವರು ನಟಿಸಿದ್ದಾರೆ. ಬಣ್ಣದ ಲೋಕದ ಕುರಿತಾಗಿಯೇ ಈ ಸೀರಿಸ್ ನಿರ್ಮಾಣ ಆಗಿದೆ. ನೆಪೋಟಿಸಂ ಬಗ್ಗೆಯೂ ಇದರಲ್ಲಿ ತೋರಿಸಲಾಗುವುದು.
ನೆಪೋಟಿಸಂ ಟೀಕೆ ನಡುವೆಯೂ ಹೀರೋ ಆದ ಅಮಿತಾಭ್ ಮೊಮ್ಮಗ ಅಗಸ್ತ್ಯ ನಂದ
‘ಶೋ ಟೈಮ್’ ವೆಬ್ ಸರಣಿಯ ಟೀಸರ್ ಬಿಡುಗಡೆ ಆಗಿದೆ. ಆ ಮೂಲಕ ಇದರ ಕಥೆ ಏನು ಎಂಬುದರ ಸುಳಿವು ಬಿಟ್ಟುಕೊಡಲಾಗಿದೆ. ಇಮ್ರಾನ್ ಹಷ್ಮಿ ಅವರು ಇದರಲ್ಲಿ ಸ್ಟಾರ್ ನಟನ ಪಾತ್ರ ಮಾಡಿದ್ದಾರೆ. ಅವರ ಮ್ಯಾನರಿಸಂ ಗಮನ ಸೆಳೆಯುತ್ತಿದೆ. ನಸೀರುದ್ದೀನ್ ಶಾ ಅವರಿಗೆ ಒಂದು ಪ್ರಮುಖ ಪಾತ್ರ ಇದೆ. ಟೀಸರ್ನಲ್ಲಿನ ಕೆಲವು ದೃಶ್ಯಗಳು ಮತ್ತು ಡೈಲಾಗ್ಗಳು ಕುತೂಹಲ ಮೂಡಿಸುವಂತಿವೆ.
ಹಿಂದಿಯಲ್ಲಿ ವೆಬ್ ಸಿರೀಸ್ಗಳ ನಿರ್ಮಾಣ ಹೆಚ್ಚಾಗಿದೆ. ಸ್ಟಾರ್ ಕಲಾವಿದರು ಕೂಡ ಇವುಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಶೋ ಟೈಮ್’ 2024ರಲ್ಲಿ ಬಿಡುಗಡೆ ಆಗಲಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಈ ಸೀರಿಸ್ ವೀಕ್ಷಣೆಗೆ ಲಭ್ಯವಾಗಲಿದೆ. ‘ಶೋ ಟೈಮ್’ ಮೂಲಕ ಕರಣ್ ಜೋಹರ್ ಅವರು ನೆಪೋಟಿಸಂ ಅನ್ನು ಸಮರ್ಥಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ರಿಲೀಸ್ ಆದ ಬಳಿಕ ಅದಕ್ಕೆ ಉತ್ತರ ಸಿಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:52 pm, Wed, 20 December 23