ಸಿನಿಮಾ ಸೆಲೆಬ್ರಿಟಿಗಳು ದೇಶ ನಡೆಸುತ್ತಿಲ್ಲ, ಅವರಿಗೆ ಮಹತ್ವ ಬೇಡ: ಪವನ್ ಕಲ್ಯಾಣ್

Sindhoor Operation: ಭಾರತ ಸೈನ್ಯವು ಪಾಕ್​ನ ಉಗ್ರರ ಅಡಗುತಾಣಗಳ ಮೇಲೆ ಮಾಡಿರುವ ದಾಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್, ‘ಸಹನೆ ಸಹನೆ ಎನ್ನುತ್ತಾ ಕೈ ಕಟ್ಟಿ ಕೂತಿದ್ದು ಸಾಕು’ ಎಂದಿದ್ದಾರೆ. ಇದರ ಜೊತೆಗೆ ಅವರು ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಮಾತನಾಡಿ, ಸಿನಿಮಾ ಸೆಲೆಬ್ರಿಟಿಗಳಿಗೆ ಅತಿಯಾದ ಮಹತ್ವ ಕೊಡುವುದು ಬೇಡ ಎಂದಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳು ದೇಶ ನಡೆಸುತ್ತಿಲ್ಲ, ಅವರಿಗೆ ಮಹತ್ವ ಬೇಡ: ಪವನ್ ಕಲ್ಯಾಣ್
Pawan Kalyan

Updated on: May 07, 2025 | 3:12 PM

ಆಂಧ್ರ ಪ್ರದೇಶ ಡಿಸಿಎಂ ಮತ್ತು ನಟರೂ ಆಗಿರುವ ಪವನ್ ಕಲ್ಯಾಣ್ (Pawan Kalyan), ಭಾರತ ಸೇನೆಯು ಪಾಕ್​ನ ಉಗ್ರ ನೆಲೆಗಳ ಮೇಲೆ ಮಾಡಿರುವ ದಾಳಿಯ ಬಗ್ಗೆ ಮಾತನಾಡಿದ್ದಾರೆ. ಸಹನೆ, ಸಹನೆ ಎಂದು ಕೈ ಕಟ್ಟಿ ಕೂತಿದ್ದು ಸಾಕು, ಈಗ ಮಾಡಿರುವುದು ಸರಿಯಾಗಿದೆ. ಮಾತ್ರವಲ್ಲದೆ ಉಗ್ರವಾದವನ್ನು ಬೇರು ಸಹಿತ ಕಿತ್ತು ಒಗೆಯಬೇಕೆಂದರೆ ಭಾರತವು ಇಸ್ರೇಲ್ ರೀತಿ ನುಗ್ಗಿ ದಾಳಿ ಮಾಡಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಿನಿಮಾ ಸೆಲೆಬ್ರಿಟಿಗಳ ಬಗ್ಗೆಯೂ ಮಾತನಾಡಿದ್ದಾರೆ.

ಭಾರತದ ಸೇನೆ ಮಾಡಿರುವ ದಾಳಿಯ ಬಗ್ಗೆ ಸಿನಿಮಾ ಸೆಲೆಬ್ರಿಟಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪವನ್ ಕಲ್ಯಾಣ್, ‘ಸಿನಿಮಾ ಸೆಲೆಬ್ರಿಟಿಗಳು ಈ ದೇಶವನ್ನು ನಡೆಸುತ್ತಿದ್ದಾರೆಯೇ? ಅವರಿಂದ ನಾವು ಏಕೆ ಪ್ರತಿಕ್ರಿಯೆ ನಿರೀಕ್ಷಿಸಬೇಕು. ಈ ದೇಶವನ್ನು ಸಿನಿಮಾ ಸೆಲೆಬ್ರಿಟಿಗಳು ನಡೆಸುತ್ತಿಲ್ಲ. ನಡೆಸುತ್ತಿರುವುದು ರಾಜಕಾರಣಿಗಳು. ವಿನಾಕಾರಣ ಅವರನ್ನು ಗುರಿ ಮಾಡುವುದು ಬೇಡ’ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ‘ನಾವು ಸಿನಿಮಾ ಸೆಲೆಬ್ರಿಟಿಗಳಿಗೆ ಅತಿಯಾದ ಮಹತ್ವ ನೀಡುತ್ತಿದ್ದೇವೆ. ಅವರು ಅವರ ಕಾರ್ಯ ಮಾಡುತ್ತಿದ್ದಾರೆ. ಅವರು ತಮ್ಮ ದೇಶವನ್ನು ಪ್ರೀತಿಸುತ್ತಾರೆ. ಅದನ್ನು ನಾವು ಮೆಚ್ಚಿಕೊಳ್ಳಬೇಕು. ಆದರೆ ಸೆಲೆಬ್ರಿಟಿಗಳು ದೇಶವನ್ನು ನಡೆಸುತ್ತಿಲ್ಲ, ದೇಶವನ್ನು ನಡೆಸುತ್ತಿರುವುದು ಈ ದೇಶದ ಎಲ್ಲ ವರ್ಗ, ವಿಭಾಗಗಳ ಬಗ್ಗೆ ಮಾಹಿತಿ ಇರುವ ರಾಜಕಾರಣಿಗಳು. ಹಾಗಾಗಿ ನಾವು ಸಿನಿಮಾ ಸೆಲೆಬ್ರಿಟಿಗಳಿಂದ ಅತಿಯಾಗಿ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಅವರು ಆಗಾಗ್ಗೆ ಸ್ವಲ್ಪ ಸದ್ದು ಮಾಡಬಹುದು ಆದರೆ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಬೇಡ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇದನ್ನೂ ಓದಿ:ಭಾರತೀಯ ಮಿಲಿಟರಿ ಆಪರೇಷನ್ ಬಗ್ಗೆ ಬಂದಿರುವ ಸಿನಿಮಾಗಳಿವು

‘ಹಿಂದೂಗಳಿಗೆ ಬದುಕಲು ಇರುವುದು ಭಾರತ ದೇಶವೊಂದೆ. ಹೀಗಿರುವಾಗ ಇಲ್ಲಿ ನಮ್ಮನ್ನು ಧರ್ಮದ ಕಾರಣಕ್ಕೆ ಹೆದರಿಸಲು, ಕೊಲ್ಲಲು ಬಂದರೆ ಕೈ ಕಟ್ಟಿ ಕುಳಿತುಕೊಳ್ಳುವುದು ಹೇಗೆ? ಸಹನೆ, ಸಹನೆ ಎಂದು ಸಾಕಷ್ಟು ಸಮಯ ನಾವು ಕೈಕಟ್ಟಿ ಕೂತಿದ್ದಾಗಿದೆ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಮುಂದುವರೆ, ‘ಆಂಧ್ರ ಪ್ರದೇಶ ಉದ್ದನೆಯ ಕರಾವಳಿ ಹೊಂದಿದ್ದು, ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜೊತೆಗೆ ಕೇಂದ್ರ ಭದ್ರತಾ ಇಲಾಖೆಯಿಂದ ರಾಜ್ಯಕ್ಕೆ ಬರುವ ಪ್ರತಿಯೊಂದು ಭದ್ರತಾ ಸೂಚನೆಗಳನ್ನು ಪಾಲಿಸಲಾಗುವುದು ಅದರ ಜೊತೆಗೆ ಮಾಕ್ ಡ್ರಿಲ್​ಗಳನ್ನು ಮಾಡಿಸಲಾಗುವುದು’ ಎಂದಿದ್ದಾರೆ ಪವನ್ ಕಲ್ಯಾಣ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ