
ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಮೊದಲಿಗಿಂತಲೂ ಹೆಚ್ಚು ಹದಗೆಟ್ಟಿದೆ. ಗಡಿಯಲ್ಲಿ ಬಿಗುವಿನ ವಾತಾವರಣವಿದೆ. ಭಾರತವು ಕೆಲ ದಿನಗಳ ಹಿಂದಷ್ಟೆ ಪಾಕ್ನ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ಹಲವು ಉಗ್ರರ ಕೊಂದಿದೆ. ಈ ದಾಳಿಯನ್ನು ಸಹಜವಾಗಿಯೇ ಪಾಕಿಸ್ತಾನ ಖಂಡಿಸಿದ್ದು, ಗಡಿಯಲ್ಲಿ ಅಪ್ರಚೋದಿತ ದಾಳಿ ಆರಂಭಿಸಿದೆ. ಇದೀಗ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಈಗಾಗಲೇ ಕೆಲವೆಡೆ ಯುದ್ಧ ಸನ್ನಿವೇಶದ ಅಣಕು ಪ್ರದರ್ಶನ ಆರಂಭಿಸಲಾಗಿದೆ. ಇದೇ ಕಾರಣಕ್ಕೆ ಇದೀಗ ಬಾಲಿವುಡ್ (Bollywood) ಸಿನಿಮಾ ಒಂದು ಚಿತ್ರಮಂದಿರದ ಬದಲಿಗೆ ಒಟಿಟಿಗೆ ನೇರವಾಗಿ ಬಿಡುಗಡೆ ಆಗುವುದಾಗಿ ಘೋಷಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳು ಇದೇ ಹಾದಿ ಹಿಡಿಯಬಹುದಾಗಿದೆ.
ರಾಜ್ಕುಮಾರ್ ರಾವ್, ವಾಮಿಕಾ ಗಬ್ಬಿ, ಸಂಜಯ್ ಮಿಶ್ರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಭೂಲ್ ಚುಕ್ ಮಾಫ್’ ಸಿನಿಮಾ ಇದೇ ಶುಕ್ರವಾರ (ಮೇ 9) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬೇಕಿತ್ತು. ಸಿನಿಮಾದ ಪ್ರಚಾರವನ್ನೂ ಸಹ ಬಲು ಜೋರಾಗಿ ಮಾಡಲಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಇದೀಗ ಸಿನಿಮಾದ ಬಿಡುಗಡೆಯನ್ನು ರದ್ದು ಮಾಡಿ, ಸಿನಿಮಾ ಅನ್ನು ಚಿತ್ರಮಂದಿರಗಳ ಬದಲಾಗಿ ನೇರವಾಗಿ ಒಟಿಟಿಗೆ ಬಿಡುಗಡೆ ಮಾಡಲಾಗುತ್ತಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚಿತ್ರತಂಡ, ‘ಇತ್ತೀಚೆಗಿನ ದೇಶದಾದ್ಯಂತ ನಡೆದ ಯುದ್ಧ ಪರಿಸ್ಥಿತಿ ಅಣಕು ಪ್ರದರ್ಶನ (ಮಾಕ್ ಡ್ರಿಲ್) ಇನ್ನಿತರೆ ಬೆಳವಣಿಗೆಗಳನ್ನು ಗಮನಿಸಿ ಮ್ಯಾಡ್ಲಾಕ್ ಸಿನಿಮಾ ಮತ್ತು ಅಮೆಜಾನ್ ಎಂಜಿಎಂ ಜಂಟಿಯಾಗಿ ‘ಭೂಲ್ ಚುಕ್ ಮಾಫ್’ ಸಿನಿಮಾವನ್ನು ಚಿತ್ರಮಂದಿರಗಳ ಬದಲಾಗಿ ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೇವೆ. ಮೇ 16 ರಿಂದ ಅಮೆಜಾನ್ ಪ್ರೈಂನಲ್ಲಿ ‘ಭೂಲ್ ಚುಕ್ ಮಾಫ್’ ಸಿನಿಮಾ ಬಿಡುಗಡೆ ಆಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ನಟ ರಾಜ್ಕುಮಾರ್ ರಾವ್ ತೋಳಿನಲ್ಲಿ ಯಜುವೇಂದರ್ ಚಾಹಲ್ ಮಾಜಿ ಪತ್ನಿ
‘ಭೂಲ್ ಚುಕ್ ಮಾಫ್’ ಸಿನಿಮಾವನ್ನು ಚಿತ್ರಮಂದಿರಗಳಿಗಾಗಿ ನಿರ್ಮಾಣ ಮಾಡಲಾಗಿತ್ತು, ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲಿ ಈ ಸಿನಿಮಾದ ಬಿಡುಗಡೆಯನ್ನು ಸಂಭ್ರಮಿಸಲು ನಾವು ಉತ್ಸುಕರಾಗಿದ್ದೆವು. ಆದರೆ ನಮಗೆ ದೇಶದ ಹಿತ, ನಾಗರೀಕರ ಸುರಕ್ಷೆಯೆ ಮೊದಲ ಪ್ರಾಧಾನ್ಯತೆ ಹೀಗಾಗಿ ನಾವು ಈ ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದೆ ನಿರ್ಮಾಣ ಸಂಸ್ಥೆ.
‘ಭೂಲ್ ಚುಕ್ ಮಾಫ್’ ಕಾಮಿಡಿ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ನಾಯಕ ಒಂದೇ ದಿನದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಪ್ರತಿ ರಾತ್ರಿ ಮಲಗಿದ ಬಳಿಕ ಮತ್ತೆ ಅದೇ ದಿನದಕ್ಕೆ ಏಳುತ್ತಿದ್ದಾನೆ ಆತನ ಪಾಲಿಗೆ ದಿನಾಂಕವೇ ಬದಲಾಗುತ್ತಿಲ್ಲ. ಅದು ಹಾಗೇಕೆ ಆಗಿದೆ ಎಂಬುದೇ ಸಿನಿಮಾದ ಕತೆ. ಸಿನಿಮಾದಲ್ಲಿ ಯಜುವೇಂಧರ್ ಚಾಹಲ್ ಮಾಜಿ ಪತ್ನಿ ಧನಶ್ರೀ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Thu, 8 May 25