ಪ್ರಭಾಸ್ (Prabhas), ರಾಮ್ ಚರಣ್ (Ram Charan), ಜೂ ಎನ್ಟಿಆರ್ ಇನ್ನು ಕೆಲವು ಸ್ಟಾರ್ ನಟರು ಒಳ್ಳೆಯ ನಿರ್ದೇಶಕರು, ದೊಡ್ಡ ನಿರ್ಮಾಣ ಸಂಸ್ಥೆಗಳ ಬಲದಿಂದ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ ಪ್ಯಾನ್ ಇಂಡಿಯಾ ಸ್ಟಾರ್ಗಳು ಎನಿಸಿಕೊಂಡಿದ್ದಾರೆ. ಆದರೆ ಪವನ್ ಕಲ್ಯಾಣ್ (Pawan Kalyan) ಅವರದ್ದು ಬೇರೆಯದ್ದೇ ದಾರಿ. ಪ್ಯಾನ್ ಇಂಡಿಯಾ, ದೊಡ್ಡ ನಿರ್ಮಾಣ ಸಂಸ್ಥೆಗಳು ಇವುಗಳ ತಂಟೆಗೆ ಹೋಗದೆ ತಮ್ಮದೇ ಮಾದರಿಯ ಮಾಸ್ ಸಿನಿಮಾಗಳನ್ನು ಮಾಡುತ್ತಲೇ ಬಾಕ್ಸ್ ಆಫೀಸ್ ದೂಳಿಪಟ ಮಾಡುತ್ತಿದ್ದಾರೆ. ಏನು ಮಾಡಿದರೂ ಟ್ರೆಂಡ್ ಆಗುವಂತೆ ಮಾಡಿದ್ದಾರೆ. ಇದೀಗ ಪವನ್ ಕಲ್ಯಾಣ್ ಇನ್ಸ್ಟಾಗ್ರಾಂಗೆ ಕಾಲಿಟ್ಟಿದ್ದು ಒಂದು ಗಂಟೆಯಲ್ಲಿಯೇ ಪ್ರಭಾಸ್ ದಾಖಲೆ ಚಿಂದಿ ಉಡಾಯಿಸಿದ್ದಾರೆ.
ಟ್ವಿಟ್ಟರ್, ಫೇಸ್ಬುಕ್ನಲ್ಲಿದ್ದ ಪವನ್ ಕಲ್ಯಾಣ್ ಇದೀಗ ಇನ್ಸ್ಟಾಗ್ರಾಂಗೆ ಕಾಲಿಟ್ಟಿದ್ದಾರೆ. ಪವನ್ ಕಲ್ಯಾಣ್ ಇನ್ಸ್ಟಾಗ್ರಾಂಗೆ ಬಂದ ಕೇವಲ ಒಂದೂವರೆ ಗಂಟೆಯಲ್ಲಿ 10 ಲಕ್ಷ ಮಂದಿ ಫಾಲೋವರ್ಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ತೆಲುಗಿನ ಇನ್ಯಾವುದೇ ನಟರೂ ಸಹ ಮಾಡಿಲ್ಲ. ನಟ ಪ್ರಭಾಸ್ ಇನ್ಸ್ಟಾಗ್ರಾಂಗೆ ಬಂದಾಗ ಹತ್ತು ಲಕ್ಷ ಫಾಲೋವರ್ ಗಳಿಸಲು 23 ದಿನ ಹಿಡಿದಿತ್ತು. ಆದರೆ ಪವನ್ಗೆ 10 ಲಕ್ಷ ಮಂದಿ ಫಾಲೋವರ್ಗಳು ಕೇವಲ ಒಂದೂವರೆ ಗಂಟೆಯಲ್ಲಿ ಸಿಕ್ಕಿದ್ದಾರೆ.
ಇದನ್ನೂ ಓದಿ:ಮದ್ಯದ ಬೆಲೆ ಇಳಿಸುವ ಭರವಸೆ ನೀಡಿದ ಪವನ್ ಕಲ್ಯಾಣ್: ಯುವಕರು ಫುಲ್ ಖುಷ್
ಕೇವಲ 90 ನಿಮಿಷದಲ್ಲಿ ಹತ್ತು ಲಕ್ಷ ಫಾಲೋವರ್ಗಳನ್ನು ಗಳಿಸಿರುವ ಪವನ್ ಕಲ್ಯಾಣ್ ಇಂದು (ಜುಲೈ 4) 11 ಗಂಟೆ ವೇಳೆಗೆ 15 ಲಕ್ಷ ಫಾಲೋವರ್ಗಳನ್ನು ಪಡೆದಿದ್ದಾರೆ. ವಿಚಿತ್ರವೆಂದರೆ ಪವನ್ ಕಲ್ಯಾಣ್ ಈ ವರೆಗೆ ಒಂದೂ ಸಹ ಪೋಸ್ಟ್ ಅನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿಲ್ಲ. ಮಾತ್ರವಲ್ಲ ಪವನ್ ಕಲ್ಯಾಣ್ ಯಾರನ್ನೂ ಫಾಲೋ ಮಾಡುತ್ತಿಲ್ಲ ಸಹ. ತಮ್ಮ ಬಯೋ ನಲ್ಲಿ ಎದ್ದೇಳು, ಎದುರಿಸು, ಆಯ್ಕೆಮಾಡು ಎಂದು ತೆಲುಗಿನಲ್ಲಿ ಬರೆದುಕೊಂಡಿದ್ದಾರೆ. ಕೊನೆಯಲ್ಲಿ ಜೈ ಹಿಂದ್ ಎಂದು ಇಂಗ್ಲೀಷ್ನಲ್ಲಿ ಬರೆದಿದ್ದಾರೆ.
ಆಂಧ್ರ ಪ್ರದೇಶ ಚುನಾವಣೆಗೆ ಸಜ್ಜಾಗುತ್ತಿರುವ ಪವನ್ ಕಲ್ಯಾಣ್, ತಾವು ಸ್ಥಾಪಿಸಿರುವ ಜನಸೇನಾ ಪಕ್ಷವನ್ನು ಗೆಲ್ಲಿಸುವ ದೃಷ್ಟಿಯಿಂದ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ತಮ್ಮ ಪ್ರವಾಸಕ್ಕೆ ವಾರಾಹಿ ಎಂದು ಹೆಸರಿಟ್ಟಿದ್ದು ಮೊದಲ ಹಂತದ ಪ್ರವಾಸ ಮುಗಿಸಿದ್ದಾರೆ. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಕಣಕ್ಕೆ ಇಳಿಸುತ್ತೇನೆ ಎಂದು ಪವನ್ ಹೇಳಿದ್ದಾರೆ. ಇದರ ನಡುವೆ ಟಿಡಿಪಿ ಪಕ್ಷದೊಟ್ಟಿಗೆ ಒಪ್ಪಂದವನ್ನೂ ಸಹ ಮಾಡಿಕೊಂಡಿದ್ದಾರೆ.
ಇನ್ನು ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಪವನ್ ಕಲ್ಯಾಣ್ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದಾರೆ. ಹರಿಹರ ವೀರ ಮಲ್ಲು ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬಳಿಕ ಉಸ್ತಾದ್ ಭಗತ್ ಸಿಂಗ್ ಸಿನಿಮಾ ತೆರೆಗೆ ಬರಲಿದೆ. ಅದಾದ ಬಳಿಕ ಬ್ರೋ ಹಾಗೂ ಓಜಿ ಸಿನಿಮಾಗಳು ತೆರೆಗೆ ಬರಲಿವೆ. ಆಂಧ್ರ ವಿಧಾನಸಭೆ ಚುನಾವಣೆ ವೇಳೆಗೆ ಪವನ್ರ ಎರಡು ಅಥವಾ ಮೂರು ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ