
ಟಾಲಿವುಡ್ ಹೀರೋಗಳಾದ ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆ ನಿಭಾಯಿಸಿದ ‘ಆರ್ಆರ್ಆರ್’ ಸಿನಿಮಾ (RRR Movie) ಚಿತ್ರಮಂದಿರದಲ್ಲಿ ಬಹುದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಅನೇಕ. ಈಗ ‘ಆರ್ಆರ್ಆರ್’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮೇ 20ರಂದು ಪ್ರೇಕ್ಷಕರು ಮನೆಯಲ್ಲೇ ಕುಳಿತು ಈ ಸಿನಿಮಾ ವೀಕ್ಷಿಸಬಹುದು. ಜೀ5 ಒಟಿಟಿ (OTT Platform) ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. ಈ ಮೊದಲು ಒಟಿಟಿ ಪ್ರಸಾರಕ್ಕೆ ಒಂದಿಷ್ಟು ಷರತ್ತು ಹಾಕಲಾಗಿತ್ತು. ಈಗಾಗಲೇ ಜೀ5 ಚಂದಾದಾರರಾಗಿದ್ದರೂ ಕೂಡ ಹೆಚ್ಚುವರಿ ಹಣ ನೀಡಿ ‘ಆರ್ಆರ್ಆರ್’ ಸಿನಿಮಾವನ್ನು ವೀಕ್ಷಿಸಬೇಕು ಎಂದು ಹೇಳಲಾಗಿತ್ತು. ಆದರೆ ಆ ನಿರ್ಧಾರದಿಂದ ಜೀ5 (Zee5) ಹಿಂದೆ ಸರಿದಿದೆ. ಜನರಿಂದ ತೀವ್ರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಹೊಸ ಸುದ್ದಿ ನೀಡಲಾಗಿದೆ. ಈಗಾಗಲೇ ಸಬ್ಸ್ಕ್ರಿಪ್ಷನ್ ಹೊಂದಿರುವವರು ಯಾವುದೇ ಹೆಚ್ಚುವರಿ ಹಣ ನೀಡದೇ ‘ಆರ್ಆರ್ಆರ್’ ಸಿನಿಮಾವನ್ನು ನೋಡಬಹುದು ಎಂದು ತಿಳಿಸಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಖುಷಿ ಆಗಿದ್ದಾರೆ.
‘ಆರ್ಆರ್ಆರ್’ ಸಿನಿಮಾದ ಅಸಲಿ ಮಜಾ ಇರುವುದೇ ಅದರ ಮೇಕಿಂಗ್ನಲ್ಲಿ. ಅದ್ದೂರಿಯಾಗಿ ಮೂಡಿಬಂದಿರುವ ದೃಶ್ಯಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಈಗ ಒಟಿಟಿಯಲ್ಲೂ 4K ರೆಸೊಲ್ಯೂಷನ್ ಲಭ್ಯವಾಗುತ್ತಿದೆ. 5.1 ಸೌಂಡ್ ಕೂಡ ಇರಲಿದೆ. ಇದು ಒಟಿಟಿ ಪ್ರೇಕ್ಷಕರಿಗೆ ಇನ್ನಷ್ಟು ಥ್ರಿಲ್ ನೀಡಿದೆ. ಮೇ 19ರ ಮಧ್ಯರಾತ್ರಿಯಿಂದಲೇ ಜೀ5ನಲ್ಲಿ ‘ಆರ್ಆರ್ಆರ್’ ಪ್ರಸಾರ ಆರಂಭ ಆಗಲಿದೆ.
ಇದನ್ನೂ ಓದಿ: ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?
ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಆರ್ಆರ್ಆರ್’ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. 3ಡಿ ಅವತರಣಿಕೆಯಲ್ಲೂ ಈ ಸಿನಿಮಾ ತೆರೆಕಂಡಿತ್ತು. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ನಟಿ ಆಲಿಯಾ ಭಟ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟರು. ರಾಮ್ ಚರಣ್ಗೆ ಜೋಡಿಯಾಗಿ ಅವರು ಕಾಣಿಸಿಕೊಂಡರು. ಇನ್ನು ಅಜಯ್ ದೇವಗನ್ ಅವರ ಪಾತ್ರಕ್ಕೆ ಸ್ಕ್ರೀನ್ ಸ್ಪೇಸ್ ಕಡಿಮೆ ಆಗಿದ್ದರೂ ಕೂಡ ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಹಾಗಾಗಿ ಉತ್ತರ ಭಾರತದಲ್ಲಿ ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡಿದರು. ನೆಟ್ಫ್ಲಿಕ್ಸ್ ಮೂಲಕ ‘ಆರ್ಆರ್ಆರ್’ ಹಿಂದಿ ವರ್ಷನ್ ಪ್ರಸಾರ ಆಗಲಿದೆ.
ಜ್ಯೂ. ಎನ್ಟಿಆರ್ ಜನ್ಮದಿನಕ್ಕೆ ಒಟಿಟಿ ರಿಲೀಸ್:
ಮೇ 20ರಂದು ಜ್ಯೂ. ಎನ್ಟಿಆರ್ ಜನ್ಮದಿನ. ಆ ಪ್ರಯುಕ್ತವೇ ‘ಆರ್ಆರ್ಆರ್’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆರಂಭಿಸುತ್ತಿರುವುದಕ್ಕೆ ಫ್ಯಾನ್ಸ್ ಖುಷಿ ಆಗಿದ್ದಾರೆ. ‘ಆರ್ಆರ್ಆರ್’ ಸಿನಿಮಾದಲ್ಲಿ ಕೊಮರಮ್ ಭೀಮ್ ಎಂಬ ಪಾತ್ರದಲ್ಲಿ ಜ್ಯೂ. ಎನ್ಟಿಆರ್ ನಟಿಸಿದ್ದಾರೆ. ಅವರ ಜೊತೆ ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದಾರೆ. ಇಬ್ಬರ ಪಾತ್ರಗಳು ಕೂಡ ಈ ಸಿನಿಮಾದಲ್ಲಿ ಸಖತ್ ಹೈಲೈಟ್ ಆಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ ರೀತಿ ಕಂಡು ಬಾಲಿವುಡ್ ಮಂದಿ ಕೂಡ ನಿಬ್ಬೆರಗಾಗಿದ್ದಾರೆ. ರಾಜಮೌಳಿ ಸೋಲಿಲ್ಲದ ಸರದಾರ ಎಂಬುದು ಈ ಸಿನಿಮಾ ಮೂಲಕ ಮತೊಮ್ಮೆ ಸಾಬೀತಾಗಿದೆ. ‘ಆರ್ಆರ್ಆರ್’ ಚಿತ್ರಕ್ಕೆ ಬಂಡವಾಳ ಹೂಡಿದ ‘ಡಿವಿವಿ ಎಂಟರ್ಟೇನ್ಮೆಂಟ್’ ಸಂಸ್ಥೆ ಭರ್ಜರಿ ಲಾಭ ಮಾಡಿಕೊಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ