ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಂದು (ಜೂನ್ 2) ಅವರ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲಾಗಿದೆ. ಈ ಖುಷಿಯನ್ನು ಹೆಚ್ಚಿಸಲು ಇನ್ನೊಂದು ಕಾರಣ ಸಿಕ್ಕಿದೆ. ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಮೊದಲು ಕೂಡ ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ಈ ಚಿತ್ರ ಲಭ್ಯವಾಗಿತ್ತು. ಆದರೆ ಚಂದಾದಾರರು ಕೂಡ ರೆಂಟ್ಗೆ ಪಡೆದು ಈ ಸಿನಿಮಾ ವೀಕ್ಷಿಸಬೇಕಿತ್ತು. ಈಗ ಅಮೇಜಾನ್ ಪ್ರೈಂ ವಿಡಿಯೋದ (Amazon Prime video) ಚಂದಾದಾರರು ಉಚಿತವಾಗಿ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರ ವೀಕ್ಷಿಸಬಹುದು. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯಾ ರೈ, ಕಾರ್ತಿ, ಜಯಂ ರವಿ ಮುಂತಾದವರು ನಟಿಸಿದ್ದಾರೆ.
ಏಪ್ರಿಲ್ 28ರಂದು ಚಿತ್ರಮಂದಿರಗಳಲ್ಲಿ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ತಮಿಳುನಾಡಿನಲ್ಲಿ ಅದ್ದೂರಿ ಓಪನಿಂಗ್ ಪಡೆದುಕೊಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರ ತಮಿಳಿನ ಜೊತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪ್ರದರ್ಶನವಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಈಗ ಒಟಿಟಿ ಮೂಲಕ ಇನ್ನಷ್ಟು ಜನರನ್ನು ಈ ಸಿನಿಮಾ ತಲುಪುತ್ತಿದೆ.
ಮಣಿರತ್ನಂ ಅವರಿಗೆ ವಿಶ್ ಮಾಡುತ್ತಿದ್ದಾರೆ. ಕಮಲ್ ಹಾಸನ್ ಕೂಡ ವಿಶೇಷ ಮಾತುಗಳ ಮೂಲಕ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಮಣಿರತ್ನಂ ಮಾಡಿದ ಸಾಧನೆಯನ್ನು ಅವರು ಕೊಂಡಾಡಿದ್ದಾರೆ. ಬಣ್ಣದ ಲೋಕದಲ್ಲಿ ಮಣಿರತ್ನಂ ಅವರಿಗೆ ಇರುವ ಅನುಭವ ಅಪಾರ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಕೂಡ ಬೇಡಿಕೆ ಉಳಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ಕಲಾವಿದರ ಜೊತೆ ಅವರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ
‘ನೀವು ನಿರಂತರವಾಗಿ ಕಲಿಯುವ ಮೂಲಕ ಸವಾಲಿನ ಪ್ರಮಾಣವನ್ನು ಲೆಕ್ಕಿಸದೆ ಸಿನಿಮಾದ ಗಡಿಗಳನ್ನು ನಿರಂತರವಾಗಿ ಮೀರಿದ್ದೀರಿ. ಇಂದು ನೀವು ಮುಂದಿನ ಪೀಳಿಗೆಯ ಸಿನಿಮಾ ನಿರ್ದೇಶಕರನ್ನು ಪ್ರೇರೇಪಿಸುವ ಮಾಸ್ಟರ್ ಆಗಿದ್ದೀರಿ. ಅವರ ಮೂಲಕ ನಿಮ್ಮ ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ. ‘ನಾಯಕನ್’ ಸಿನಿಮಾದಿಂದ ‘ಕೆಎಚ್234’ ಚಿತ್ರದವರೆಗೆ ನಿಮ್ಮೊಂದಿಗಿನ ನನ್ನ ಪಯಣ ಲಾಭದಾಯಕ ಮತ್ತು ಸಮೃದ್ಧಯುತವಾಗಿದೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಕಮಲ್ ಹಾಸನ್ ಅವರು ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2: ಮಣಿರತ್ನಂ ವಿರುದ್ಧ ಲೇಖಕ ಮುರುಗವೇಲ್ ಕಿಡಿ
‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ಬಗ್ಗೆ ಕಮಲ್ ಹಾಸನ್ ಅವರು ಈ ಹಿಂದೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ‘ಮಣಿರತ್ನಂ ಅವರು ಇಂಥ ದೊಡ್ಡ ಚಿತ್ರವನ್ನು ಮಾಡಲು ಸಾಕಷ್ಟು ಧೈರ್ಯ ತೋರಿಸಿದ್ದಾರೆ. ಮಣಿರತ್ನಂ ಮತ್ತು ಅವರ ಛಾಯಾಗ್ರಾಹಕರು, ಸಂಗೀತಗಾರರು ಹಾಗೂ ಇಡೀ ತಂಡದವರು ಒಟ್ಟಾಗಿ ತಮಿಳು ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ’ ಎಂದು ಕಮಲ್ ಹಾಸನ್ ಹೊಗಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.