A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್. ರೆಹಮಾನ್
A R Rahman Wife: ಸೈರಾ ಬಾನು ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್. ರೆಹಮಾನ್ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (A R Rahman) ಅವರು ಮೂಲತಃ ತಮಿಳುನಾಡಿನವರು. ಆದರೆ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ಬಾಲಿವುಡ್ನಲ್ಲೂ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಆಸ್ಕರ್ ಪ್ರಶಸ್ತಿ ಪಡೆದಿರುವ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಹಲವು ಹರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಎ.ಆರ್. ರೆಹಮಾನ್ ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ಪತ್ನಿ ಸೈರಾ ಬಾನು (Saira Banu) ಕೂಡ ಇದ್ದರು. ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಅವರಿಬ್ಬರ ವಿಡಿಯೋ ವೈರಲ್ ಆಗಿದೆ. ಆ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ (Tamil) ಮಾತನಾಡು ಎಂದು ಪತ್ನಿಗೆ ಎ.ಆರ್. ರೆಹಮಾನ್ ಅವರು ಸೂಚನೆ ನೀಡಿರುವುದು ಹೈಲೈಟ್ ಆಗಿದೆ.
ಅದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮ. ಹಾಗಾಗಿ ಅಲ್ಲಿನ ಭಾಷೆಗೆ ಗೌರವ ನೀಡಬೇಕು ಎಂಬುದು ಎ.ಆರ್. ರೆಹಮಾನ್ ಅವರ ಉದ್ದೇಶ ಆಗಿರಬಹುದು. ಆದರೆ ಅವರ ಪತ್ನಿಗೆ ಅಷ್ಟು ಚೆನ್ನಾಗಿ ತಮಿಳು ಮಾತನಾಡಲು ಬರುವುದಿಲ್ಲ. ಹಾಗಿದ್ದರೂ ಕೂಡ ತಮಿಳಿನಲ್ಲೇ ಮಾತನಾಡುವಂತೆ ಎ.ಆರ್. ರೆಹಮಾನ್ ಸೂಚನೆ ನೀಡಿದರು.
ಇದನ್ನೂ ಓದಿ: ಎ.ಆರ್. ರೆಹಮಾನ್ ಮಗಳು ಖತಿಜಾ ಮದುವೆ ಫೋಟೋಸ್ ವೈರಲ್; ಶುಭ ಹಾರೈಸಿದ ಸೆಲೆಬ್ರಿಟಿಗಳು
‘ಈಕೆ ನನ್ನ ಸಂದರ್ಶನವನ್ನು ಪದೇ ಪದೇ ವೀಕ್ಷಿಸುತ್ತಾ ಇರುತ್ತಾಳೆ. ಯಾಕೆಂದರೆ ಇವಳಿಗೆ ನನ್ನ ಧ್ವನಿ ಎಂದರೆ ಇಷ್ಟ’ ಎಂದು ಪತ್ನಿ ಸೈರಾ ಬಾನು ಬಗ್ಗೆ ಎ.ಆರ್. ರೆಹಮಾನ್ ಹೇಳಿದರು. ನಂತರ ಸೈರಾ ಬಾನು ಅವರ ಪ್ರತಿಕ್ರಿಯೆ ಪಡೆಯಲು ಅವರಿಗೆ ಮೈಕ್ ನೀಡಲಾಯಿತು. ಸೈರಾ ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್. ರೆಹಮಾನ್ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ. ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.
கேப்புல பெர்பாமென்ஸ் பண்ணிடாப்ள பெரிய பாய்
ஹிந்தில பேசாதீங்க தமிழ்ல பேசுங்க ப்ளீஸ் ? pic.twitter.com/Mji93XjjID
— black cat (@Cat__offi) April 25, 2023
ರೆಹಮಾನ್ ಸೂಚನೆ ನೀಡಿದರೂ ಕೂಡ ಸೈರಾ ಬಾನು ಅವರು ತಮಿಳಿನಲ್ಲಿ ಮಾತನಾಡಿಲ್ಲ. ‘ಎಲ್ಲರಿಗೂ ಶುಭ ಸಂಜೆ. ತಮಿಳಿನಲ್ಲಿ ನನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ನನಗೆ ತುಂಬ ಖುಷಿಯಾಗಿದೆ. ಇವರ ಧ್ವನಿ ಎಂದರೆ ನನಗೆ ಬಹಳ ಇಷ್ಟ’ ಎಂದು ಇಂಗ್ಲಿಷ್ನಲ್ಲಿ ಮಾತಾಡಿದ್ದಾರೆ ಸೈರಾ ಬಾನು.
ಇದನ್ನೂ ಓದಿ: ಮನೆಯಲ್ಲಿದ್ದ ಆಸ್ಕರ್ ಟ್ರೋಫಿ ಕಳೆದುಹಾಕಿದ್ದ ಎ.ಆರ್. ರೆಹಮಾನ್; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ
ಈ ವೈರಲ್ ವಿಡಿಯೋದ ಬಗ್ಗೆ ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ‘ಹಿಂದಿಯಲ್ಲಿ ಮಾತನಾಡಬೇಡ’ ಎಂದು ಎ.ಆರ್. ರೆಹಮಾನ್ ಹೇಳಿದ್ದಕ್ಕೆ ಉತ್ತರ ಭಾರತದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಾಲಿವುಡ್ನಲ್ಲಿ ಇಷ್ಟೆಲ್ಲ ಯಶಸ್ಸು ಪಡೆದಿರುವ ಇವರಿಗೆ ಹಿಂದಿಯ ಬಗ್ಗೆ ಈ ರೀತಿ ಭಾವನೆ ಯಾಕಿದೆ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಎ.ಆರ್. ರೆಹಮಾನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.