ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕಲ್ಯಾಣ್ ಕನಸು ಭಗ್ನ
Hari Hara Veera Mallu Collection: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲು ವಿಫಲವಾಗಿದೆ. 250 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರ ಕೇವಲ 79 ಕೋಟಿ ರೂಪಾಯಿ ಮಾತ್ರ ಸಂಗ್ರಹಿಸಿದೆ. ಪ್ರಾರಂಭಿಕ ದಿನಗಳಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ, ದಿನ ಕಳೆದಂರೆ ಗಳಿಕೆ ಕುಸಿದಿದೆ.

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ (Hari Hara Veera Mallu) ಸಿನಿಮಾ ಸೂಪರ್ ಹಿಟ್ ಆಗಬಹುದು ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ, ಊಹೆ ತಪ್ಪಾಗಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಹೀನಾಯ ಸ್ಥಿತಿ ತಲುಪಿದೆ. ಅದರಲ್ಲೂ ಮಂಗಳವಾರದ ಗಳಿಕೆ ನೋಡಿದ ನಿರ್ಮಾಪಕರ ಕಣ್ಣಲ್ಲಿ ಆತಂಕದ ಛಾಯೆ ಮೂಡಿದೆ. 250 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಕೇವಲ 79 ಕೋಟಿ ರೂಪಾಯಿ. ಕಳೆದ ವಾರಕ್ಕಿಂತ ಈ ವಾರದ ಕಲೆಕ್ಷನ್ ಮತ್ತಷ್ಟು ಹೀನಾಯ ಎನಿಸಿಕೊಂಡಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಪ್ರೀಮಿಯರ್ ಶೋಗಳಿಂದ 12.75 ಕೋಟಿ ರೂಪಾಯಿ ಹಾಗೂ ಮೊದಲ ದಿನದ ಕಲೆಕ್ಷನ್ನಿಂದ 34.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇವೆರಡು ಸೇರಿದರೆ 47.50 ಕೋಟಿ ರೂಪಾಯಿ ಆಗಲಿದೆ. ಇದಾದ ಬಳಿಕ ಸಿನಿಮಾ ಐದು ದಿನಗಳಲ್ಲಿ ಕಲೆಕ್ಷನ್ ಮಾಡಿದ್ದು ಕೇವಲ 32 ಕೋಟಿ ರೂಪಾಯಿ. ಶನಿವಾರ ಹಾಗೂ ಭಾನುವಾರ ಚಿತ್ರಕ್ಕೆ ಸ್ವಲ್ಪ ಒಳ್ಳೆಯ ಕಲೆಕ್ಷನ್ ಆಗಿದೆ. ಈ ವಾರ ಚಿತ್ರದ ಸ್ಥಿತಿ ಹೀನಾಯವಾಗಿದೆ.
ಸೋಮವಾರ (ಜುಲೈ 28) ಚಿತ್ರ ಕೇವಲ 2.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಂಗಳವಾರ (ಜುಲೈ 29) ಸಿನಿಮಾ ಗಳಿಸಿದ್ದು 1.75 ಕೋಟಿ ರೂಪಾಯಿ. ವಾರದ ಮೊದಲೆರಡು ದಿನದ ಗಳಿಕೆ ಸೇರಿದರೆ 3.85 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದೇ ಎರಡು ದಿನಗಳಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ ಕನ್ನಡದ ಸಿನಿಮಾ ‘ಸು ಫ್ರಮ್ ಸೋ’ ಸಿನಿಮಾ 6 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕಲ್ಯಾಣ್ ಚಿತ್ರಕ್ಕೆ ಕುಂಟುವುದೊಂದೇ ಆಯ್ಕೆ
ದಿನ ಕಳೆದಂತೆ ‘ಹರಿ ಹರ ವೀರ ಮಲ್ಲು’ ಮತ್ತಷ್ಟು ಕಡಿಮೆ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಶುಕ್ರವಾರದ ವೇಳೆಗೆ ಶೋ ಸಂಖ್ಯೆ ಮತ್ತಷ್ಟು ಇಳಿಕೆ ಕಾಣಲಿದೆ. ಹೀಗಾಗಿ, ಸಿನಿಮಾದ 100 ಕೋಟಿ ರೂಪಾಯಿ ಕನಸು ಕನಸಾಗಿಯೇ ಉಳಿಯಲಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಈಗ ಈ ರೀತಿಯ ಸೋಲು ಕಂಡರೆ ಅವರು ನಟನೆಯಿಂದ ಮತ್ತಷ್ಟು ದೂರವೇ ಉಳಿದುಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








