ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ಗೆ (Pawan Kalyan) ಕರ್ನಾಟದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಆಂಧ್ರ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರಗಳಲ್ಲಂತೂ ಪವನ್ ಕಲ್ಯಾಣ್ ಅವರ ವೀರಾಭಿಮಾನಿಗಲೇ ಇದ್ದಾರೆ. ಇದೇ ಕಾರಣಕ್ಕೆ ಕಳೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಪವನ್ ಕಲ್ಯಾಣ್ ಈ ಭಾಗದಲ್ಲಿ ಕೆಲವರ ಪರವಾಗಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದರು. ಈ ಬಾರಿಯೂ ಪವನ್ ಕಲ್ಯಾಣ್ ಚುನಾವಣೆ ಪ್ರಚಾರಕ್ಕೆ (Election Campaign) ಬರಲಿದ್ದಾರೆ ಎನ್ನಲಾಗುತ್ತಿದೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ (Shidlaghatta) ಬಿಜೆಪಿ ಅಭ್ಯರ್ಥಿ ಸಿಕ್ಕಲ್ ರಾಮಚಂದ್ರ ಗೌಡ, ಪವನ್ ಕಲ್ಯಾಣ್ ಅವರಿಗೆ ಆತ್ಮೀಯರಾಗಿದ್ದು, ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಪವನ್ ಕಲ್ಯಾಣ್ ನನ್ನ ಪರವಾಗಿ ಪ್ರಚಾರಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ರಾಮಚಂದ್ರ ಗೌಡ, ಪವನ್ ಕಲ್ಯಾಣ್ ಅವರಿಗೆ ಆಪ್ತರಾಗಿದ್ದು, ಕಬ್ಜ ಸಿನಿಮಾದ ಬಿಡುಗಡೆಗೆ ಮುನ್ನ ಆರ್.ಚಂದ್ರು ಅವರೊಟ್ಟಿಗೆ ಪವನ್ ಕಲ್ಯಾಣ್ ಅವರನ್ನು ರಾಮಚಂದ್ರ ಅವರು ಭೇಟಿಯಾಗಿದ್ದರು. ಶಿಡ್ಲಘಟ್ಟದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಪವನ್ ಅವರನ್ನು ಆಹ್ವಾನಿಸಿದ್ದರು.
ಶಿಡ್ಲಘಟ್ಟದಲ್ಲಿ ನಡೆದಿದ್ದ ಕಬ್ಜ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಈ ಬಗ್ಗೆ ಮಾತನಾಡಿದ್ದ ಆರ್.ಚಂದ್ರು, ರಾಮಚಂದ್ರ ಅವರು ಪವನ್ ಕಲ್ಯಾಣ್ ಅವರಿಗೆ ಬಹಳ ಆತ್ಮೀಯರು, ಅವರ ದೆಸೆಯಿಂದಲೇ ಪವನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತಾಯಿತು, ಒಳ್ಳೆಯ ಕತೆ ಬರೆದರೆ ನಟಿಸಲು ರೆಡಿ ಇರುವುದಾಗಿಯೂ ಪವನ್ ಕಲ್ಯಾಣ್ ಹೇಳಿದ್ದಾರೆಂದಿದ್ದರು.
ಇನ್ನು ರಾಮಚಂದ್ರಗೌಡ ಅವರಿಗೆ ನಟ ಸುದೀಪ್ ಸಹ ಆತ್ಮೀಯರೆ. ಅವರೇ ಹೇಳಿಕೊಂಡಿರುವಂತೆ, ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಅಧಿಕೃತವಾಗಿ ಘೋಷಿಸುವ ಮೊದಲೇ ತಾವು ಶಿಡ್ಲಘಟ್ಟಕ್ಕೆ ಪ್ರಚಾರಕ್ಕೆ ಬರುವುದಾಗಿ ರಾಮಚಂದ್ರ ಅವರ ಬಳಿ ಹೇಳಿದ್ದರಂತೆ. ನಿಮ್ಮ ಬಗ್ಗೆ ನಿಮ್ಮ ಜನಗಳಿಗೆ ಹೇಳಬೇಕು ನಾನು ಖಂಡಿತ ಬರುತ್ತೇನೆ ಎಂದಿದ್ದರು ಎಂದಿರುವ ರಾಮಚಂದ್ರ, ಸುದೀಪ್ ಅವರು ಎರಡು ಬಾರಿ ಕ್ಷೇತ್ರಕ್ಕೆ ಬಂದು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.
ಪವನ್ ಕಲ್ಯಾಣ್ ಅವರು ಈ ಹಿಂದೆಯೂ ಕರ್ನಾಟಕದಲ್ಲಿ ಚುನಾವಣೆ ಪ್ರಚಾರಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಹಿಂದಿನ ಲೋಕಸಭೆ ಚುನಾವಣೆ ಸಮಯದಲ್ಲಿ ಕೋಲಾರ ಚಿಕ್ಕಬಳ್ಳಾಪುರಗಳಲ್ಲಿ ಬಿಜೆಪಿ ಪರವಾಗಿಯೇ ಪವನ್ ಕಲ್ಯಾಣ್ ಪ್ರಚಾರ ನಡೆಸಿದ್ದರು. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರದ ನವೀನ್ ಕಿರಣ್ ಅವರ ಪರವಾಗಿ ರೋಡ್ ಶೋ ಅನ್ನು ಪವನ್ ಕಲ್ಯಾಣ್ ನಡೆಸಿದ್ದರು. ಆಗ ನವೀನ್ ಕಿರಣ್ ಕಾಂಗ್ರೆಸ್ನಲ್ಲಿದ್ದರು. ಈಗ ಅವರು ಬಿಜೆಪಿಯಲ್ಲಿದ್ದಾರೆ.
ಆದರೆ ಪವನ್ ಕಲ್ಯಾಣ್ ಈ ಹಿಂದೆ ಬಿಜೆಪಿ ಸಖ್ಯದಲ್ಲಿದ್ದರು. ಆದರೆ ಕೆಲವು ತಿಂಗಳ ಹಿಂದೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷದೊಟ್ಟಿಗೆ ಕೈ ಜೋಡಿಸಿದ್ದಾರೆ. ಹೀಗಿರುವಾಗ ಬಿಜೆಪಿ ಪರವಾಗಿ ಅವರು ಪ್ರಚಾರ ಮಾಡುತ್ತಾರಾ ಎಂಬ ಅನುಮಾನ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ