ಕಮಲ್ ಹಾಸನ್ ವಿವಾದ: ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡುತ್ತೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಿಎಂ ಭರವಸೆ
ಕನ್ನಡದ ಕುರಿತಾಗಿ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ ಸದ್ಯ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲೆಡೆ ಕ್ಷಮೆಗೆ ಒತ್ತಾಯ ಕೇಳಿಬಂದಿದೆ. ಈ ಮಧ್ಯೆ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮಾಡದಂತೆ ಮನವಿ ಮಾಡಿದೆ. ಆದರೆ ಈ ವೇಳೆ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು, ಜೂನ್ 02: ತಮಿಳಿಂದ ಕನ್ನಡ ಹುಟ್ಟಿದೆ ಅಂತೇಳಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್ (Kamal Haasan) ಅಭಿನಯದ ‘ಥಗ್ ಲೈಫ್’ ಚಿತ್ರದ ಮೇಲೆ ಬ್ಯಾನ್ ತೂಗುಗತ್ತಿ ನೇತಾಡುತ್ತಿದೆ. ಸದ್ಯ ಈ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಿಂದ ಇಂದು ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಭೇಟಿ ಮಾಡಿದ್ದು, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡದಿರಲು ಮನವಿ ಮಾಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡುತ್ತೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಜೂನ್ 5ಕ್ಕೆ ಎಲ್ಲೆಡೆ ರಿಲೀಸ್ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಸದ್ಯ ಕಾನೂನಿನಲ್ಲಿ ಸಿನಿಮಾ ನಿಷೇಧಿಸಲು ಅವಕಾಶ ಇಲ್ಲದಿರುವ ಹಿನ್ನೆಲೆ ಚಲನಚಿತ್ರ ವಾಣಿಜ್ಯ ಮಂಡಳಿ ರಾಜ್ಯ ಸರ್ಕಾರದ ಬೆಂಬಲ ಕೋರಿದೆ.
ಇದನ್ನೂ ಓದಿ: ಕ್ಷಮೆ ಕೇಳಲು ಕಮಲ್ ಹಾಸನ್ಗೆ ಮತ್ತೆ 24 ಗಂಟೆ ಟೈಮ್ ಕೊಟ್ಟ ಫಿಲ್ಮ್ ಚೇಂಬರ್
ಈ ನಿಟ್ಟಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ರಾಜ್ಯದಲ್ಲಿ ಸ್ವಯಂಪ್ರೇರಿತವಾಗಿ ‘ಥಗ್ ಲೈಫ್’ ಪ್ರದರ್ಶನ ಮಾಡದಂತೆ ಮನವಿ ಮಾಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡುತ್ತೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದು, ಕನ್ನಡದ ವಿಚಾರವಾಗಿ ಎಲ್ಲರೂ ಗಟ್ಟಿಯಾಗಿ ನಿಲ್ಲುವಂತೆ ಸೂಚಿಸಿದ್ದಾರೆ. ಇತ್ತ ವಿತರಕರು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಕ್ಷಮೆ ಕೇಳದಿದರೆ ಚಿತ್ರ ಬಿಡುಗಡೆ ಇಲ್ಲ ಎಂದ ಫಿಲಂ ಚೇಂಬರ್ ಅಧ್ಯಕ್ಷ
ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಪ್ರತಿಕ್ರಿಯಿಸಿದ್ದು, ಕ್ಷಮೆ ಕೇಳದಿದರೆ ಚಿತ್ರ ಬಿಡುಗಡೆಗೆ ಅವಕಾಶ ಕೊಡಲ್ಲ ಅಂತಾ ಹೇಳಿದ್ದಾರೆ. ಒಂದು ವೇಳೆ ಕ್ಷಮೆ ಕೇಳಿದರೂ ಎಲ್ಲರು ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಹಾಗೆಯೇ ಇಂದು ನಿರ್ಧಾರ ತಿಳಿಸಬೇಕಿದ್ದ ಚಿತ್ರ ವಿತರಕರು ನಾಳೆಯವರೆಗೂ ಸಮಯ ಕೇಳಿದ್ದಾರೆ ಅಂತಾ ನರಸಿಂಹಲು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪರ್ಫೆಕ್ಟ್ ಟೈಮಿಂಗ್: ಕಮಲ್ ಹಾಸನ್ಗೆ ‘ಕನ್ನಡ’ ಪುಸ್ತಕ ನೀಡಿದ ರಂಜನಿ ರಾಘವನ್
ಇತ್ತ ವಿದೇಶಕ್ಕೆ ಹೋಗಿರುವ ಕಮಲ್ ಹಾಸನ್ ನಾಳೆ ಚೆನ್ನೈ ಆಗಮಿಸುತ್ತಿದ್ದು, ವಿತರಕರು ಕಮಲ್ ಹಾಸನ್‌ರನ್ನ ಭೇಟಿಯಾಗಲಿದ್ದಾರೆ. ಬಳಿಕ ನಿರ್ಧಾರ ತಿಳಿಸುವುದಾಗಿ ವಿತರಕರು ಫಿಲಂ ಚೇಂಬರ್‌ಗೆ ಮಾಹಿತಿ ನೀಡಿದ್ದಾರೆ. ನಾಳೆ ಕಮಲ್ ಹಾಸನ್ ಕ್ಷಮೆ ಕೇಳುತ್ತಾರಾ, ಚಿತ್ರ ಬಿಡುಗಡೆಯಾಗುತ್ತಾ? ಅನ್ನೋದು ಕುತೂಹಲ ಮೂಡಿಸಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:34 pm, Mon, 2 June 25







