ಡಿಜಿಟಲ್ ಯುಗದಲ್ಲಿ ಸಿನಿಮಾ ನಿರ್ಮಾಪಕರಿಗೆ (Producer) ಗಳಿಕೆಯ ಹಲವು ಹಾದಿಗಳು ತೆರೆದುಕೊಂಡಿವೆ. ಡಿಜಿಟಲ್, ಒಟಿಟಿ, ಪೇ ಪರ್ ವ್ಯೂ, ಸ್ಯಾಟಲೈಟ್ ಹಲವು ಆಯ್ಕೆಗಳಿವೆ. ಇವುಗಳ ಜೊತೆಗೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ‘ಕಲ್ಕಿ 2898 ಎಡಿ’ (Kalki 2989 ad) ತಂಡ, ಸಿನಿಮಾದ ಅನಿಮೇಟೆಡ್ ಸರಣಿಯನ್ನು ಒಟಿಟಿಗೆ ನೀಡಿದ್ದು, ‘ಕಲ್ಕಿ 2898 ಎಡಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮುನ್ನವೇ ಅದರ ಅನಿಮೇಟೆಡ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ಕ್ಕೆ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದ ಕೆಲವು ಪೋಸ್ಟರ್, ಟೀಸರ್ಗಳು ಈಗಾಗಲೇ ಬಿಡುಗಡೆ ಆಗಿ ಭಾರಿ ಜನಪ್ರಿಯತೆ ಗಳಿಸಿವೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಭೈರವನ ಪಾತ್ರ ಮಾಡಿದ್ದು, ಭೈರವನ ಜೊತೆಗಾತಿಯಾಗಿ ಬುಜ್ಜಿ ಎಂಬ ಪುಟ್ಟ ಯಂತ್ರವಿದೆ. ಈ ಇಬ್ಬರ ಸಂಭಾಷಣೆ, ಬಾಂಡಿಂಗ್, ಪರಸ್ಪರ ಕಾಲೆಳೆತಗಳು ಸಿನಿಮಾದ ಹೈಲೈಟ್ ಎನ್ನಲಾಗುತ್ತಿದೆ. ಇದೀಗ ಈ ಇಬ್ಬರ ಗೆಳೆತನವನ್ನೇ ಆಧಾರವಾಗಿಟ್ಟುಕೊಂಡು ರಚಿಸಲಾಗಿರುವ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಮೇ 31 ಕ್ಕೆ ಅಂದರೆ ನಾಳೆಗೆ ಬಿಡುಗಡೆ ಮಾಡಲಾಗುತ್ತಿದೆ. ಅನಿಮೇಟೆಡ್ ಸರಣಿಯ ಟೀಸರ್ ಅನ್ನು ಅಮೆಜಾನ್ ಪ್ರೈಂ ಹಂಚಿಕೊಂಡಿದೆ.
ಇದನ್ನೂ ಓದಿ:Kalki 2898 AD: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಈವೆಂಟ್; ಪ್ರಭಾಸ್ ಬರ್ತಾರಾ?
ಟ್ರೈಲರ್ನಲ್ಲಿ ಬುಜ್ಜಿ ಹಾಗೂ ಭೈರವ ಅಪಾಯಕಾರಿ ಮಿಷನ್ಗಳಲ್ಲಿ ಪಾಲ್ಗೊಂಡಿರುವ, ದುಷ್ಟರನ್ನು ತಮ್ಮ ಅತ್ಯಾಧುನಿಕ ವಾಹನ ಹಾಗೂ ಶಸ್ತ್ರಾಸ್ತ್ರಗಳನ್ನು ಬಳಸಿ ಪುಡಿಗಟ್ಟುತ್ತಿರುವ ದೃಶ್ಯಗಳಿವೆ. ಅನಿಮೇಷನ್ ಅನ್ನು ಸುಂದರವಾಗಿ ಮಾಡಿದ್ದು, ಪ್ರಭಾಸ್ರ ಭೈರವನ ಪಾತ್ರವನ್ನು ಚೆನ್ನಾಗಿ ನಕಲು ಮಾಡಲಾಗಿದೆ. ಅನಿಮೇಟೆಡ್ ಸರಣಿಯ ಭೈರವನ ಪಾತ್ರಕ್ಕೆ ಪ್ರಭಾಸ್ ಅವರೇ ಧ್ವನಿ ನೀಡಿದ್ದಾರೆ. ಇನ್ನು ಬುಜ್ಜಿ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್ ಧ್ವನಿ ನೀಡಿದ್ದಾರೆ. ಸಿನಿಮಾದಲ್ಲಿಯೂ ಸಹ ಬುಜ್ಜಿ ಪಾತ್ರಕ್ಕೆ ಕೀರ್ತಿ ಸುರೇಶ್ ಅವರೇ ಧ್ವನಿ ನೀಡಿದ್ದಾರೆ.
‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾ ಭವಿಷ್ಯದಲ್ಲಿ ನಡೆಯುವ ಕತೆಯನ್ನು ಹೊಂದಿದೆ. ಸಿನಿಮಾದ ಮೇಕಿಂಗ್ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಕತೆಯನ್ನು ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಹಾಗೂ ನಾಗ್ ಅಶ್ವಿನ್ ರಚಿಸಿದ್ದಾರೆ. ಸಿನಿಮಾನಲ್ಲಿ ದೊಡ್ಡ ತಾರಾಗಣವೇ ಇದೆ. ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅವರುಗಳು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ