Laapataa Ladies: ಒಟಿಟಿಗೆ ಬಂತು ‘ಲಾಪತಾ ಲೇಡೀಸ್​’ ಸಿನಿಮಾ; ನೆಟ್​ಫ್ಲಿಕ್ಸ್​ಗೆ ಧನ್ಯವಾದ ಹೇಳಿದ ಪ್ರೇಕ್ಷಕರು

ವಿಮರ್ಶಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದ ‘ಲಾಪತಾ ಲೇಡೀಸ್​’ ಸಿನಿಮಾ ಈಗ ಒಟಿಟಿಗೆ ಕಾಲಿಟ್ಟಿದೆ. ಸ್ಪರ್ಶ್​ ಶ್ರೀವಾಸ್ತವ್, ನಿತಾಂಕ್ಷಿ ಗೋಯಲ್​, ಪ್ರತಿಭಾ ರಂಟಾ, ರವಿ ಕಿಶನ್​, ಛಾಯಾ ಕದಂ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆಮಿರ್​ ಖಾನ್​ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅವರ ಮಾಜಿ ಪತ್ನಿ ಕಿರಣ್​ ರಾವ್​ ನಿರ್ದೇಶನ ಮಾಡಿದ್ದಾರೆ.

Laapataa Ladies: ಒಟಿಟಿಗೆ ಬಂತು ‘ಲಾಪತಾ ಲೇಡೀಸ್​’ ಸಿನಿಮಾ; ನೆಟ್​ಫ್ಲಿಕ್ಸ್​ಗೆ ಧನ್ಯವಾದ ಹೇಳಿದ ಪ್ರೇಕ್ಷಕರು
ಲಾಪತಾ ಲೇಡೀಸ್​ ಸಿನಿಮಾ ಪೋಸ್ಟರ್​

Updated on: Apr 25, 2024 | 8:35 PM

ಖ್ಯಾತ ನಟ ಆಮಿರ್ ಖಾನ್​ (Aamir Khan) ಅವರು ಅನೇಕ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆ ಪೈಕಿ ಇತ್ತೀಚೆಗೆ ತೆರೆಕಂಡ ‘ಲಾಪತಾ ಲೇಡೀಸ್​’ (Laapataa Ladies) ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಯಾವುದೇ ಸ್ಟಾರ್​ ಕಲಾವಿದರು ಈ ಚಿತ್ರದಲ್ಲಿ ನಟಿಸಿಲ್ಲ. ಬಹುತೇಕ ಹೊಸ ನಟ-ನಟಿಯರೇ ಈ ಸಿನಿಮಾದಲ್ಲಿದ್ದಾರೆ. ಹಾಗಾಗಿ ಚಿತ್ರಮಂದಿರದಲ್ಲಿ ‘ಲಾಪತಾ ಲೇಡೀಸ್​’ ಸಿನಿಮಾ ಹೆಚ್ಚು ದಿನ ಪ್ರದರ್ಶನ ಕಾಣಲಿಲ್ಲ. ನಿರೀಕ್ಷಿತ ಮಟ್ಟದ ಕಲೆಕ್ಷನ್​ ಕೂಡ ಆಗಲಿಲ್ಲ. ಈಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ನೆಟ್​ಫ್ಲಿಕ್ಸ್ (Netflix)​ ಮೂಲಕ ‘ಲಾಪತಾ ಲೇಡೀಸ್​’ ಚಿತ್ರ ವೀಕ್ಷಣೆಗೆ ಲಭ್ಯವಾಗುತ್ತಿದೆ.

‘ಲಾಪತಾ ಲೇಡೀಸ್​’ ಸಿನಿಮಾಗೆ ಆಮಿರ್​ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ ನಿರ್ದೇಶನ ಮಾಡಿದ್ದಾರೆ. ವಿಮರ್ಶಕರಿಂದ ಈ ಚಿತ್ರಕ್ಕೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ. ಎಲ್ಲ ಕಡೆಗಳಿಂದ ಸಿನಿಮಾ ಬಗ್ಗೆ ಮೆಚ್ಚುಗೆ ಕೇಳಿಬಂದಿದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಈ ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಿರಲಿಲ್ಲ. ಒಟಿಟಿಯಲ್ಲಿ ನೋಡಬೇಕು ಎಂದು ಕಾದಿದ್ದ ಎಲ್ಲರಿಗೂ ಈಗ ಖುಷಿ ಸುದ್ದಿ ಸಿಕ್ಕಿದೆ.

ಏಪ್ರಿಲ್​ 26ರಿಂದ ನೆಟ್​ಫ್ಲಿಕ್ಸ್​ ಮೂಲಕ ‘ಲಾಪತಾ ಲೇಡೀಸ್​’ ಸಿನಿಮಾದ ಸ್ಟ್ರೀಮಿಂಗ್​ ಆರಂಭ ಆಗಲಿದೆ. ಕೆಲವೇ ಚಿತ್ರಮಂದಿರಗಳಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆ ಆಗಿತ್ತು. ಚಿಕ್ಕ ಪಟ್ಟಣಗಳು ಹಾಗೂ ಗ್ರಾಮೀಣ ಭಾಗದ ಪ್ರೇಕ್ಷಕರಿಗೆ ಈ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ಅವರೆಲ್ಲರೂ ಈಗ ಒಟಿಟಿಯಲ್ಲಿ ನೋಡಲಿದ್ದಾರೆ. ‘ಈ ಚಿತ್ರಕ್ಕಾಗಿ ನಾವು ಬಹಳ ದಿನಗಳಿಂದ ಕಾದಿದ್ದೆವು. ಈಗ ಒಟಿಟಿಯಲ್ಲಿ ರಿಲೀಸ್​ ಮಾಡುತ್ತಿರುವುದಕ್ಕೆ ನೆಟ್​ಫ್ಲಿಕ್ಸ್​ಗೆ ಧನ್ಯವಾದಗಳು’ ಎಂದು ಅನೇಕ ಪ್ರೇಕ್ಷಕರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’

ಮಹಿಳಾ ಪ್ರಧಾನ ವಸ್ತುವಿಷಯವನ್ನು ‘ಲಾಪತಾ ಲೇಡೀಸ್​’ ಚಿತ್ರದಲ್ಲಿದೆ. ಗಂಭೀರವಾದ ವಿಷಯವಾದರೂ ಕೂಡ ಇಡೀ ಸಿನಿಮಾವನ್ನು ಹಾಸ್ಯದ ಧಾಟಿಯಲ್ಲಿ ಕಟ್ಟಿಕೊಡಲಾಗಿದೆ. ಎಮೋಷನಲ್​ ದೃಶ್ಯಗಳು ಕೂಡ ಈ ಚಿತ್ರದಲ್ಲಿ ಗಮನ ಸೆಳೆದಿವೆ. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಈ ಸಿನಿಮಾದಲ್ಲಿ ನಿತಾಂಕ್ಷಿ ಗೋಯಲ್​, ಸ್ಪರ್ಶ್​ ಶ್ರೀವಾಸ್ತವ್, ಪ್ರತಿಭಾ ರಂಟಾ, ಛಾಯಾ ಕದಂ, ರವಿ ಕಿಶನ್​ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us