ನಟ ಸತೀಶ್ ನೀನಾಸಂ ಅವರು (Sathish Ninasam) ಕನ್ನಡದ ಬೇಡಿಕೆಯ ಹೀರೋಗಳಲ್ಲಿ ಒಬ್ಬರು. ಹಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ಗೋಧ್ರಾ’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಇದೆ. ಈ ಚಿತ್ರ ಟೈಟಲ್ ಕಾರಣಕ್ಕೂ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಆದರೆ, ಈ ಟೈಟಲ್ಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಈ ಕಾರಣಕ್ಕೆ ಚಿತ್ರತಂಡ ಸಿನಿಮಾ ಟೈಟಲ್ ಬದಲಿಸಿದೆ. ಈ ಚಿತ್ರಕ್ಕೆ ‘ಗೋಧ್ರಾ’ ಬದಲು ‘ಡಿಯರ್ ವಿಕ್ರಂ’ (Dear Vikram Movie) ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಮೂಲಕ ಎಲ್ಲಾ ಚರ್ಚೆಗಳಿಗೆ ತೆರೆ ಎಳೆಯಲಾಗಿದೆ.
‘ಡಿಯರ್ ವಿಕ್ರಂ’ ಸಿನಿಮಾ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಕಥೆ. ಸಿನಿಮಾದ ಪ್ರತಿ ಹಂತದಲ್ಲೂ ಸಮಾಜದ ಹುಳುಕನ್ನು ಪ್ರಶ್ನಿಸುವ ಕೆಲಸ ಆಗಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಈ ಸಿನಿಮಾದಲ್ಲಿ ಪ್ರಸ್ತುತ ರಾಜಕೀಯ ಅರಾಜಕತೆ ಬಗ್ಗೆಯೂ ಹೇಳಲಾಗುತ್ತಿದೆ. ‘ಗೋಧ್ರಾ’ ಶೀರ್ಷಿಕೆ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿತ್ತು. ಹೀಗಾಗಿ ಟೈಟಲ್ ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ.
‘ನಮ್ಮ ಸಿನಿಮಾ ಯಾವುದೇ ನೈಜ ಘಟನೆಗೆ ಸಂಬಂಧಿಸಿಲ್ಲ ಅಥವಾ ಯಾವುದೇ ಪ್ರದೇಶವನ್ನು ಆಧರಿಸಿ ಮಾಡಿದ ಸಿನಿಮಾ ಅಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಅನ್ನೋ ಕಾರಣದಿಂದ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಿದ್ದೇವೆ. ಗೋಧ್ರಾ ಸಿನಿಮಾ ‘ಡಿಯರ್ ವಿಕ್ರಂ’ ಆಗಿ ಬದಲಾಗಿದೆ’ ಎಂದು ಚಿತ್ರತತಂಡ ಮಾಹಿತಿ ನೀಡಿದೆ.
ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ತೆರೆಗೆ ಬಂದ ‘ರುಸ್ತುಂ’ ಬಳಿಕ ಶ್ರದ್ಧಾ ಶ್ರೀನಾಥ್ ಪರಭಾಷೆಯಲ್ಲಿ ಬ್ಯುಸಿ ಆದರು. ಈ ಚಿತ್ರದ ಮೂಲಕ ಶ್ರದ್ಧಾ ಶ್ರೀನಾಥ್ ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್, ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕೆಪಿ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ನಂದೀಶ ಅವರಿಗೆ ಇದು ಚೊಚ್ಚಲ ನಿರ್ದೇಶನ.
ಇದನ್ನೂ ಓದಿ: ‘ನಾನೇ ಕಥೆ ಹುಡುಕಿಕೊಂಡು ಹೋದೆ’; ‘ಅಶೋಕ ಬ್ಲೇಡ್’ ಸಿನಿಮಾ ಬಗ್ಗೆ ನೀನಾಸಂ ಸತೀಶ್ ಮಾತು
ಇತ್ತೀಚೆಗೆ ಒಟಿಟಿ ಅಬ್ಬರ ಜೋರಾಗಿದೆ. ಹಲವು ಸಿನಿಮಾಗಳು ನೇರವಾಗಿ ಒಟಿಟಿಗೆ ಕಾಲಿಡುತ್ತಿದೆ. ‘ಗೋಧ್ರಾ’ ಸಿನಿಮಾ ಕೂಡ ನೇರವಾಗಿ ಒಟಿಟಿಗೆ ಕಾಲಿಡುತ್ತಿದೆ. ವೂಟ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಸಾರ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Thu, 9 June 22