ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ದೂರು

Ram Gopal Varma: ರಾಮ್ ಗೋಪಾಲ್ ವರ್ಮಾ ಭಾರತದ ಬಲು ಜನಪ್ರಿಯ ನಿರ್ದೇಶಕ. ಆದರೆ ಇತ್ತೀಚೆಗೆ ಬಿ-ಗ್ರೇಡ್ ಸಿನಿಮಾಗಳು, ವಿವಾದಾತ್ಮಕ ಸಿನಿಮಾಗಳನ್ನೇ ಮಾಡುತ್ತಾ ಕೇಸುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಅವರ ನಿರ್ಮಾಣದ ‘ದಹನಂ’ ವೆಬ್ ಸರಣಿ ಸಂಕಷ್ಟಕ್ಕೆ ಸಿಲುಕಿದೆ. ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸು ದಾಖಲಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ದೂರು
Ram Gopal Varma

Updated on: Sep 18, 2025 | 11:52 AM

ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮಾ ಸಹ ಒಬ್ಬರು. ಕೆಲ ದಶಕಗಳ ಹಿಂದೆ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ವರ್ಮಾ, ಇತ್ತೀಚೆಗಿನ ವರ್ಷಗಳಲ್ಲಿ ಕೇವಲ ಸಾಮಾಜಿಕ ಜಾಲತಾಣಗಳಿಗೆ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಅಥವಾ ಬಿ-ಗ್ರೇಡ್ ಸಿನಿಮಾಗಳನ್ನು ನಿರ್ದೇಶಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಮೊದಲಿನಿಂದಲೂ ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಳ್ಳುವ ಅಭ್ಯಾಸವಿರುವ ವರ್ಮಾ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ವಿರುದ್ಧ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿ, ಅಗಸ್ತ್ಯ ವರ್ಮಾ ನಿರ್ದೇಶನ ಮಾಡಿರುವ ‘ದಹನಂ’ ಹೆಸರಿನ ವೆಬ್ ಸರಣಿ 2022 ರಲ್ಲಿ ಎಂಎಕ್ಸ್ ಪ್ಲೇಯರ್​​ನಲ್ಲಿ ಬಿಡುಗಡೆ ಆಗಿತ್ತು. 1990 ರಲ್ಲಿ ನಡೆದ ನಕ್ಸಲ್ ಹೋರಾಟ ಮತ್ತು ನಕ್ಸಲರನ್ನು ಹತ್ತಿಕ್ಕಲು ಪೊಲೀಸರು ನಡೆದ ಆಪರೇಷನ್​ ಕುರಿತಾದ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿತ್ತು.

ವೆಬ್ ಸರಣಿಯಲ್ಲಿ ನಟಿ ಐಶಾ ಕೊಪ್ಪಿಕರ್ ಅವರು ಐಪಿಎಸ್ ಅಧಿಕಾರಿಣಿ ಅಂಜನಾ ಸಿನ್ಹ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಇದೀಗ ಸ್ವತಃ ಅಂಜನಾ ಸಿನ್ಹ ಅವರೇ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸು ದಾಖಲಿಸಿದ್ದು, ತಮ್ಮ ಅನುಮತಿ ಇಲ್ಲದೆ ತಮ್ಮ ಹೆಸರು, ವೃತ್ತಿಯನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಕಮಲ್ ಹಾಸನ್ ಬಳಿಕ ಕನ್ನಡಿಗರನ್ನು ಕೆಣಕಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

‘ದಹನಂ’ ವೆಬ್ ಸರಣಿ ಹಿಂಸೆ, ಲೈಂಗಿಕತೆಯಿಂದ ಕೂಡಿದ್ದು, ನನ್ನ ಪಾತ್ರವನ್ನು ಅಂಥಹಾ ವೆಬ್ ಸರಣಿಯಲ್ಲಿ ಬಳಸಿಕೊಂಡಿರುವುದು ನನ್ನ ಘನತೆಗೆ ಧಕ್ಕೆ ತಂದಂತಾಗಿದೆ ಎಂದು ಅಂಜನಾ ಆರೋಪಿಸಿದ್ದಾರೆ. 1990ರ ಬ್ಯಾಚ್​​ನ ಅಧಿಕಾರಿ ಆಗಿದ್ದ ಅಂಜನಾ ಅವರು ರಾಯಲಸೀಮೆ ಜಿಲ್ಲೆಗಳಲ್ಲಿ ಎಸ್​​ಪಿ ಆಗಿ ಬಳಿಕ ಡಿಐಜಿ, ಎಡಿಜಿಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಖಡಕ್ ಮಹಿಳಾ ಅಧಿಕಾರಿ ಎಂಬ ಹೆಸರನ್ನು ಅವರು ಪಡೆದುಕೊಂಡಿದ್ದರು. ಇದೀಗ ಅವರು ನಿವೃತ್ತರಾಗಿದ್ದು, ಈಗ ರಾಷ್ಟ್ರೀಯ ಉದ್ಯಮ ಭದ್ರತೆ ಅಕಾಡೆಮಿಯ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ದಹನಂ’ ವೆಬ್ ಸರಣಿ ಮಾಡುವ ಮುಂಚೆ ಆ ತಂಡದ ಯಾರೊಬ್ಬರೂ ಸಹ ತಮ್ಮನ್ನು ಭೇಟಿ ಆಗಿಲ್ಲ, ನನ್ನ ಅನುಮತಿ ಇಲ್ಲದೆ ನನ್ನ ಹೆಸರು, ವೃತ್ತಿಯ ಐಡೆಂಟಿಟಿಯನ್ನು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ ಅಂಜನಾ. ರಾಮ್ ಗೋಪಾಲ್ ವರ್ಮಾ ‘ದಹನಂ’ನ ನಿರ್ಮಾಪಕರಾಗಿದ್ದು, ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ