ಒಟಿಟಿಗೆ ಬಂತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಎ’, ಸೈಡ್ ಬಿ ಬಿಡುಗಡೆ ಉಳಿದ ದಿನಗಳೆಷ್ಟು?
Sapta Sagaradaache ello: ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ನಟಿಸಿ ಹೇಮಂತ್ ರಾವ್ ನಿರ್ದೇಶನ ಮಾಡಿರುವ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಒಟಿಟಿಗೆ ಬಂದಿದೆ. ಅಂದಹಾಗೆ ಸಿನಿಮಾದ ಎರಡನೇ ಭಾಗ ಬಿಡುಗಡೆಗೆ ಇನ್ನೆಷ್ಟು ದಿನ ಬಾಕಿ ಇದೆ?
ರಕ್ಷಿತ್ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್ (Rukmini Vasanth) ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಬರೀ ಮಾಸ್-ಮಸಾಲಾ, ಹೊಡಿ-ಬಡಿ ಚಿತ್ರಗಳೇ ಒಂದರ ಹಿಂದೊಂದು ಬಿಡುಗಡೆ ಆಗಿ, ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ನವಿರಾದ ಪ್ರೇಮಕತೆ ಹೊಂದಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಸಹೃದಯ ಪ್ರೇಕ್ಷಕರ ಎದೆಗೊತ್ತಿಕೊಂಡಿದ್ದಾನೆ. ಸಿನಿಮಾದ ಬಗ್ಗೆ ಹಲವರು ಬಹಳ ಒಳ್ಳೆಯ ವಿಮರ್ಶೆಗಳನ್ನು ನೀಡಿದ್ದಾರೆ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು, ಹೆಚ್ಚಿನ ಜನರನ್ನು ತಲುಪುವ ನಿರೀಕ್ಷೆ ಹುಟ್ಟಿಸಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸಿನಿಮಾವು ಮೂಲ ಭಾಷೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ತಮ್ಮ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿರುವ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ರಕ್ಷಿತ್ ಶೆಟ್ಟಿ, ‘ಇನ್ನೊಮ್ಮೆ ಮನು ಹಾಗೂ ಪ್ರಿಯಾರ ಜಗತ್ತಿನ ಭಾಗವಾಗಿ. ‘ಸಪ್ತ ಸಾಗರದಾಚೆ ಎಲ್ಲೊ’ ಸೈಡ್ ಎ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ” ಎಂದಿದ್ದಾರೆ.
ಪ್ರತ್ಯೇಕ ಪ್ರಚಾರವಿಲ್ಲದೆ ಏಕಾ-ಏಕಿ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ತೆಲುಗು ಆವೃತ್ತಿ ಹೈದರಾಬಾದ್ ಹಾಗೂ ಇನ್ನೂ ಕೆಲವು ನಗರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ಅದಾಗಲೇ ಸಿನಿಮಾವನ್ನು ಒಟಿಟಿಗೆ ತರಲಾಗಿದೆ. ಸೈಡ್ ಬಿ ಸಿನಿಮಾದ ಬಿಡುಗಡೆ ದಿನ ಹೆಚ್ಚೇನು ದೂರವಿಲ್ಲದ ಕಾರಣದಿಂದ ಚಿತ್ರತಂಡ ಈ ನಿರ್ಧಾರ ತಳೆದಿರುವ ಸಾಧ್ಯತೆ ಇದೆ.
ಇದನ್ನೂ ಓದಿ:ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿ ರುಕ್ಮಿಣಿ ವಸಂತ್ಗೆ ಯಾರ್ಯಾರು ಫೋನ್ ಮಾಡಿದ್ದರು?
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾವು ಅಕ್ಟೋಬರ್ 27 ರಂದು ಬಿಡುಗಡೆ ಆಗಲಿದೆ. ಮೊದಲ ಭಾಗದಲ್ಲಿ ನವಿರು ಪ್ರೇಮಕತೆ ಹೊಂದಿದ್ದ ಸಿನಿಮಾ ಎರಡನೇ ಭಾಗದಲ್ಲಿ ತುಸು ಆಕ್ಷನ್ ಎಲಿಮೆಂಟ್ಗಳನ್ನು ಹೊಂದಿರಲಿದೆ ಎನ್ನುವ ನಿರೀಕ್ಷೆಯನ್ನು ಸಿನಿಮಾ ಪೋಸ್ಟರ್ ಹುಟ್ಟುಹಾಕಿದೆ. ಮೊದಲ ಭಾಗದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ ಎರಡನೇ ಭಾಗದಲ್ಲಿ ಲುಕ್ ಬದಲಾಯಿಸಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ನಟಿ ಚೈತ್ರಾ ಆಚಾರ್ ನಾಯಕಿ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ