
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆಯೇ ಆಗುವುದಿಲ್ಲ ಎನ್ನಲಾಗಿತ್ತು. ಸಿನಿಮಾದ ಚಿತ್ರೀಕರಣವೇ ನಿಂತು ಹೋಗಿದೆ, ಪವನ್ ಕಲ್ಯಾಣ್, ಮರಳಿ ಚಿತ್ರೀಕರಣ ಮುಂದುವರೆಸುವುದಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಹಾಗೋ-ಹೀಗೋ ಮಾಡಿ ಏನೇನೋ ಅಡ್ಜಸ್ಟಮೆಂಟ್ಗಳ ಬಳಿಕ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ಮುಗಿಸಲಾಗಿದೆ. ಇದೀಗ ಸಿನಿಮಾ ಬಿಡುಗಡೆಯ ಹೊಸ ದಿನಾಂಕವನ್ನೂ ಸಹ ಘೋಷಣೆ ಮಾಡಲಾಗಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಐದು ವರ್ಷದ ಹಿಂದೆ ಅಂದರೆ 2020 ರಲ್ಲಿ ಘೋಷಣೆಯಾಯ್ತು. ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ವೇಳೆಯಲ್ಲಿಯೇ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಧುಮುಕಿದರು. ಸತತ ಪ್ರಚಾರದ ಬಳಿಕ ಚುನಾವಣೆಯಲ್ಲಿ ಗೆಲುವು ಸಹ ಸಾಧಿಸಿ, ಉಪ ಮುಖ್ಯ ಮಂತ್ರಿಯಾದರು. ಆ ಬಳಿಕ ರಾಜಕೀಯ, ಆಡಳಿತದಲ್ಲಿ ಬ್ಯುಸಿ ಆದ ಪವನ್ ಕಲ್ಯಾಣ್ ಸಿನಿಮಾ ರಂಗದಿಂದ ದೂರಾದರು.
ಕೊನೆಗೆ ಹಾಗೋ ಹೀಗೋ ಮಾಡಿ ನಿರ್ಮಾಪಕರು ಪವನ್ ಕಲ್ಯಾಣ್ ಅವರನ್ನು ಒಪ್ಪಿಸಿ, ಅವರಿಗೆ ಅನುಕೂಲಕರ ಪ್ರದೇಶದಲ್ಲಿ ಸೆಟ್ ನಿರ್ಮಿಸಿ, ಕತೆಯನ್ನು ಸಂಭಾಷಣೆಗಳನ್ನು ಅವರ ರಾಜಕಾರಣಿ ಇಮೇಜಿಗೆ ತಕ್ಕಂತೆ ಬದಲಿಸಿ ಚಿತ್ರೀಕರಣಕ್ಕೆ ಎಲ್ಲ ತಯಾರಿ ಮಾಡಿದರು. ಅಷ್ಟರಲ್ಲೇ ಪವನ್ರ ಪುತ್ರನಿಗೆ ಅಪಘಾತವಾಗಿ ಮತ್ತೆ ಚಿತ್ರೀಕರಣ ಮುಂದಕ್ಕೆ ಹೋಯ್ತು. ಆ ಬಳಿಕ ಶೆಡ್ಯೂಲ್ ಬದಲಿಸಿ ಕೆಲವು ದಿನಗಳ ಹಿಂದಷ್ಟೆ ಚಿತ್ರೀಕರಣ ಮುಗಿಸಿದರು. ಈ ಮೊದಲು ಈ ಸಿನಿಮಾ ಮೇ 9 ರಂದು ಬಿಡುಗಡೆ ಆಗುವುದೆಂದು ಘೋಷಿಸಲಾಗಿತ್ತು. ಆದರೆ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ತಡವಾದ ಕಾರಣ ಈಗ ಕೊನೆಗೂ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:‘ಓಜಿ’ ಶೂಟಿಂಗ್ ಪ್ರಾರಂಭಿಸಿದ ಪವನ್ ಕಲ್ಯಾಣ್, ಸಾಕಷ್ಟು ಬದಲಾವಣೆ
‘ಹರಿ ಹರ ವೀರ ಮಲ್ಲು’ ಸಿನಿಮಾ ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಮೊದಲು ‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಎರಡು ಭಾಗಗಳಲ್ಲಿ ತೆರೆಗೆ ತರುವುದಾಗಿ ಹೇಳಲಾಗಿತ್ತು. ಆ ನಂತರ ಆ ಐಡಿಯಾ ಕೈಬಿಟ್ಟಿದ್ದಾಗಿ ವರದಿಯಾಗಿತ್ತು. ಆದರೆ ಈಗ ಬಿಡುಗಡೆ ಆಗುತ್ತಿರುವುದು ಮೊದಲ ಭಾಗವೇ ಆಗಿದೆ. ಮೊದಲ ಭಾಗಕ್ಕೆ ‘ಸೋರ್ಡ್ vs ಸ್ಪಿರಿಟ್’ ಎಂದು ಹೆಸರಿಡಲಾಗಿದೆ.
ಅಸಲಿಗೆ ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ‘ಹರಿ ಹರ ವೀರ ಮಲ್ಲು’ ಸಿನಿಮಾ ಅದೇ ಸಮಯದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಚಿರಂಜೀವಿ ನಟನೆಯ ಸಿನಿಮಾವನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ‘ವಿಶ್ವಂಭರ’ ಸಿನಿಮಾದ ಬಿಡುಗಡೆ ದಿನಾಂಕಗಳು ಮುಂದೂಡಲ್ಪಡುತ್ತಲೇ ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ