
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಎರಡು ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಅಭಿಮಾನಿಗಳಿಗಿತ್ತು. ಹಲವು ಕಾರಣಗಳಿಗೆ ಸಿನಿಮಾ ಬಹಳ ತಡವಾಗಿ ಬಿಡುಗಡೆ ಆಗಿತ್ತು. ಪವನ್ ಕಲ್ಯಾಣ್, ಉಪ ಮುಖ್ಯಮಂತ್ರಿ ಆದ ಬಳಿಕ ಬಿಡುಗಡೆ ಆದ ಮೊದಲ ಸಿನಿಮಾ ಆಗಿದೆ. ಆದರೆ ಈ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಚಿತ್ರಮಂದಿರದಲ್ಲಿ ಕಾಣಲಿಲ್ಲ.
‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆದ ಮೊದಲ ದಿನ ಉತ್ತಮ ಕಲೆಕ್ಷನ್ ಆಗಿತ್ತು. ಆದರೆ ಮೊದಲ ದಿನವೇ ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ಹಬ್ಬಿದ ಕಾರಣ ಸಿನಿಮಾದ ಕಲೆಕ್ಷನ್ ಧಾರುಣವಾಗಿ ತಗ್ಗಿತು. ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳ ಬಳಿಕ ಸಿನಿಮಾದ ಒಟ್ಟು ಕಲೆಕ್ಷನ್ 82 ಕೋಟಿಗಳು ಮಾತ್ರವೇ ಆಗಿದ್ದು, ಸಿನಿಮಾಕ್ಕೆ ಹಾಕಿರುವ ಬಂಡವಾಳದ ಅರ್ಧದಷ್ಟು ಸಹ ಇನ್ನೂ ವಾಪಸ್ಸಾಗಿಲ್ಲ. ಸಿನಿಮಾದ ಒಟಿಟಿ ಹಕ್ಕುಗಳ ಮೇಲೆ ಈಗ ನಿರ್ಮಾಪಕ ಅವಲಂಬಿತವಾಗಿದ್ದಾರೆ.
ತಮ್ಮ ರಾಜಕೀಯ ಅಜೆಂಡಾಗಳನ್ನು ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ಪವನ್ ಕಲ್ಯಾಣ್ ತೂರಿಸಿದ್ದಾರೆ ಎಂಬ ಟೀಕೆ ಸಿನಿಮಾ ಬಿಡುಗಡೆ ಆದಾಗ ವ್ಯಕ್ತವಾಗಿತ್ತು. ಈಗ ಸಿನಿಮಾ ಫ್ಲಾಪ್ ಆದ ಬಳಿಕವೂ ಅದನ್ನು ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಧರ್ಮ ರಕ್ಷಕನಾಗಿ ಕಾಣಿಸಿಕೊಂಡಿದ್ದರು ಪವನ್ ಕಲ್ಯಾಣ್, ಜೊತೆಗೆ ತಾವು ಮುಸ್ಲೀಮರ ಪರ ಎನ್ನುವಂತೆಯೂ ಬಿಂಬಿಸಿಕೊಂಡಿದ್ದರು. ಇದೀಗ ಸಿನಿಮಾವನ್ನು ಆಂಧ್ರ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ.
ಇದನ್ನೂ ಓದಿ:ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕಲ್ಯಾಣ್ ಕನಸು ಭಗ್ನ
ಔರಂಗಾಜೇಬನ ಕ್ರೂರತೆಯನ್ನು ತೋರಿಸುವ ಇದಾಗಿದ್ದು, ಇದೇ ಕಾರಣಕ್ಕೆ ಈಗ ಸಿನಿಮಾವನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ಹಿಂದುಗಳು ಅನುಭವಿಸಿದ್ದ ಕಷ್ಟಗಳ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಎಂಬ ಕಾರಣಕ್ಕೆ ಈ ಸಿನಿಮಾವನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ಜೊತೆಗೆ ಸನಾತನ ಧರ್ಮದ ಮಹತ್ವ ಸಾರುವ ಕಾರಣಕ್ಕಾಗಿ ಸಿನಿಮಾವನ್ನು ತೋರಿಸಲಾಗುತ್ತಿದೆ.
ಪವನ್ ಕಲ್ಯಾಣ್, ಸಿನಿಮಾ ಚಿತ್ರಮಂದಿರಗಳನ್ನು ಆಡಳಿತಕ್ಕೆ ಮತ್ತು ರಾಜಕೀಯಕ್ಕೆ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿರುವ ಪವನ್ ಕಲ್ಯಾಣ್, ಸಿನಿಮಾ ಮಂದಿರಗಳಲ್ಲಿ ಹಳ್ಳಿಗಳೊಟ್ಟಿಗೆ ಆನ್ಲೈನ್ ಸಂವಾದ ಪ್ರಾರಂಭ ಮಾಡುವುದಾಗಿ ಘೋಷಿಸಿದ್ದಾರೆ. ಪ್ರತಿ ಪಂಚಾಯಿತಿಯ ಜನರೊಟ್ಟಿಗೆ ಅವರಿಗೆ ಹತ್ತಿರವಿರುವ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್ ವಿಡಿಯೋ ಸಂವಾದ ಮಾಡುತ್ತಾರೆ ಎಂದು ಕೆಲ ವಾರಗಳ ಹಿಂದೆ ಘೋಷಿಸಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Tue, 5 August 25