ಕಮಲ್ ಹಾಸನ್ ಬಳಿಕ ಕನ್ನಡಿಗರನ್ನು ಕೆಣಕಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್ ಅವರು ಕರುನಾಡ ಜನತೆಯ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅವರ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬುದು ಹೊಸ ರೀತಿ ಗೂಂಡಾಗಿರಿ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಆ ಮೂಲಕ ಅವರು ಕೂಡ ಕನ್ನಡಿಗರನ್ನು ಕೆಣಕಿದ್ದಾರೆ.

ನಟ ಕಮಲ್ ಹಾಸನ್ (Kamal Haasan) ವಿರುದ್ಧ ಕರ್ನಾಟಕದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಅವರ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ (Thug Life) ಸಿನಿಮಾ ಜೂನ್ 5ರಂದು ಬಿಡುಗಡೆ ಆಗಬೇಕಿದೆ. ಆದರೆ ಈ ಸಿನಿಮಾವನ್ನು ಕರ್ನಾಟಕದಲ್ಲಿ ತೆರೆ ಕಾಣಿಸಲು ಬಿಡಬಾರದು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಕಮಲ್ ಹಾಸನ್ ಹೇಳಿದ್ದೇ ಈ ವಿವಾದಕ್ಕೆ ಕಾರಣ. ಈಗ ಈ ಎಲ್ಲ ಘಟನೆಗಳ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ಕಮಲ್ ಬಳಿಕ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ಕನ್ನಡಿಗರನ್ನು ಕೆಣಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಆ್ಯಕ್ಟೀವ್ ಆಗಿರುತ್ತಾರೆ. ತಮಗೆ ಸಂಬಂಧ ಇಲ್ಲದ ವಿಚಾರಕ್ಕೂ ಅವರು ಪ್ರತಿಕ್ರಿಯೆ ನೀಡಿ ವಿವಾದ ಸೃಷ್ಟಿಸುತ್ತಾರೆ. ಕರ್ನಾಟಕದಲ್ಲಿ ಕಮಲ್ ಹಾಸನ್ ನಟನೆಯ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿರುವುದನ್ನು ರಾಮ್ ಗೋಪಾಲ್ ವರ್ಮಾ ಅವರು ಖಂಡಿಸಿದ್ದಾರೆ.
‘ಅಸಹಿಷ್ಣುತೆಯೇ ಪ್ರಜಾಪ್ರಭುತ್ವದ ಹೊಸ ಹೆಸರು. ಸತ್ಯಾಂಶ ಏನೇ ಇದ್ದರೂ ಕೂಡ, ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಬೆದರಿಕೆ ಹಾಕುವುದು ಹೊಸ ಥರದ ಗೂಂಡಾಗಿರಿ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಆದರೆ ಕೂಡಲೇ ಅದನ್ನು ಅವರು ಡಿಲೀಟ್ ಮಾಡಿದ್ದಾರೆ.
ಸದ್ಯಕ್ಕಂತೂ ಕಮಲ್ ಹಾಸನ್ ಅವರು ಕ್ಷಮೆ ಕೇಳುವ ಮನಸ್ಸು ಮಾಡಿಲ್ಲ. ಸಿನಿಮಾ ಬ್ಯಾನ್ ಮಾಡಬಾರದು ಎಂದು ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಕರ್ನಾಟಕದಲ್ಲಿ ಅವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಭಾಷೆಯ ವಿಷಯ ಆದ್ದರಿಂದ ಅನೇಕ ಸೆಲೆಬ್ರಿಟಿಗಳು ಕೂಡ ಕಮಲ್ ಹಾಸನ್ ಅವರನ್ನು ಖಂಡಿಸುತ್ತಿದ್ದಾರೆ. ರಚಿತಾ ರಾಮ್, ಸಾಧು ಕೋಕಿಲ, ಸುಮಲತಾ ಅಂಬರೀಷ್, ಸಾ.ರಾ. ಗೋವಿಂದು, ವಸಿಷ್ಠ ಸಿಂಹ ಮುಂತಾದವರು ಕಮಲ್ ಹೇಳಿಕೆಯನ್ನು ವಿರೋಧಿಸಿದ್ದಾರೆ.
ಇದನ್ನೂ ಓದಿ: ನಟಿ ಕಿಯಾರಾ ಬಿಕಿನಿ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ರಾಮ್ ಗೋಪಾಲ್ ವರ್ಮಾ
‘ಥಗ್ ಲೈಫ್’ ಸಿನಿಮಾಗೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣದಲ್ಲಿ ಕಮಲ್ ಹಾಸನ್ ಕೂಡ ಕೈ ಜೋಡಿಸಿದ್ದಾರೆ. ದೇಶದ ಪ್ರಮುಖ ನಗರಗಳಿಗೆ ತೆರಳಿ ಕಮಲ್ ಹಾಸನ್ ಅವರು ಪ್ರಚಾರ ಮಾಡಿದ್ದಾರೆ. ಆದರೆ ಕನ್ನಡದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾಗೆ ವಿಘ್ನ ಎದುರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








