ಈ ಬಾರಿ ಓಟಿಟಿ ಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (Bigg Boss Kannada OTT) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಒಬ್ಬೊಬ್ಬರೆ ಸ್ಪರ್ಧಿಗಳು ದೊಡ್ಮನೆ ಸೇರಿಕೊಂಡಿದ್ದಾರೆ. ಇದೀಗ ಕೊನೆಯ ಸ್ಪರ್ಧಿಯಾಗಿ ಪತ್ರಕರ್ತ ಖೋಟಾದಿಂದ ಖಾಸಗಿ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ (Somanna Machimada) ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಚಿರಪರಿಚಿತರಾಗಿರುವ ಕೊಡಗು ಮೂಲದ ಸೋಮಣ್ಣ ಮೈಸೂರಿನಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದ್ದರು. ಬಳಿಕ ಟಿವಿ9 ಕನ್ನಡ ಸೇರಿದ ಅವರು ಇದೀಗ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಸೋಮಣ್ಣ ಮಾಚಿಮಾಡ, ಹಲವಾರು ರಾಜಕಾರಣಿಗಳು, ಅನೇಕ ಸಿನಿಮಾ ಸೆಲೆಬ್ರಿಟಿಗಳನ್ನ ಸಂದರ್ಶನ ಮಾಡಿದ್ದಾರೆ. ಸೋಮಣ್ಣ ಮಾಚಿಮಾಡ ಅವರಿಗೆ ಬಹುದೊಡ್ಡ ಫ್ಯಾನ್ಸ್ ಬಳಗ ಇದೆ. ಇವರು ಮಾಡುವ ಸಂದರ್ಶನಗಳು ತುಂಬಾ ಪ್ರಖ್ಯಾತಿ ಪಡೆದಿವೆ. ಇವರಿಗೆ ಫೇಸ್‌ಬುಕ್‌ನಲ್ಲಿ 114k ಫಾಲೋವರ್ಸ್ ಇದ್ದರೆ, ಇನ್ಸ್ಟಾಗ್ರಾಮ್ನಲ್ಲಿ 27k ಕ್ಕೂ ಅಧಿಕ ಹಿಂಬಾಲಕರಿದ್ದಾರೆ.
ಬಿಗ್ ಬಾಸ್ ಮನೆಗೆ ಈಗಾಗಲೇ ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ ಅವರು ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಆರಂಭವಾಗುತ್ತಿದ್ದಂತೆ ಕಿಚ್ಚ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ವೇದಿಕೆ ಮೇಲೆ ಬಂದು ಜನರ ಮನದಲ್ಲಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮೊದಲನೆಯದಾಗಿ ಬಿಗ್ ಬಾಸ್ ಓಟಿಟಿ ಒಟ್ಟು ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬ ಗೊಂದಲಕ್ಕೆ ತೆರೆ ಎಳೆದಿರುವ ಸುದೀಪ್ ಒಟ್ಟು 40 ದಿನಗಳ ವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ. 40 ದಿನಗಳ ಬಳಿಕ ಟಿವಿ ಯಲ್ಲಿ 100 ದಿನಗಳ 9ನೇ ಸೀಸನ್ನ ಬಿಗ್ ಬಾಸ್ ಕನ್ನಡ ಶುರುವಾಗಲಿದೆ. ಇಲ್ಲಿ ಓಟಿಟಿ ಬಿಗ್ ಬಾಸ್ನಲ್ಲಿ ಕೊನೆಯ ವರೆಗೂ ಇದ್ದ ಟಾಪ್ ಸ್ಪರ್ಧಿಗಳು ನೇರವಾಗಿ 9ನೇ ಸೀಸನ್ ಬಿಗ್ ಬಾಸ್ಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಸುದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಸೀಸನ್ನ ವೇಗವಾಗಿ ಸಾಗಲಿದ್ದು 50 ಓವರ್ಗಳ ಕ್ರಿಕೆಟ್ ಪಂದ್ಯದಂತೆ 20 ಬಾಲ್ ಆಡಿ ಸೆಟಲ್ ಆಗಲು ಸಾಧ್ಯವಿಲ್ಲ, ಟಿ20 ಪಂದ್ಯದಂತೆ ಮೊದಲ ಎಸೆತದಿಂದಲೇ ಆಟ ಶುರು ಮಾಡಬೇಕು ಎಂದು ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ.
Published On - 11:05 pm, Sat, 6 August 22