ಒಟಿಟಿಗೆ ಬಂತು ‘ಸಿಂಗಂ ಅಗೇನ್’; ಚಂದಾದಾರರೂ ದುಡ್ಡು ಕೊಟ್ಟು ನೋಡಬೇಕು

ಅದ್ದೂರಿಯಾಗಿ ಸಿನಿಮಾ ಮಾಡೋದರಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಫೇಮಸ್​. ಈ ವರ್ಷ ಅವರು ನಿರ್ದೇಶಿಸಿದ ‘ಸಿಂಗಂ ಅಗೇನ್’ ಸಿನಿಮಾ ಚಿತ್ರಮಂದಿರದಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿತು. ಈಗ ಈ ಚಿತ್ರ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಚಂದಾದಾರರು ಆಗಿದ್ದರೂ ಕೂಡ ಸದ್ಯಕ್ಕೆ ಈ ಸಿನಿಮಾವನ್ನು ನೀವು ದುಡ್ಡು ಕೊಟ್ಟೇ ನೋಡಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ..

ಒಟಿಟಿಗೆ ಬಂತು ‘ಸಿಂಗಂ ಅಗೇನ್’; ಚಂದಾದಾರರೂ ದುಡ್ಡು ಕೊಟ್ಟು ನೋಡಬೇಕು
Singham Again Poster

Updated on: Dec 20, 2024 | 2:17 PM

ವರ್ಷಾಂತ್ಯ ಸಮೀಪಿಸಿದೆ. ಅನೇಕರು ಕ್ರಿಸ್​ಮಸ್​ ರಜೆಯನ್ನು ಸವಿಯಲು ಆರಂಭಿಸಿದ್ದಾರೆ. ಜೊತೆಗೆ ವೀಕೆಂಡ್​ ಕೂಡ ಇರುವುದರಿಂದ ಮನರಂಜನೆಗೆ ಏನಾದರೂ ಬೇಕೇಬೇಕು. ಮನೆಯಲ್ಲೇ ಮನರಂಜನೆ ಬೇಕು ಎನ್ನುವವರಿಗೆ ಒಟಿಟಿಯೇ ಮೊದಲ ಆಯ್ಕೆ. ಒಟಿಟಿಯಲ್ಲಿ ಹೊಸದಾಗಿ ಏನು ನೋಡೋದು ಎಂಬ ಪ್ರಶ್ನೆಗೆ ಉತ್ತರ ‘ಸಿಂಗಂ ಅಗೇನ್’ ಸಿನಿಮಾ. ಅಜಯ್ ದೇವಗನ್, ಕರೀನಾ ಕಪೂರ್​ ಮುಂತಾದವರು ನಟಿಸಿದ ಈ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ರೋಹಿತ್ ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರೆಂಟ್​ ಪಡೆಯುವ ಮೂಲಕ ಈ ಸಿನಿಮಾವನ್ನು ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ನೋಡಬಹುದು.

‘ಸಿಂಗಂ ಅಗೇನ್’ ಸಿನಿಮಾ ಬಿಡುಗಡೆ ಆಗಿದ್ದು ನವೆಂಬರ್​ 1ರಂದು. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 268 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಬಹುತಾರಾಗಣ ಇದೆ. ಅಜಯ್ ದೇವಗನ್, ಕರೀನಾ ಕಪೂರ್​, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್​, ಟೈಗರ್​ ಶ್ರಾಫ್​, ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್ ಮುಂತಾದವರು ನಟಿಸಿದ್ದಾರೆ.

ತಾರಾಗಣಕ್ಕೆ ಹೋಲಿಸಿದರೆ ‘ಸಿಂಗಂ ಅಗೇನ್’ ಮಾಡಿದ ಕಲೆಕ್ಷನ್​ ತೀರಾ ಕಡಿಮೆ ಎನ್ನಬಹುದು. ಮಾಮೂಲಿ ಕಮರ್ಷಿಯಲ್ ಸಿನಿಮಾದ ಸಿದ್ಧ ಸೂತ್ರಗಳನ್ನು ಬಳಸಿ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಈ ಸಿನಿಮಾ ಮಾಡಿದ್ದಾರೆ ಎಂಬ ಕಾರಣದಿಂದ ಅನೇಕರು ಚಿತ್ರಮಂದಿರದಲ್ಲಿ ಇದನ್ನು ನೋಡಲು ಇಷ್ಟಪಡಲಿಲ್ಲ. ಈಗ ಒಟಿಟಿಯಲ್ಲಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಬೇಕು.

ಇದನ್ನೂ ಓದಿ: ‘ಭೂಲ್​ ಭುಲಯ್ಯ 3’ vs ‘ಸಿಂಗಂ ಅಗೇನ್’; ಎರಡೂ ಚಿತ್ರಕ್ಕೆ ಮೊದಲ ದಿನ ಅಬ್ಬರದ ಗಳಿಕೆ

‘ಸಿಂಗಂ ಅಗೇನ್’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಪಡೆದುಕೊಂಡಿದೆ. ಚಂದಾದಾರರು ಕೂಡ ಸದ್ಯಕ್ಕೆ 499 ರೂಪಾಯಿಗೆ ರೆಂಟ್ ಪಡೆಯುವ ಮೂಲಕ ಸಿನಿಮಾ ವೀಕ್ಷಿಸಬಹುದು. ಅರ್ಜುನ್ ಕಪೂರ್​ ಅವರು ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ರಾಮಾಯಣದ ಥೀಮ್​ನಲ್ಲಿ ‘ಸಿಂಗಂ ಅಗೇನ್’ ಕಥೆಯನ್ನು ಹೇಳಲಾಗಿದೆ. ಈ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿ ಇತ್ತು. ಆದರೆ ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us