ಸೋಮವಾರವೂ ಭಾನುವಾರದಷ್ಟೇ ಗಳಿಸಿದ ‘ಸು ಫ್ರಮ್ ಸೋ’; ಕಲೆಕ್ಷನ್ನಲ್ಲಿ ರಾಜ್ ಬಿ. ಶೆಟ್ಟಿ ದಾಖಲೆ
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕನ್ನಡ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಸೋಮವಾರದ ಗಳಿಕೆ ಭಾನುವಾರಕ್ಕಿಂತ ಹೆಚ್ಚಾಗಿದೆ. ಸಿನಿಮಾದ ಒಟ್ಟಾರೆ ಗಳಿಕೆ 11.05 ಕೋಟಿ ರೂಪಾಯಿ ದಾಟಿದೆ. ಉತ್ತಮ ವಿಮರ್ಶೆಗಳು ಮತ್ತು ಪ್ರದರ್ಶನದ ಹೆಚ್ಚಳ ಇದಕ್ಕೆ ಕಾರಣ.

ಸಿನಿಮಾ ನೋಡಲು ಜನ ಬರುತ್ತಿಲ್ಲ ಎನ್ನುವ ಆರೋಪವನ್ನು ಸಿನಿಮಾ ತಂಡದವರು ಮಾಡುತ್ತಿದ್ದಾರೆ. ಆದರೆ, ಒಳ್ಳೆಯ ಸಿನಿಮಾ ಮಾಡಿದರೆ ಜನರು ಥಿಯೇಟರ್ಗೆ ಬರುತ್ತಾರೆ ಎಂಬುದಕ್ಕೆ ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ (Su From So) ಒಳ್ಳೆಯ ಉದಾಹರಣೆ. ರಂಗಭೂಮಿ ಪ್ರತಿಭೆಗಳನ್ನೇ ಇಟ್ಟುಕೊಂಡು ಮಾಡಲಾದ ಈ ಚಿತ್ರ ಸೋಮವಾರದ (ಜುಲೈ 28) ಗಳಿಕೆಯಲ್ಲಿ ದಾಖಲೆ ಬರೆದಿದೆ. ಭಾನುವಾರಕ್ಕಿಂತ ಹೆಚ್ಚಿನ ಕಲೆಕ್ಷನ್ ಸೋಮವಾರ ದಆಗಿದೆ ಅನ್ನೋದು ವಿಶೇಷ.
‘ಸು ಫ್ರಮ್ ಸೋ’ ಸಿನಿಮಾ ಶುಕ್ರವಾರ (ಜುಲೈ 25) ರಿಲೀಸ್ ಆಯಿತು. ಬಿಡುಗಡೆಗೂ ಮೊದಲೇ ಸಿನಿಮಾ ತಂಡ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಿದ್ದರಿಂದ ತಂಡಕ್ಕೆ ಮೈಲೇಜ್ ಸಿಕ್ಕಿತ್ತು. ಸಿನಿಮಾ ರಿಲೀಸ್ ಆದ ಬಳಿಕ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ವಿಮರ್ಶೆ ಜನರನ್ನು ಥಿಯೇಟರ್ನತ್ತ ಸೆಳೆಯಿತು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 11.05 ಕೋಟಿ ರೂಪಾಯಿ ಹಾಗೂ ಭಾರತದ ಬಾಕ್ಸ್ ಆಫೀಸ್ನಲ್ಲಿ 9.5 ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ.
ಭಾನುವಾರ ಈ ಚಿತ್ರ 3.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ವಾರದ ಮೊದಲ ದಿನ ಆದ್ದರಿಂದ ಸೋಮವಾರ ಚಿತ್ರದ ಗಳಿಕೆಯಲ್ಲಿ ಇಳಿಕೆ ಕಾಣುತ್ತದೆ. ಆದರೆ, ಭಾನುವಾರಕ್ಕೆ ಸರಿಸಮಾನವಾಗಿ ಸಿನಿಮಾ ಗಳಿಕೆ ಮಾಡಿದೆ. ಈ ಚಿತ್ರ ಸೋಮವಾರ 3.05 ಕೋಟಿ ರೂಪಾಯಿ ಗಳಿಸಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ವಿಶೇಷ ದಾಖಲೆಯೇ ಸರಿ.
ಸಿನಿಮಾ ಗಳಿಕೆಯಲ್ಲಿ ಏರಿಕೆ ಕಾಣಲು ಚಿತ್ರದ ಶೋಗಳ ಸಂಖ್ಯೆ ಏರಿದ್ದು ಕೂಡ ಕಾರಣ. ಭಾನುವಾರದವರೆಗೆ ಅನೇಕ ಕಡೆಗಳಲ್ಲಿ ‘ಎಕ್ಕ’, ‘ಹರಿ ಹರ ವೀರ ಮಲ್ಲು’ ಹಾಗೂ ‘ಜೂನಿಯರ್’ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಅದರ ಬದಲು ಈಗ ‘ಸು ಫ್ರಮ್ ಸೋ’ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ವಾರದ ದಿನ ಇಷ್ಟು ಗಳಿಕೆ ಆಗಲು ಇದು ಕೂಡ ಕಾರಣ.
ಇದನ್ನೂ ಓದಿ: ‘ಸು ಫ್ರಮ್ ಸೋ’ನಲ್ಲಿ ಭಾನು ಆಗಿ ಮನಗೆದ್ದ ಸಂಧ್ಯಾ ಅರಕೆರೆ ಬಗೆಗಿನ ಅಪರೂಪದ ಮಾಹಿತಿ
ಜೆಪಿ ತುಮಿನಾಡ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ, ಮೈಮ್ ರಾಮದಾಸ್ ಪ್ರಕಾಶ್ ತುಮಿನಾಡ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Tue, 29 July 25








