ಕೊರಿಯನ್ ಭಾಷೆಯ ‘ಸ್ಕ್ವಿಡ್ ಗೇಮ್ಸ್’ (Squid Game) ವೆಬ್ ಸರಣಿ, ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. 2021ರ ಸೆಪ್ಟೆಂಬರ್ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದ ‘ಸ್ಕ್ವಿಡ್ ಗೇಮ್’ ವೆಬ್ ಸರಣಿ ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆದಿತ್ತು. ಬಾಲ್ಯದಲ್ಲಿ ಕಾಲಹರಣಕ್ಕೆ ಆಡುತ್ತಿದ್ದ ಆಟಗಳನ್ನು ದೊಡ್ಡವರ ಕೈಯಲ್ಲಿ ಆಡಿಸಿ, ಸೋತವರನ್ನು ಕೊಂದು ಗೆದ್ದವರನ್ನು ಮುಂದಕ್ಕೆ ತಳ್ಳುವ, ಕೊನೆಯಲ್ಲಿ ಉಳಿವ ಒಬ್ಬ ವ್ಯಕ್ತಿಗೆ ಭಾರಿ ದೊಡ್ಡ ಮೊತ್ತದ ಬಹುಮಾನವನ್ನು ಕೊಡುವ ಕತೆಯನ್ನು ಆ ವೆಬ್ ಸರಣಿ ಹೊಂದಿತ್ತು. ವೆಬ್ ಸರಣಿಯಲ್ಲಿ ‘ಹೀರೋ ಗುಂಪಿ’ನ ಸದಸ್ಯನಾಗಿ ವೃದ್ಧ ವ್ಯಕ್ತಿಯೊಬ್ಬರು ನಟಿಸಿದ್ದರು. ಕತೆಯಲ್ಲಿ ಬಹಳ ಪ್ರಮುಖವಾದ ಪಾತ್ರ ಆತನದ್ದಾಗಿತ್ತು, ಇದೀಗ ಆ ವ್ಯಕ್ತಿ ಲೈಂಗಿಕ ದುರ್ವರ್ತನೆ ತೋರಿದ ಆರೋಪದಲ್ಲಿ ಅಪರಾಧಿಯಾಗಿದ್ದು, ಬಂಧನಕ್ಕೆ ಒಳಗಾಗಿದ್ದಾನೆ.
‘ಸ್ಕ್ವಿಡ್ ಗೇಮ್’ ವೆಬ್ ಸರಣಿಯ ವೃದ್ಧ ನಟ ಓ ಯೆಂಗ್ ಸು (O Yeong-su) ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿಯೆಂದು ಘೋಷಿತವಾಗಿದ್ದು ಶಿಕ್ಷೆಗೆ ಗುರಿಯಾಗಿದ್ದಾರೆ. 2017ರಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಓ ಯೆಂಗ್ ಸು ಮೇಲೆ ಹೊರಿಸಲಾಗಿತ್ತು. ಪ್ರಕಣದ ವಿಚಾರಣೆ ನಡೆದು ಇದೀಗ ಓ ಯೆಂಗ್ ಸು ಅಪರಾಧಿ ಎಂಬ ತೀರ್ಪು ಬಂದಿದ್ದು, ಓ ಯೆಂಗ್ ಸು ಗೆ ಎಂಟು ತಿಂಗಳ ಜೈಲು ಶಿಕ್ಷೆ ಹಾಗೂ ಎರಡು ವರ್ಷಗಳ ಕಾಲ ಗಡಿಪಾರು ಶಿಕ್ಷೆಯನ್ನು ವಿಧಿಸಲಾಗಿದೆ.
ದಕ್ಷಿಣ ಕೊರಿಯಾದ ಸಿಯೋಂಗ್ನಾಮ್ ವಿಭಾಗದ, ಸೌನ್ ಜಿಲ್ಲೆಯ ನ್ಯಾಯಾಲಯವು ಈ ಆದೇಶ ನೀಡಿದ್ದು, ಕಾರಾಗೃಹ ಹಾಗೂ ಗಡಿಪಾರು ಶಿಕ್ಷೆಯ ಜೊತೆಗೆ ನಟ ಓ ಯೆಂಗ್ ಸು 40 ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯದ ಕುರಿತಾಗಿ ಪಾಠ ಕೇಳಿಸಿಕೊಳ್ಳುವಂತೆಯೂ ಶಿಕ್ಷೆ ವಿಧಿಸಲಾಗಿದೆ. ನಟ ಓ ಯೆಂಗ್ ಸು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳನ್ನು ಗಮನಿಸಿ ಈ ಹೆಚ್ಚುವರಿ ‘ಶಿಕ್ಷೆ’ಯನ್ನು ನೀಡುತ್ತಿರುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
2017ರಲ್ಲಿ ಸೌನ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಾಟಕ ಪ್ರದರ್ಶನಕ್ಕೆ ಹೋಗಿದ್ದ ನಟ ಓ ಯೆಂಗ್ ಸು ಅಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಕುರಿತು 2017ರಲ್ಲಿ ದೂರು ದಾಖಲಾಗಿ, ಇಷ್ಟು ವರ್ಷ ವಿಚಾರಣೆ ನಡೆದು ಇದೀಗ ತೀರ್ಪು ಹೊರಬಿದ್ದಿದೆ. ‘ಸ್ಕ್ವಿಡ್ ಗೇಮ್’ ವೆಬ್ ಸರಣಿಯಲ್ಲಿ ನಟಿಸಿದ ಬಳಿಕ ಓ ಯೆಂಗ್ ಸು ಗೆ ಭಾರಿ ಜನಪ್ರಿಯತೆ ಧಕ್ಕಿದೆ. 2022 ರಲ್ಲಿ ವಿಶ್ವಮಾನ್ಯ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಸಹ ಓ ಯೆಂಗ್ ಸು ಸಹ ಗೆದ್ದಿದ್ದಾರೆ. ಗೋಲ್ಡನ್ ಗ್ಲೋಬ್ ಪಡೆದ ಮೊದಲ ದಕ್ಷಿಣ ಕೊರಿಯಾದ ನಟ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Sat, 16 March 24