ನಟ ಸಲ್ಮಾನ್ ಖಾನ್ ಅವರ ಬಳಿ ಬರೋಬ್ಬರಿ 2900 ಕೋಟಿ ರೂಪಾಯಿಗೂ ಅಧಿಕ ಹಣ ಇದೆ. ಭಾರತದ ಶ್ರೀಮಂತ ನಟರಲ್ಲಿ ಅವರು ಕೂಡ ಒಬ್ಬರು. ಸಲ್ಮಾನ್ ಖಾನ್ ಕುಟುಂಬದ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಆದರೆ ಒಂದು ಕಾಲದಲ್ಲಿ ಅವರ ಫ್ಯಾಮಿಲಿ ಬಡತನದಲ್ಲಿತ್ತು! ಹೌದು, ಈಗ ಬಹುಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಗಳನ್ನು ಹೊಂದಿರುವ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಕೇವಲ 55 ರೂಪಾಯಿ ಬಾಡಿಗೆಯ ರೂಮ್ನಲ್ಲಿ ವಾಸವಾಗಿದ್ದರು. ‘ಆ್ಯಂಗ್ರಿ ಯಂಗ್ ಮೆನ್’ ಸಾಕ್ಷ್ಯಚಿತ್ರದಲ್ಲಿ ಅವರು ಈ ವಿಷಯ ಬಹಿರಂಗ ಮಾಡಿದ್ದಾರೆ.
ಬಾಲಿವುಡ್ನ ಅನೇಕ ಸೂಪರ್ ಹಿಟ್ ಸಿನಿಮಾಗಳ ಹಿಂದೆ ಬರಹಗಾರನಾಗಿ ಕೆಲಸ ಮಾಡಿದವರು ಸಲೀಂ ಖಾನ್. ಅವರ ಜೊತೆ ಜಾವೇದ್ ಅಖ್ತರ್ ಕೂಡ ಕೈ ಜೋಡಿಸಿದ್ದರು. ‘ಶೋಲೆ’ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳ ಕಥೆ-ಚಿತ್ರಕಥೆ ಮೂಡಿಬಂದಿದ್ದು ಇದೇ ಸಲೀಂ-ಜಾವೇದ್ ಜೋಡಿಯ ಲೇಖನದಲ್ಲಿ. ಈ ಸ್ಟಾರ್ ಬರಹಗಾರರ ಜೀವನ ಮತ್ತು ಸಾಧನೆ ಬಗ್ಗೆ ‘ಆ್ಯಂಗ್ರಿ ಯಂಗ್ ಮೆನ್’ ಡಾಕ್ಯುಮೆಂಟರಿಯಲ್ಲಿ ವಿವರಿಸಲಾಗಿದೆ.
ಇಂದೋರ್ನಿಂದ ಮುಂಬೈಗೆ ಬಂದಿದ್ದ ಸಲೀಂ ಖಾನ್ ಅವರು ಕಷ್ಟ ದಿನಗಳನ್ನು ಕಂಡಿದ್ದರು. ಅವರು ಮುಂಬೈಗೆ ಹೋಗುವುದು ಅವರ ಅಣ್ಣನಿಗೆ ಇಷ್ಟ ಇರಲಿಲ್ಲ. ‘ನೀವು ಖಂಡಿತಾ ವಾಪಸ್ ಓಡಿ ಬರುತ್ತೀಯ’ ಎಂದು ಅಣ್ಣ ಹೇಳಿದ್ದರು ಸಲೀಂ ಅವರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಹಾಗಾಗಿ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ, ವಾಪಸ್ ಮುಂಬೈ ಬಿಟ್ಟು ಮನೆಗೆ ಹೋಗಬಾರದು ಎಂಬುದು ಸಲೀಂ ಹಠವಾಗಿತ್ತು.
ಇದನ್ನೂ ಓದಿ: ಬಾಲಿವುಡ್ ದಿಗ್ಗಜರ ಸಾಕ್ಷ್ಯಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್; ಇದು ಯಶಸ್ಸು
ಆರಂಭದಲ್ಲಿ ತಮಗೆ ಸಿಕ್ಕ ಎಲ್ಲ ಅವಕಾಶಗಳನ್ನು ಸಲೀಂ ಖಾನ್ ಒಪ್ಪಿಕೊಂಡರು. ನಂತರ ತಮಗೆ ನಟನೆಗಿಂತಲೂ ಕ್ಯಾಮೆರಾ ಹಿಂದೆ ಕೆಲಸ ಮಾಡುವ ಸಾಮರ್ಥ್ಯ ಚೆನ್ನಾಗಿದೆ ಎಂಬುದು ಅವರಿಗೆ ತಿಳಿಯಿತು. ಹಾಗಾಗಿ ಕಥೆ-ಚಿತ್ರಕಥೆ ಬರಹಗಾರನಾಗಿ ಮುಂದುವರಿಯಲು ಅವರು ನಿರ್ಧರಿಸಿದರು. ಜಾವೇದ್ ಅಖ್ತರ್ ಜೊತೆ ಸೇರಿಕೊಂಡು ಸಲೀಂ ಖಾನ್ ಅವರು ‘ಶೋಲೆ’, ‘ದೀವಾರ್’, ‘ಝಂಜೀರ್’, ‘ಡಾನ್’, ‘ಮಿಸ್ಟರ್ ಇಂಡಿಯಾ’ ಮುಂತಾದ ಸಿನಿಮಾಗಳಿಗೆ ಕಥೆ ಬರೆದರು. ಕನ್ನಡದ ‘ರಾಜ ನನ್ನ ರಾಜ’ ಮತ್ತು ‘ಪ್ರೇಮದ ಕಾಣಿಕೆ’ ಸಿನಿಮಾಗಳಿಗೆ ಕಥೆ ಬರೆದಿದ್ದು ಕೂಡ ಸಲೀಂ ಮತ್ತು ಜಾವೇದ್.
‘ಆ್ಯಂಗ್ರಿ ಯಂಗ್ ಮೆನ್’ ಸಾಕ್ಷ್ಯಚಿತ್ರದಲ್ಲಿ ಯಶ್, ಸಲ್ಮಾನ್ ಖಾನ್, ಕರಣ್ ಜೋಹರ್, ಆಮಿರ್ ಖಾನ್ ಮುಂತಾದ ನಟರ ಸಂದರ್ಶನ ಇದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಆಗಸ್ಟ್ 20ರಂದು ಈ ಡಾಕ್ಯುಮೆಂಟರಿ ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.