Netflix: ನೆಟ್​ಫ್ಲಿಕ್ಸ್​ನಲ್ಲಿ ಖಾಲಿ ಇದೆ ಕೆಲಸ: ಸಂಬಳ 7.38 ಕೋಟಿ

|

Updated on: Jul 26, 2023 | 10:10 PM

Netflix: ನೆಟ್​ಫ್ಲಿಕ್ಸ್​ ಸಂಸ್ಥೆಯಲ್ಲಿ ಖಾಲಿಯಿದೆ ಹಲವು ಉದ್ಯೋಗ, ನೀಡಲಿದ್ದಾರೆ ಏಳು ಕೋಟಿ ಸಂಬಳ!

Netflix: ನೆಟ್​ಫ್ಲಿಕ್ಸ್​ನಲ್ಲಿ ಖಾಲಿ ಇದೆ ಕೆಲಸ: ಸಂಬಳ 7.38 ಕೋಟಿ
ನೆಟ್​ಫ್ಲಿಕ್ಸ್
Follow us on

ಹಾಲಿವುಡ್​ನಲ್ಲಿ (Hollywood) ಪ್ರಸ್ತುತ ಕೆಲ ತಂತ್ರಜ್ಞರು ನಟರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈಟರ್ಸ್ ಗಿಲ್ಡ್ ಆಫ್ ಅಮೆರಿಕ (ಡಬ್ಲುಜಿಎ), ಸ್ಕ್ರೀನ್ ಆಟ್ಕರ್ಸ್ ಗಿಲ್ಡ್ ಮತ್ತು ಟೆಲಿವಿಷನ್ ಆಂಡ್ ರೆಡಿಯೋ ಆರ್ಟಿಸ್ಟ್ ಅಸೋಸಿಯೇಷನ್​ನವರು ಸಂಭಾವನೆ ಹೆಚ್ಚಳ ಮತ್ತು ಸಿನಿಮಾ, ಟಿವಿ ಶೋಗಳಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಇದರಿಂದಾಗಿ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು, ಒಟಿಟಿಗಳು ಸಮಸ್ಯೆಗೆ ಒಳಗಾಗಿವೆ. ಪ್ರತಿಭಟನೆ ಜಾರಿಯಲ್ಲಿರುವಾಗಲೇ ನೆಟ್​ಫ್ಲಿಕ್ಸ್​ (Netflix) ಉದ್ಯೋಗಿಗಳ ನೇಮಕಾತಿಗೆ ಜಾಹೀರಾತು ಬಿಡುಗಡೆ ಮಾಡಿದ್ದು ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ನೆಟ್​ಫ್ಲಿಕ್ಸ್​, ಕಂಟೆಂಟ್ ಕ್ರಿಯೇಷನ್​ಗಾಗಿ ಕೃತಕ ಬುದ್ಧಿಮತ್ತೆ ಮೊರೆ ಹೋಗಲು ನಿರ್ಣಯಿಸಿದ್ದು ಇದೇ ಕಾರಣಕ್ಕೆ ಎಐ ಮ್ಯಾನೇಜರ್ (ಕೃತಕ ಬುದ್ಧಿಮತ್ತೆ ವ್ಯವಸ್ಥಾಪಕ) ಸೇರಿದಂತೆ ಎಐಗೆ ಸಂಬಂಧಿಸಿದ ವಿವಿಧ ಹುದ್ದೆಗಳ ಭರ್ತಿಗೆ ಜಾಹೀರಾತು ನೀಡಿದೆ. ಅದರಲ್ಲಿಯೂ ಎಐ ಮ್ಯಾನೇಜರ್ ಹುದ್ದೆಗೆ ಭಾರಿ ದೊಡ್ಡ ಮೊತ್ತದ ಸಂಬಳ ನೀಡಲು ಮುಂದಾಗಿದೆ. ಎಐ ಮ್ಯಾನೇಜರ್ ಹುದ್ದೆಗೆ 3 ಲಕ್ಷ ಡಾಲರ್​ನಿಂದ ಆರಂಭಿಸಿ 9 ಲಕ್ಷ ಡಾಲರ್​ವರೆಗೆ ಸಂಬಳ ನೀಡಲಾಗುವುದು ಎಂದು ನೆಟ್​ಫ್ಲಿಕ್ಸ್ ಹೇಳಿಕೆ. 9 ಲಕ್ಷ ಡಾಲರ್ ಭಾರತೀಯ ರುಪಾಯಿ ಲೆಕ್ಕದಲ್ಲಿ 7.38 ಕೋಟಿ ರೂಪಾಯಿಗಳಾಗುತ್ತದೆ.

ಎಐ ಮ್ಯಾನೇಜರ್ ಹುದ್ದೆ ಮಾತ್ರವೇ ಅಲ್ಲದೆ ನೆಟ್​ಫ್ಲಿಕ್ಸ್​ನ ಗೇಮಿಂಗ್ ವಿಭಾಗದಲ್ಲಿ ಎಐ ಟೆಕ್ನಿಕಲ್ ಮ್ಯಾನೇಜರ್ ಹುದ್ದೆ ಹಾಗೂ ಇನ್ನೂ ಕೆಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದ್ದು ಎಐಗೆ ಸಂಬಂಧಿಸಿದ ಎಲ್ಲ ಹುದ್ದೆಗಳಿಗೂ ಭಾರಿ ಆಕರ್ಷಕ ಸಂಬಳ ನೀಡುವುದಾಗಿ ನೆಟ್​ಫ್ಲಿಕ್ಸ್ ಹೇಳಿದೆ. ಮನೊರಂಜನಾ ಕ್ಷೇತ್ರದಲ್ಲಿ ಎಐ ಬಳಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಹಾಗೂ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಂಟೆಂಟ್ ಕ್ರಿಯೇಷನ್​ನಲ್ಲಿ ಹೊಸತನ ಹಾಗೂ ವೇಗವನ್ನು ತರಲು ನೆಟ್​ಫ್ಲಿಕ್ಸ್ ಯೋಜಿಸಿದೆ ಇದೇ ಕಾರಣಕ್ಕೆ ಎಐಗೆ ಸಂಬಂಧಿಸಿದ ಹುದ್ದೆಗಳನ್ನು ಸೃಷ್ಟಿಸಿ ಆಕರ್ಷಕ ಸಂಬಳ ನೀಡಿ ನೇಮಕಾತಿಗೆ ಮುಂದಾಗಿದೆ.

ಇದನ್ನೂ ಓದಿ:Netflix Password: ಇನ್ನು ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!

ಕೋವಿಡ್ ಸಮಯದಲ್ಲಿ ನೆಟ್​ಫ್ಲಿಕ್ಸ್​ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿತ್ತು. ಆದರೆ ಕೋವಿಡ್ ಬಳಿಕ ಸುಮಾರು 50% ಚಂದಾದಾರನ್ನು ನೆಟ್​ಫ್ಲಿಕ್ಸ್ ಕಳೆದುಕೊಂಡಿತು. ಇದರಿಂದಾಗಿ ನೆಟ್​ಫ್ಲಿಕ್ಸ್​ನ ಷೇರು ಬೆಲೆಯೂ ತೀವ್ರವಾಗಿ ಕುಸಿದಿತ್ತು. ಕಾಸ್ಟ್ ಕಟಿಂಗ್, ರಿಸೆಷನ್ ಹೆಸರಲ್ಲಿ ಹಲವು ಉದ್ಯೋಗಿಗಳನ್ನು ವಜಾ ಮಾಡಿದ ನೆಟ್​ಫ್ಲಿಕ್ಸ್​ ತನ್ನ ಲಾಭ ಹೆಚ್ಚಿಸಿಕೊಳ್ಳಲು ತನ್ನ ಷೇರ್ ಮಾಡೆಲ್ ಅನ್ನು ಬದಲಾಯಿಸಿದೆ. ಇಷ್ಟು ದಿನ ಒಂದು ಖಾತೆಯನ್ನು ನಾಲ್ಕು ಜನ ಬಳಸಬಹುದಿತ್ತು. ಆದರೆ ಇದನ್ನು ನೆಟ್​ಫ್ಲಿಕ್ಸ್ ಬದಲಾಯಿಸಿದ್ದು ಒಂದೇ ಮನೆಯ ನಾಲ್ಕು ಜನರು ಮಾತ್ರವೇ ಒಂದು ಖಾತೆಯನ್ನು ಬಳಸಬಹುದು ಎಂಬ ನಿಯಮ ತಂದಿದೆ. ಇದರಿಂದಾಗಿ ಉಚಿತವಾಗಿ ನೆಟ್​ಫ್ಲಿಕ್ಸ್​ ಬಳಕೆ ಮಾಡುತ್ತಿರುವವರು ಕಡಿತಗೊಂಡು, ಅಂಥಹವರು ನೆಟ್​ಫ್ಲಿಕ್ಸ್ ನೋಡಲು ಹೊಸ ಖಾತೆಗಳನ್ನು ತೆರೆಯಬೇಕಾಗಿ ಬಂದಿದೆ.

ಕಂಟೆಂಟ್ ಜನರೇಷನ್​ನಲ್ಲಿ ಎಐ ಬಳಕೆ ಹೆಚ್ಚಳ ಮಾಡುವ ನೆಟ್​ಫ್ಲಿಕ್ಸ್​ನ ಯೋಜನೆಗೆ ಟೀಕೆಗಳು ಸಹ ವ್ಯಕ್ತವಾಗಿದ್ದು, ಈಗ ಪ್ರತಿಭಟನೆ ನಡೆಸುತ್ತಿರುವ ಎಸ್​ಜಿಎ, ಡಬ್ಲುಜಿಎ ಹಾಗೂ ಟೆಲಿವಿಷನ್-ರೇಡಿಯೋ ಕಲಾವಿದರು ನೆಟ್​ಫ್ಲಿಕ್ಸ್​ನ ಈ ನಡೆಯನ್ನು ಖಂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ