ಕರಣ್ ಜೋಹರ್ ವರ್ತನೆಗೆ ಕಾಜೋಲ್ ಅಸಮಾಧಾನ; ‘ಕಾಫಿ ವಿತ್ ಕರಣ್’ ಶೋನಲ್ಲಿ ನಡೆದಿದ್ದೇನು?
‘ಕಾಫಿ ವಿತ್ ಕರಣ್’ ಶೋನಲ್ಲಿ ಒಂದಲ್ಲಾ ಒಂದು ವಿವಾದ ಆಗೋದು ಗ್ಯಾರಂಟಿ. ಪ್ರತಿ ಬಾರಿಯೂ ಕರಣ್ ಜೋಹರ್ ಅವರು ವಿವಾದಾತ್ಮಕ ಪ್ರಶ್ನೆ ಕೇಳುತ್ತಾರೆ. ಈ ಬಾರಿ ಅವರು ‘ಅನ್ಪ್ರೊಫೆಷನಲ್’ ಆಗಿ ನಡೆದುಕೊಂಡಿದ್ದಾರೆ ಅಂತ ನಟಿ ಕಾಜೋಲ್ ಆರೋಪಿಸಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ನಿರ್ಮಾಪಕ, ನಿರ್ದೇಶಕ, ನಿರೂಪಕ ಕರಣ್ ಜೋಹರ್ (Karan Johar) ಅವರಿಗೆ ಬಾಲಿವುಡ್ನಲ್ಲಿ ಬಹುತೇಕ ಎಲ್ಲರ ಜೊತೆ ಸ್ನೇಹ ಇದೆ. ಅನೇಕರಿಗೆ ಅವರೇ ಗಾಡ್ ಫಾದರ್. ಕಾಜೋಲ್ ಜೊತೆ ಅವರು ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಈಗ ಕಾಜೋಲ್ ಅವರು ‘ಕಾಫಿ ವಿತ್ ಕರಣ್’ (Koffee With Karan) ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ ಕರಣ್ ಜೋಹರ್ ನಡೆದುಕೊಂಡ ರೀತಿ ಕಾಜೋಲ್ಗೆ ಇಷ್ಟ ಆಗಿಲ್ಲ. ಹಾಗಾಗಿ ಅವರು ನೇರವಾಗಿ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆಲ್ಲ ಕಾರಣ ಆಗಿರುವುದು ರಣವೀರ್ ಸಿಂಗ್! ಈ ವಿಷಯದಲ್ಲಿ ರಣವೀರ್ ಸಿಂಗ್ (Ranveer Singh) ಯಾಕೆ ಬಂದ್ರು? ಅದಕ್ಕೆ ಇಲ್ಲಿದೆ ಉತ್ತರ..
‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಲೇಟೆಸ್ಟ್ ಸಂಚಿಕೆಗೆ ರಾಣಿ ಮುಖರ್ಜಿ ಮತ್ತು ಕಾಜೋಲ್ ಅವರು ಜೊತೆಯಾಗಿ ಬಂದಿದ್ದಾರೆ. ಈ ವೇಳೆ ಕರಣ್ ಜೋಹರ್ಗೆ ರಣವೀರ್ ಸಿಂಗ್ ಕಡೆಯಿಂದ ಫೋನ್ ಕರೆ ಬಂದಿದೆ. ಕಾರ್ಯಕ್ರಮದ ಶೂಟಿಂಗ್ ನಡುವೆ ಕರೆ ಸ್ವೀಕರಿಸಿದ ಕರಣ್ ಜೋಹರ್ ಅವರು ಬಹಳ ಹೊತ್ತು ಮಾತನಾಡಿದ್ದಾರೆ. ಇದರಿಂದ ರಾಣಿ ಮುಖರ್ಜಿ ಮತ್ತು ಕಾಜೋಲ್ ಕಾಯುವಂತಾಗಿದೆ. ಕರಣ್ ಜೋಹರ್ ಅವರ ಈ ವರ್ತನೆಯನ್ನು ಕಾಜೋಲ್ ಅವರು ‘ಅನ್ಪ್ರೊಫೆಷನಲ್’ ಎಂದು ಕರೆದಿದ್ದಾರೆ. ಅಲ್ಲದೇ, ಅವರು ಕೂಗಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ನವೆಂಬರ್ 30ರ ರಾತ್ರಿ ‘ಕಾಪಿ ವಿತ್ ಕರಣ್’ ಕಾರ್ಯಕ್ರಮದ ಹೊಸ ಸಂಚಿಕೆ ಪ್ರಸಾರ ಆಗಲಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಒಟಿಟಿಯಲ್ಲಿ ಈ ಶೋ ಬಿತ್ತರ ಆಗುತ್ತಿದೆ. ಯಶಸ್ವಿಯಾಗಿ 7 ಸೀಸನ್ಗಳನ್ನು ಪೂರೈಸಿರುವ ಈ ಕಾರ್ಯಕ್ರಮದ 8ನೇ ಸೀಸನ್ ಈಗ ಪ್ರಸಾರ ಆಗುತ್ತಿದೆ. ಈ ಶೋನಲ್ಲಿ ಕರಣ್ ಜೋಹರ್ ಅವರು ಹಲವು ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗಾಗಿ ಕೆಲವು ಸೆಲೆಬ್ರಿಟಿಗಳು ಈ ಶೋಗೆ ಬರಲು ಹಿಂದೇಟು ಹಾಕುತ್ತಾರೆ. ಈ ಮೊದಲು ರಣಬೀರ್ ಕಪೂರ್ ಅವರು ಕಟು ಮಾತುಗಳಿಂದ ಟೀಕೆ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಕಾಜೋಲ್ ಬಟ್ಟೆ ಬದಲಿಸುತ್ತಿರುವ ನಕಲಿ ವಿಡಿಯೋ ವೈರಲ್
8ನೇ ಸೀಸನ್ನಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಜೊತೆಯಾಗಿ ಕಾಣಿಸಿಕೊಂಡರು. ಈ ವೇಳೆ ದೀಪಿಕಾ ಪಡುಕೋಣೆ ಅವರು ತಮ್ಮ ಹಳೇ ರಿಲೇಷನ್ಶಿಪ್ ಬಗ್ಗೆ ಬಾಯಿ ಬಿಟ್ಟಿದ್ದರು. ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿರುವಾಗಲೇ ಬೇರೆ ಪುರುಷರ ಜೊತೆ ಸಂಪರ್ಕದಲ್ಲಿ ಇದ್ದೆ ಎಂದು ಹೇಳಿಕೊಂಡಿದ್ದಕ್ಕೆ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು. ಹಾಗಂತ ಆ ಟ್ರೋಲ್ಗಳಿಗೆ ದೀಪಿಕಾ ಅವರಾಗಲಿ, ರಣವೀರ್ ಸಿಂಗ್ ಅವರಾಗಲಿ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ರಾಣಿ ಮುಖರ್ಜಿ ಮತ್ತು ಕಾಜೋಲ್ ಅವರ ಸಂಚಿಕೆಯಿಂದ ಯಾವ ವಿವಾದ ಹುಟ್ಟಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.