ಬಾಲಿವುಡ್ನಲ್ಲಿ ನಟಿಯರಾದ ಸಾರಾ ಅಲಿ ಖಾನ್ (Sara Ali Khan) ಮತ್ತು ಅನನ್ಯಾ ಪಾಂಡೆ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಸ್ಟಾರ್ ಕಿಡ್ಸ್. ಹಾಗಾಗಿ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಬಹಳ ಬೇಗ ಸಿಕ್ಕಿವೆ. ಈಗ ಇಬ್ಬರೂ ಜೊತೆಯಾಗಿ ‘ಕಾಫಿ ವಿತ್ ಕರಣ್ ಸೀಸನ್ 8’ (Koffee With Karan) ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ನಿರೂಪಕ ಕರಣ್ ಜೋಹರ್ ಅವರು ಈ ನಟಿಯರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಹೊರಗೆ ಬಂದಿವೆ. ಅನನ್ಯಾ ಪಾಂಡೆ (Ananya Pandey) ಮತ್ತು ಸಾರಾ ಅಲಿ ಖಾನ್ ಅವರು ಒಬ್ಬನೇ ಹುಡುಗನ ಮೇಲೆ ಕಣ್ಣು ಹಾಕಿದ್ದರು ಎಂಬುದು ಈಗ ಬಹಿರಂಗ ಆಗಿದೆ.
‘ಚಿತ್ರರಂಗದಲ್ಲಿ ಯಾರ ಮೇಲೂ ನಾನು ಅಸಹಜವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ನೀನು ಇಷ್ಟಪಡುವ ಹುಡುಗನನ್ನು ನಾನು ನೋಡುವುದಿಲ್ಲ ಅಥವಾ ಆತನ ಜೊತೆ ನಾನು ಸಿನಿಮಾ ಮಾಡುವುದಿಲ್ಲ ಅಂತ ಬೇರೆಯವರು ಹೇಳಲಿ ಅಂತ ನಾನು ನಿರೀಕ್ಷಿಸಿಲ್ಲ’ ಎಂದು ಸಾರಾ ಅಲಿ ಖಾನ್ ಅವರು ಹೇಳಿದರು. ಆಗಲೇ ಅನನ್ಯಾ ಪಾಂಡೆ ಅವರು ಅಸಲಿ ವಿಚಾರ ಬಾಯಿ ಬಿಟ್ಟರು. ‘ಆ ಹುಡುಗನನ್ನು ನೋಡಿದರೆ ಹೊಡೆಯುತ್ತೇನೆ ಅಂತ ಸಾರಾ ನನಗೆ ಅನೇಕ ಬಾರಿ ಹೇಳಿದ್ದಾಳೆ’ ಎಂದರು ಅನನ್ಯಾ ಪಾಂಡೆ. ಆದರೆ ಈ ಹುಡುಗ ಯಾರು ಎಂಬುದನ್ನು ಮಾತ್ರ ಅವರು ಬಾಯಿ ಬಿಡಲಿಲ್ಲ.
‘ನನಗೆ ಆ ಹುಡುಗನ ಮೇಲೆ ಏನೂ ಇಂಟರೆಸ್ಟ್ ಇರಲಿಲ್ಲ. ಆದರೂ ಇವಳು ಬೆದರಿಕೆ ಹಾಕಿದಳು’ ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ. ನಟ ಕಾರ್ತಿಕ್ ಆರ್ಯನ್ ಜೊತೆ ಅನನ್ಯಾ ಪಾಂಡೆ ಅವರು ‘ಪತಿ ಪತ್ನಿ ಔರ್ ವೋ’ ಸಿನಿಮಾದಲ್ಲಿ ನಟಿಸಿದ್ದರು. ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರು ‘ಲವ್ ಆಜ್ ಕಲ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಾರ್ತಿಕ್ ಆರ್ಯನ್ ಜೊತೆ ಅನನ್ಯಾ ಹಾಗೂ ಸಾರಾ ಅಲಿ ಖಾನ್ ಇಬ್ಬರೂ ಡೇಟಿಂಗ್ ಮಾಡಿದ್ದರು ಎಂಬ ಗಾಸಿಪ್ ಇದೆ. ಹಾಗಾಗಿ ‘ಕಾಫಿ ವಿತ್ ಕರಣ್’ ಶೋನಲ್ಲಿ ಈ ನಟಿಯರಿಬ್ಬರು ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದು ಕಾರ್ತಿಕ್ ಆರ್ಯನ್ ಬಗ್ಗೆಯೇ ಎಂದು ನೆಟ್ಟಿಗರು ಊಹಿಸಿದ್ದಾರೆ.
ಇದನ್ನೂ ಓದಿ: ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್
‘ಕಾಫಿ ವಿತ್ ಕರಣ್‘ ಶೋನಲ್ಲಿ ಖಾಸಗಿ ವಿಷಯಗಳ ಬಗ್ಗೆ ಮುಲಾಜಿಲ್ಲದೇ ಪ್ರಶ್ನೆ ಕೇಳಲಾಗುತ್ತದೆ. ಇದರಿಂದ ಅನೇಕ ಬಾರಿ ವಿವಾದ ಆಗಿದ್ದು ಕೂಡ ಉಂಟು. ಅದೇ ಕಾರಣಕ್ಕಾಗಿ ಕೆಲವರು ಈ ಶೋಗೆ ಬರಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಕಾಣಿಸಿಕೊಂಡ ಎಪಿಸೋಡ್ ಕೂಡ ಸಾಕಷ್ಟು ಟ್ರೋಲ್ಗೆ ಒಳಗಾಗಿತ್ತು. ರಣವೀರ್ ಸಿಂಗ್ ಜೊತೆ ರಿಲೇಷನ್ಶಿಪ್ನಲ್ಲಿ ಇದ್ದಾಗಲೇ ಬೇರೆ ವ್ಯಕ್ತಿಗಳ ಜೊತೆ ಡೇಟಿಂಗ್ ಮಾಡಿದ್ದನ್ನು ದೀಪಿಕಾ ಪಡುಕೋಣೆ ಒಪ್ಪಿಕೊಂಡಿದ್ದರು. ಅದಕ್ಕಾಗಿ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.