
ಕೋವಿಡ್ ಬಳಿಕ ಭಾರತ ಸೇರಿದಂತೆ ವಿಶ್ವದಾದ್ಯಂತ ಒಟಿಟಿ (OTT) ವೇದಿಕೆಗಳು ಭಾರಿ ಪ್ರಚಲಿತಕ್ಕೆ ಬಂದವು. ಈಗಂತೂ ಭಾರತವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಒಟಿಟಿ ವೇದಿಕೆಗಳು ಸಕ್ರಿಯವಾಗಿವೆ. ಆದರೆ ಅವುಗಳಲ್ಲಿ ಪ್ರಮುಖವಾದುವು ಸುಮಾರು 15 ರಿಂದ 20 ಎನ್ನಬಹುದು. ಕೋವಿಡ್ ಸಮಯದಲ್ಲಿ ಹಾಗೂ ಅದಾದ ಕೆಲ ವರ್ಷಗಳ ಬಳಿಕ ಪ್ರೇಕ್ಷಕನನ್ನು ಪ್ರಭು ಎಂದು ಪರಿಗಣಿಸಿ ಸೇವೆ ನೀಡುತ್ತಿದ್ದ ಒಟಿಟಿಗಳು ಈಗ ವರಸೆ ಬದಲಿಸಿವೆ. ಸಬ್ಸ್ಕ್ರಿಪ್ಷನ್ ಪಡೆದ ಬಳಿಕವೂ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ. ಜಾಹೀರಾತು ಬೇಡವೆಂದರೆ ವಾರ್ಷಿಕ ಮೊತ್ತದ ಮೇಲೆ ಮತ್ತೆ ಹೆಚ್ಚುವರಿ ಹಣ ನೀಡುವಂತೆ ಪೀಡಿಸುತ್ತಿವೆ. ಇದೀಗ ಇದರಿಂದ ಮುಕ್ತಿ ಸಿಗುವ ಸಾಧ್ಯತೆ ಗೋಚರಿಸುತ್ತಿದೆ.
ಅಮೆಜಾನ್ ಪ್ರೈಂ, ಹಾಟ್ಸ್ಟಾರ್ ಇನ್ನೂ ಕೆಲವು ಒಟಿಟಿಗಳು ಮೊದಲೆಲ್ಲ ಜಾಹೀರಾತು ಪ್ರದರ್ಶಿಸುತ್ತಿರಲಿಲ್ಲ. ಅದರಲ್ಲೂ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿ ವೀಕ್ಷಣೆ ವೇಳೆಯಲ್ಲಿ ಜಾಹೀರಾತುಗಳ ಕಿರಿಕಿರಿಯೇ ಇರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಕಳೆದ ಎರಡು-ಮೂರು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಕೆಲ ಒಟಿಟಿಗಳು ಜಾಹೀರಾತು ಪ್ರದರ್ಶನ ಆರಂಭಿಸಿವೆ. ಅದರಲ್ಲೂ ದುಬಾರಿ ಚಂದಾ ಮೊತ್ತವನ್ನು ತೆಗೆದುಕೊಳ್ಳುವ ಅಮೆಜಾನ್ ಪ್ರೈಂ, ಜಿಯೋ ಹಾಟ್ಸ್ಟಾರ್, ಸೋನಿ ಲಿವ್ ಇನ್ನೂ ಕೆಲವು ಪ್ರಮುಖ ಒಟಿಟಿಗಳು ಜಾಹೀರಾತು ಪ್ರದರ್ಶನ ಮಾಡುತ್ತಿರುವುದು ಗ್ರಾಹಕರಿಗೆ ಕಿರಿ ಕಿರಿ ತಂದಿದೆ.
ಇದೀಗ ದೂರದ ಜರ್ಮನಿಯಲ್ಲಿ ಅಮೆಜಾನ್ ಪ್ರೈಂ ಮೇಲೆ ಈ ಬಗ್ಗೆ ದೂರು ದಾಖಲಾಗಿ, ನಡೆದಿರುವ ನ್ಯಾಯಾಲಯದ ವಿಚಾರಣೆಯಲ್ಲಿ ಅಮೆಜಾನ್ ಪ್ರೈಂ, ಸಬ್ಸ್ಕ್ರಿಪ್ಷನ್ ಮೊತ್ತ ಪಡೆದ ಬಳಿಕ ಜಾಹೀರಾತು ಪಡೆಯುವಂತಿಲ್ಲ, ಹಾಗೂ ಜಾಹೀರಾತು ರಹಿತ ಸೇವೆಗೆ ಹೆಚ್ಚುವರಿ ಹಣ ತೆಗೆದುಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಿದೆ.
ಇದನ್ನೂ ಓದಿ:ಈ ವಾರ ಒಟಿಟಿಗೆ ಬರುತ್ತಿವೆ ಭರ್ಜರಿ ಸಿನಿಮಾಗಳು: ಪಟ್ಟಿ ಇಲ್ಲಿದೆ
ಅಮೆಜಾನ್ ಪ್ರೈಂ ಮೊದಲೆಲ್ಲ ಜಾಹೀರಾತು ಪ್ರದರ್ಶಿಸುತ್ತಿರಲಿಲ್ಲ. ಆದರೆ 2024 ರಲ್ಲಿ ಜಾಹೀರಾತು ಪ್ರದರ್ಶಿಸಲು ಆರಂಭಿಸಿತು. ಜೊತೆಗೆ ಕೆಲವು ಪ್ರಮುಖ ಸಿನಿಮಾಗಳನ್ನು ನೋಡಲು ಹೆಚ್ಚುವರಿ ಹಣ ಪಾವತಿಸುವಂತೆ ಸಹ ಮಾಡಿತು. ಆದರೆ ಅಮೆಜಾನ್ ಮೊದಲಿಗೆ ಜಾಹೀರಾತು ರಹಿತ ಕಂಟೆಂಟ್ ಪ್ರದರ್ಶನದ ಭರವಸೆಯನ್ನು ನೀಡಿ ಜನರಿಂದ ಚಂದಾ ವಸೂಲಿ ಮಾಡಿತ್ತು. ಆದರೆ ಬಳಿಕ ಜಾಹೀರಾತು ಪ್ರದರ್ಶಿಸುವ ಮೂಲಕ ಭರವಸೆಯನ್ನು ಮುರಿದಿದೆ. ಇದು ಅನೈತಿಕ ವ್ಯವಹಾರ ಎಂದು ಜರ್ಮನಿಯ ನ್ಯಾಯಾಲಯ ಹೇಳಿದೆ. ಅಮೆಜಾನ್, ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ಆದರೆ ಜರ್ಮಿಯಲ್ಲಿ ಆಗಿರುವ ಈ ಬೆಳವಣಿಗೆ ಒಟಿಟಿ ವೀಕ್ಷಕರಿಗೆ ಭರವಸೆಯನ್ನಂತೂ ಮೂಡಿಸಿದೆ. ಅಮೆಜಾನ್ ಪ್ರೈಂನವರು ಒಂದೂವರೆ ನಿಮಿಷದ ಜಾಹೀರಾತನ್ನು ಪ್ರದರ್ಶಿಸುತ್ತಿದ್ದಾರೆ. ಎರಡೂವರೆ ಗಂಟೆಯ ಸಿನಿಮಾ ನೋಡಿದಲ್ಲಿ ಪ್ರೇಕ್ಷಕ ಈ ಜಾಹೀರಾತನ್ನು ಕನಿಷ್ಟ ಐದಾರು ಬಾರಿ ಆದರೂ ನೋಡಬೇಕಾಗಿದೆ. ಇನ್ನು ಜಿಯೋ ಹಾಟ್ಸ್ಟಾರ್ನಲ್ಲಿ ಪ್ರತಿ ಅರ್ಧ ಗಂಟೆಗೆ ಒಮ್ಮೆ ಒಂದು ನಿಮಿಷದ ಜಾಹೀರಾತು ಪ್ರಸಾರ ಆಗುತ್ತದೆ. ಸದ್ಯಕ್ಕೆ ಜಾಹೀರಾತು ರಹಿತವಾಗಿ ಸೇವೆ ಒದಗಿಸುತ್ತಿರುವ ಗುಣಮಟ್ಟದ ಒಟಿಟಿ ವೇದಿಕೆಯಾಗಿ ನೆಟ್ಫ್ಲಿಕ್ಸ್ ಉಳಿದುಕೊಂಡಿದೆ. ಉತ್ತಮ ಗುಣಮಟ್ಟದ ಕಂಟೆಂಟ್ ಕೊಡುವ ಜೊತೆಗೆ ಯಾವುದೇ ಜಾಹೀರಾತು ಪ್ರದರ್ಶನವನ್ನು ಸಹ ನೆಟ್ಫ್ಲಿಕ್ಸ್ ಮಾಡುತ್ತಿಲ್ಲ. ಆದರೆ ಅಮೆಜಾನ್, ಹಾಟ್ಸ್ಟಾರ್ಗೆ ಹೋಲಿಸಿದರೆ ನೆಟ್ಫ್ಲಿಕ್ಸ್ನ ಸಬ್ಸ್ಕ್ರಿಪ್ಷನ್ ಮೊತ್ತ ದುಬಾರಿ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ