ಸಚಿನ್​ಗೂ ಇಷ್ಟವಾಯ್ತು ‘ಲಾಪತಾ ಲೇಡೀಸ್​’ ಸಿನಿಮಾ; ಇಲ್ಲಿದೆ ಪ್ರಾಮಾಣಿಕ ವಿಮರ್ಶೆ

ಸ್ಪರ್ಶ್​ ಶ್ರೀವಾಸ್ತವ, ಪ್ರತಿಭಾ ರಂಟಾ, ತಿನಾಂಶಿ ಗೋಯಲ್​ ಅವರು ನಟಿಸಿರುವ ‘ಲಾಪತಾ ಲೇಡೀಸ್​’ ಸಿನಿಮಾದ ಬಗ್ಗೆ ಪಾಸಿಟಿವ್​ ಟಾಕ್​ ಸೃಷ್ಟಿ ಆಗಿದೆ. ಜನ ಸಾಮಾನ್ಯರು ಮಾತ್ರವಲ್ಲದೇ ರಾಧಿಕಾ ಆಪ್ಟೆ, ಅನುರಾಗ್​ ಕಶ್ಯಪ್​, ಸಿದ್ದಾರ್ಥ್​ ಮಲ್ಹೋತ್ರಾ ಮುಂತಾದ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಸಚಿನ್​ ತೆಂಡುಲ್ಕರ್​ ಕೂಡ ‘ಲಾಪತಾ ಲೇಡೀಸ್​’ ಸಿನಿಮಾವನ್ನು ಸಖತ್​ ಮೆಚ್ಚಿಕೊಂಡಿದ್ದಾರೆ.

ಸಚಿನ್​ಗೂ ಇಷ್ಟವಾಯ್ತು ‘ಲಾಪತಾ ಲೇಡೀಸ್​’ ಸಿನಿಮಾ; ಇಲ್ಲಿದೆ ಪ್ರಾಮಾಣಿಕ ವಿಮರ್ಶೆ
ಲಾಪತಾ ಲೇಡೀಸ್ ಸಿನಿಮಾ ಪೋಸ್ಟರ್​, ಸಚಿನ್​ ತೆಂಡುಲ್ಕರ್​
Follow us
ಮದನ್​ ಕುಮಾರ್​
|

Updated on: Mar 11, 2024 | 5:29 PM

ಕಿರಣ್​ ರಾವ್​ ಅವರು ನಿರ್ದೇಶನ ಮಾಡಿರುವ ‘ಲಾಪತಾ ಲೇಡೀಸ್​’ (Laapataa Ladies) ಸಿನಿಮಾಗೆ ಅನೇಕರಿಂದ ಉತ್ತಮ ವಿಮರ್ಶೆ ಸಿಕ್ಕಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸಾಧಾರಣ ಕಲೆಕ್ಷನ್​ ಮಾಡಿದೆ. ಆದರೆ ಹಲವು ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಮಾರ್ಚ್​ 1ರಂದು ಚಿತ್ರಮಂದಿರಗಳಲ್ಲಿ ‘ಲಾಪತಾ ಲೇಡೀಸ್​’ ಸಿನಿಮಾ ತೆರೆಕಂಡಿತು. ಟೀಮ್​ ಇಂಡಿಯಾದ ಮಾಜಿ ಕ್ರಿಕೆಟ್​ ಆಟಗಾರ ಸಚಿನ್​ ತೆಂಡುಲ್ಕರ್​ (Sachin Tendulkar) ಕೂಡ ಈಗ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ಅವರು ತಮ್ಮ ವಿಮರ್ಶೆ (Laapataa Ladies Review) ಹಂಚಿಕೊಂಡಿದ್ದಾರೆ. ಇದು ಎಲ್ಲರೂ ನೋಡಲೇಬೇಕಾದ ಸಿನಿಮಾ ಎಂದು ಸಚಿನ್​ ತೆಂಡುಲ್ಕರ್​ ಅವರು ಶಿಫಾರಸು ಮಾಡಿದ್ದಾರೆ. ಅಷ್ಟರಮಟ್ಟಿಗೆ ಅವರಿಗೆ ಈ ಚಿತ್ರ ಇಷ್ಟವಾಗಿದೆ.

‘ಲಾಪತಾ ಲೇಡೀಸ್​’ ಸಿನಿಮಾಗೆ ಆಮಿರ್​ ಖಾನ್​ ಅವರು ಬಂಡವಾಳ ಹೂಡಿದ್ದಾರೆ. ಅವರ ಮಾಜಿ ಪತ್ನಿ ಕಿರಣ್​ ರಾವ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಆ್ಯಕ್ಷನ್​-ಕಟ್​ ಹೇಳಿದ ಸಿನಿಮಾ ಎಂಬ ಕಾರಣದಿಂದಲೂ ಈ ಚಿತ್ರ ನಿರೀಕ್ಷೆ ಮೂಡಿಸಿತ್ತು. ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಜೊತೆ ಸಚಿನ್​ ತೆಂಡುಲ್ಕರ್​ ಅವರಿಗೆ ಸ್ನೇಹ ಇದೆ. ತಮ್ಮ ಸ್ನೇಹಿತರ ಸಿನಿಮಾವನ್ನು ಅವರು ಹೊಗಳಿದ್ದಾರೆ.

ಸಚಿನ್​ ತೆಂಡುಲ್ಕರ್ ಎಕ್ಸ್​ (ಟ್ವಿಟರ್​) ಪೋಸ್ಟ್​:

‘ಭಾರತದ ಸಣ್ಣ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ಮಾಡಿದ ಈ ಸಿನಿಮಾ ಹಲವು ವಿಷಯಗಳನ್ನು ಹೇಳುತ್ತದೆ. ನನಗೆ ಈ ಸಿನಿಮಾ ತುಂಬ ಇಷ್ಟವಾಯ್ತು. ಇದರ ಕಥೆ, ಕಲಾವಿದರ ಅಭಿನಯ ಹಾಗೂ ಬೋಧನೆ ಮಾಡದ ರೀತಿಯಲ್ಲಿ ಸೂಕ್ಷ್ಮವಾಗಿ ಸಾಮಾಜಿಕ ಸಂದೇಶ ನೀಡಿರುವುದು ಚೆನ್ನಾಗಿದೆ. ಇದು ಎಲ್ಲರೂ ನೋಡಬೇಕಿರುವ ಸಿನಿಮಾ. ನನ್ನನ್ನು ನಂಬಿ. ಈ ಸಿನಿಮಾ ನೋಡುವಾಗ ನೀವು ನಗುತ್ತೀರಿ, ಅಳುತ್ತೀರಿ. ಈ ಸಿನಿಮಾದಲ್ಲಿನ ಪಾತ್ರಗಳು ಗುರಿ ಮುಟ್ಟಿದಾಗ ನೀವು ಕೂಡ ಖುಷಿಪಡುತ್ತೀರಿ. ನನ್ನ ಸ್ನೇಹಿತರಾದ ಕಿರಣ್ ರಾವ್​ ಮತ್ತು ಆಮಿರ್​ ಖಾನ್​ ಅವರಿಗೆ ದೊಡ್ಡ ಅಭಿನಂದನೆ’ ಎಂದು ಸಚಿನ್​ ತೆಂಡುಲ್ಕರ್​ ಎಕ್ಸ್​ನಲ್ಲಿ (ಟ್ವಿಟರ್​) ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’

ಕೆಲವೇ ದಿನಗಳ ಹಿಂದೆ ನಿರ್ದೇಶಕ ಅನುರಾಗ್​ ಕಶ್ಯಪ್​ ಕೂಡ ‘ಲಾಪತಾ ಲೇಡೀಸ್​’ ಸಿನಿಮಾವನ್ನು ಹೊಗಳಿದ್ದರು. ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ‘ಎಂಥ ಸುಂದರವಾದ, ತಮಾಷೆಯಾದ, ಪ್ರಾಮಾಣಿಕವಾದ ಚಿತ್ರವನ್ನು ಕಿರಣ್​ ರಾವ್​ ಅವರು ಮಾಡಿದ್ದಾರೆ. ಅನೇಕ ವಿಚಾರಗಳನ್ನು ಅವರು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಅದಕ್ಕೂ ಮಿಗಿಲಾಗಿ ಇದು ಒಂದು ಭಾವನಾತ್ಮಕವಾದ ಸಿನಿಮಾ. ಅದ್ಭುತವಾದ ಲವ್​ ಸ್ಟೋರಿ ಇದೆ. ಪ್ರತಿ 10 ನಿಮಿಷಕ್ಕೊಮ್ಮೆ ಸತ್ಯಗಳನ್ನು ಮುಖಕ್ಕೆ ಹೊಡೆದಂತೆ, ಹಾಸ್ಯದ ಧಾಟಿಯಲ್ಲಿ ಹೇಳಲಾಗಿದೆ. ಲಾಪತಾ ಲೇಡೀಸ್​ ಸಿನಿಮಾ ನೋಡಿ ನಾನು ಪುಟ್ಟ ಮಗುವಿನಂತೆ ಅತ್ತಿದ್ದೇನೆ. ಈ ಅವಿಸ್ಮರಣೀಯ ಸಿನಿಮಾವನ್ನು ಯಾರೂ ಮಿಸ್​ ಮಾಡಿಕೊಳ್ಳಬೇಡಿ’ ಎಂದು ಅನುರಾಗ್​ ಕಶ್ಯಪ್​ ಅವರು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.