ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್ನಲ್ಲಿ ಭದ್ರವಾಗಿ ನೆಲೆ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಅವರ ಮೊದಲ ಬಾಲಿವುಡ್ (Bollywood) ಸಿನಿಮಾ ‘ಗುಡ್ಬೈ’ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈಗ ಅವರ ಎರಡನೇ ಸಿನಿಮಾ ‘ಮಿಷನ್ ಮಜ್ನು’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಗೆಲ್ಲುವುದು ರಶ್ಮಿಕಾ ಪಾಲಿಗೆ ಬಹಳ ಮುಖ್ಯವಾಗಲಿದೆ. ಈ ಸಿನಿಮಾದಲ್ಲಿ ಅವರು ಚಾಲೆಂಜಿಂಗ್ ಆದಂತಹ ಪಾತ್ರ ನಿಭಾಯಿಸಿದ್ದಾರೆ. ಅಂಧ ಯುವತಿಯಾಗಿ ಅವರು ನಟಿಸಿದ್ದಾರೆ. ‘ಮಿಷನ್ ಮಜ್ನು’ (Mission Majnu) ಚಿತ್ರದಲ್ಲಿನ ಪಾತ್ರಕ್ಕಾಗಿ ತಾವು ಮಾಡಿಕೊಂಡ ತಯಾರಿ ಹೇಗಿತ್ತು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ. ಈ ಕುರಿತು ‘ಹಿಂದುಸ್ತಾನ್ ಟೈಮ್ಸ್’ ವರದಿ ಪ್ರಕಟ ಮಾಡಿದೆ.
‘ಓರ್ವ ನಟಿಯಾಗಿ ನಾನು ಈ ರೀತಿಯ ಪಾತ್ರವನ್ನು ಮಾಡಿರಲಿಲ್ಲ. ಇದು ರೆಟ್ರೋ ಶೈಲಿಯ ಸಿನಿಮಾ. ಅದಕ್ಕೆ ತಕ್ಕಂತಹ ಕಾಸ್ಟ್ಯೂಮ್ ಧರಿಸಬೇಕಿತ್ತು. ಪಾತ್ರಕ್ಕಾಗಿ ತರಬೇತಿ ಪಡೆಯಬೇಕಿತ್ತು. ಇದು ನನಗೆ ಹೊಸದಾದ್ದರಿಂದ ಹೇಗೆ ನಿಭಾಯಿಸುತ್ತೇನೋ ಎಂಬ ಪ್ರಶ್ನೆ ನನಗೆ ಮೂಡಿತ್ತು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಇದನ್ನೂ ಓದಿ: Mission Majnu Trailer: ಮತ್ತೆ ಪಾಕಿಸ್ತಾನಿ ಯುವತಿಯ ಪಾತ್ರ ಮಾಡಿದ ರಶ್ಮಿಕಾ ಮಂದಣ್ಣ
ನಟನೆ ಮಾಡುವಾಗ ಕಣ್ಣುಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ. ಎಲ್ಲ ಕಲಾವಿದರಿಗೆ ಅದು ಬಹಳ ಸಹಕಾರಿ ಆಗುತ್ತದೆ. ಆದರೆ ಕಣ್ಣಿಲ್ಲದ ವ್ಯಕ್ತಿಯ ಪಾತ್ರ ಮಾಡುವಾಗ ಅದು ಸಾಧ್ಯವಿಲ್ಲ. ಹಾಗಾಗಿ ಈ ಪಾತ್ರ ರಶ್ಮಿಕಾ ಮಂದಣ್ಣ ಅವರಿಗೆ ಸಖತ್ ಚಾಲೆಂಜಿಂಗ್ ಆಗಿತ್ತು. ಆ ಕುರಿತು ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: Mission Majnu: ‘ಮಿಷನ್ ಮಜ್ನು’ ಟ್ರೇಲರ್: ಸಿದ್ದಾರ್ಥ್ ಮಲ್ಹೋತ್ರ ಪಾತ್ರ ನೋಡಿದವರಿಗೆ ನೆನಪಾಯ್ತು ‘ರಾಜಿ’ ಸಿನಿಮಾ
‘ಜನರ ಕಣ್ಣುಗಳನ್ನು ನೋಡುತ್ತ ಮಾತನಾಡುವ ವ್ಯಕ್ತಿ ನಾನು. ಒಬ್ಬರ ಜೊತೆ ಮಾತನಾಡುವಾಗ ಇನ್ನೊಬ್ಬರನ್ನು ನೋಡಲು ನನಗೆ ಸಾಧ್ಯವಿಲ್ಲ. ಆದರೆ ಈ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ನೋಡದೇ ನಾನು ನಟಿಸಬೇಕಿತ್ತು. ಇದು ತುಂಬ ಕಷ್ಟ ಎನಿಸಿತು. ನಟನೆ ಕಲಿತು ಬಂದವಳು ನಾನಲ್ಲ. ಆ ಕ್ಷಣಗಳನ್ನು ನಾನು ಅನುಭವಿಸಿ ತಿಳಿಯಬೇಕು. ಇದು ನನಗೆ ಚಾಲೆಂಜಿಂಗ್ ಆಗಿತ್ತು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
‘ಮಿಷನ್ ಮಜ್ನು’ ಚಿತ್ರಕ್ಕೆ ಶಾಂತನು ಭಾಗ್ಚಿ ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಪಾಕಿಸ್ತಾನದಲ್ಲಿ ಕೆಲಸ ಮಾಡುವ ಭಾರತದ ಗೂಢಾಚಾರಿಯಾಗಿ ಸಿದ್ದಾರ್ಥ್ ಮಲ್ಹೋತ್ರ ನಟಿಸಿದ್ದಾರೆ. ನೇರವಾಗಿ ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಜನವರಿ 20ರಂದು ನೆಟ್ಫ್ಲಿಕ್ಸ್ ಮೂಲಕ ‘ಮಿಷನ್ ಮಜ್ನು’ ವೀಕ್ಷಣಗೆ ಲಭ್ಯವಾಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಗಮನ ಸೆಳೆದಿದೆ. ಹಲವು ಕಾರಣದಿಂದ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.