ಕನ್ನಡದ ಇತಿಹಾಸದ ಬಗ್ಗೆ ವಿಷ್ಣುವರ್ಧನ್ ಅದೆಷ್ಟು ಸುಂದರವಾಗಿ ಮಾತನಾಡಿದ್ದರು ನೋಡಿ; ಇಲ್ಲಿದೆ ವಿಡಿಯೋ
ಕಮಲ್ ಹಾಸನ್ ಅವರ ಹೇಳಿಕೆಯಿಂದ ಕನ್ನಡದ ಹುಟ್ಟು ಮತ್ತು ಅದರ ಇತಿಹಾಸದ ಬಗ್ಗೆ ಚರ್ಚೆ ನಡೆದಿದೆ. ವಿಷ್ಣುವರ್ಧನ್ ಅವರ ಒಂದು ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಮ್ಮ ಆಳವಾದ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಸದ್ಯ ಕನ್ನಡದ ಹುಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಆಗಿದ್ದು ಕಾಲಿವುಡ್ ನಟ ಕಮಲ್ ಹಾಸನ್ (Kamal Haasan). ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಹೇಳುವ ಮೂಲಕ ಸಾಕಷ್ಟು ಚರ್ಚೆ ಹುಟ್ಟುಹಾಕಿದರು. ಈ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ವಿಷ್ಣುವರ್ಧನ್ ಸಿನಿಮಾದ ಕ್ಲಿಪ್ ಒಂದು ವೈರಲ್ ಆಗಿದೆ. ಈ ಕ್ಲಿಪ್ನಲ್ಲಿ ಅವರು ಕನ್ನಡದ ಇತಿಹಾಸದ ಬಗ್ಗೆ ಮಾತನಾಡಿದ್ದರು.
ವಿಷ್ಣುವರ್ಧನ್ ಅವರು ಕನ್ನಡದ ಪರ ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ. ಕನ್ನಡದ ನಾಡು-ನುಡಿ ಎಂಬುದು ಬಂದಾಗ ಅವರು ಕನ್ನಡದ ಪರವಾಗಿ ನಿಂತಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸಾಕಷ್ಟು ಬಾರಿ ವೈರಲ್ ಆಗಿವೆ. ಅದೇ ರೀತಿ ಸಿನಿಮಾಗಳಲ್ಲೂ ವಿಷ್ಣುವರ್ಧನ್ ಕನ್ನಡ ಪರ ಧ್ವನಿ ಎತ್ತಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ. ಸದ್ಯದ ಸಂದರ್ಭಕ್ಕೆ ಈ ವಿಡಿಯೋ ಸರಿ ಹೊಂದುವ ರೀತಿಯಲ್ಲಿದೆ.
1997ರಲ್ಲಿ ರಿಲೀಸ್ ಆದ ‘ಎಲ್ಲರಂತಲ್ಲ ನನ್ನ ಗಂಡ’ ಸಿನಿಮಾದಲ್ಲಿ ವಿಷ್ಣುವರ್ಧನ್, ಪ್ರೇಮಾ, ಉಮಾಶ್ರೀ, ತಾರಾ ಮೊದಲಾದವರು ನಟಿಸಿದ್ದರು. ಈ ಚಿತ್ರಕ್ಕೆ ಎಸ್. ಉಮೇಶ್ ನಿರ್ದೇಶನ ಇತ್ತು. ಸಂದರ್ಶನಕ್ಕಾಗಿ ಬರೋ ವಿಷ್ಣುವರ್ಧನ್ಗೆ ಕನ್ನಡದ ಬಗ್ಗೆ ಹಾಗೂ ಬೆಂಗಳೂರಿನ ಬಗ್ಗೆ, ಕರ್ನಾಟಕದ ಇತಿಹಾಸದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ ಈಗಿನ ಜನರೇಶನ್ ಮಕ್ಕಳಿಗೆ ಒಂದೊಳ್ಳೆಯ ವಿಕಿಪೀಡಿಯಾ ರೀತಿಯಲ್ಲಿ ಕಾಣುತ್ತದೆ.
ಆಗಿನ ಕಾಲದಲ್ಲೇ ಬೆಂಗಳೂರಿಗೆ ಪರಭಾಷಿಗರು ಬಂದು ನೆಲೆಸುತ್ತಿದ್ದರು. ಆ ಸಮಸ್ಯೆ ಈಗ ದೊಡ್ಡದಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಆಗಿನ ಕಾಲದಲ್ಲೇ ಎಚ್ಚರಿಸಿದ್ದರು. ಬ್ರೀಟಿಷರ ವಶದ ಬಗ್ಗೆ ಮಾತನಾಡುತ್ತಾ, ‘ಬೆಂಗಳೂರನ್ನು ಹಲವು ಭಾಷೆಯವರು ವಶ ಮಾಡಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಬೆಂಗಳೂರಲ್ಲಿ ಕನ್ನಡಿಗರು ಎಲ್ಲಿದ್ದಾರೆ ಎಂಬುದನ್ನು ದುರ್ಬೀನ್ ಹಾಕಿ ಹುಡುಕಬೇಕಾಗುತ್ತದೆ’ ಎಂದಿದ್ದರು. ಅದು ಈಗ ನಿಜ ಎನಿಸುತ್ತಿದೆ.
ಇದನ್ನೂ ಓದಿ: ತಮಿಳು ಕನ್ನಡದ ತಾಯಿ ಭಾಷೆ ಅಲ್ಲ, ಸೋದರ ಭಾಷೆ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ವಿಷ್ಣುವರ್ಧನ್, ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ಈ ರೀತಿಯ ಅನೇಕ ಉದಾಹರಣೆಗಳು ಸಿಗುತ್ತವೆ. ಆದರೆ, ಇತ್ತೀಚಿನ ಸಿನಿಮಾಗಳಲ್ಲಿ ಇದು ಕಡಿಮೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








