ಅಸ್ತವ್ಯಸ್ತವಾದ ‘ಓಜಿ’ ಪ್ರೀ ರಿಲೀಸ್ ಕಾರ್ಯಕ್ರಮ, ಪವನ್ ಅಭಿಮಾನಿಗಳಿಗೆ ನಿರಾಸೆ

Pawan Kalyan filmography: ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಇಂದು (ಸೆಪ್ಟೆಂಬರ್ 21) ರಂದು ಹೈದರಾಬಾದ್​​​ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರು. ಆದರೆ ಕಾರ್ಯಕ್ರಮ ಬಹಳ ಅಸ್ತವ್ಯಸ್ತವಾಯ್ತು.

ಅಸ್ತವ್ಯಸ್ತವಾದ ‘ಓಜಿ’ ಪ್ರೀ ರಿಲೀಸ್ ಕಾರ್ಯಕ್ರಮ, ಪವನ್ ಅಭಿಮಾನಿಗಳಿಗೆ ನಿರಾಸೆ
Pawan Kalyan

Updated on: Sep 21, 2025 | 11:01 PM

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಓಜಿ’ ಸಿನಿಮಾ ಟ್ರೈಲರ್ ಇಂದು (ಸೆಪ್ಟೆಂಬರ್ 21) ಬಿಡುಗಡೆ ಆಗಬೇಕಿತ್ತು. ಆದರೆ ಬಿಡುಗಡೆಯನ್ನು ಮುಂದೂಡಿ ಇದೇ ದಿನ ಸಂಜೆ ನಡೆಯಲಿರುವ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ ಎಂದಿದ್ದರು. ಹೈದರಾಬಾದ್​​ನ ಎಲ್​​ವಿ ಗ್ರೌಂಡ್​​​ನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಇಡೀ ಕಾರ್ಯಕ್ರಮ ಅಸ್ತವ್ಯಸ್ಥವಾಗಿ ಹೋಯ್ತು. ನಿರೀಕ್ಷಿಸಿದಂತೆ ಏನೂ ನಡೆಯಲಿಲ್ಲ.

ತಮನ್ ಕಾನ್ಸರ್ಟ್ ಅನ್ನು ಪ್ರೀ ರಿಲೀಸ್​​ನಲ್ಲಿ ಆಯೋಜಿಸಲಾಗಿತ್ತು. ಭಾರಿ ಸಂಖ್ಯೆಯ ಜನ ಪ್ರೀ ರಿಲೀಸ್​​​ನಲ್ಲಿ ಭಾಗಿ ಆಗಿದ್ದರು. ಅದ್ಧೂರಿ ಓಪನ್ ವೇದಿಕೆಯನ್ನು ಕಾರ್ಯಕ್ರಮಕ್ಕಾಗಿ ನಿರ್ಮಾಣ ಮಾಡಲಾಗಿತ್ತು. 4 ಗಂಟೆಗೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ಬಹಳ ತಡವಾಗಿ ಸುಮಾರು 8 ಗಂಟೆ ವೇಳೆಗೆ ಆರಂಭವಾಯ್ತು. ನಿರ್ಮಾಪಕ ಅಲ್ಲು ಅರವಿಂದ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಯ್ತು.

ಮಳೆಯ ನಡುವೆಯೇ ನಟ ಪವನ್ ಕಲ್ಯಾಣ್, ಕಪ್ಪು ಬಟ್ಟೆ ಧರಿಸಿ, ಕೈಯಲ್ಲಿ ಜಪಾನಿ ಆಯುಧ ಕಠಾನಾ ಅನ್ನು ಹಿಡಿದು ಸ್ಟೈಲ್ ಆಗಿ ವೇದಿಕೆ ಮೇಲೆ ಬಂದರು. ಆದರೆ ಮಳೆಯ ಆಟದ ಮುಂದೆ ನಟರ ಸ್ಟೈಲ್ ನಡೆಯಲಿಲ್ಲ. ವೇದಿಕೆ ಮೇಲೆ ಕೊಡೆಗಳು ರಾರಾಜಿಸಿದವು, ಇಡೀ ಕಾರ್ಯಕ್ರಮವೇ ಅಸ್ಥವ್ಯಸ್ಥವಾಯ್ತು. ಪವನ್ ಕಲ್ಯಾಣ್ ಜಪಾನಿ ಡೈಲಾಗ್​​ಗಳನ್ನು ವೇದಿಕೆ ಮೇಲೆ ಹೇಳಿದರು. ಬಳಿಕ ಕೆಲ ಹೊತ್ತು ಸಿನಿಮಾ ಬಗ್ಗೆ ಮಾತನಾಡಿದರು.

ಇದನ್ನೂ ಓದಿ:ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ ಲಕ್ಷಗಳಿಗೆ ಹರಾಜು, ಕೊಂಡವರ್ಯಾರು?

ಆ ಬಳಿಕ ಟ್ರೈಲರ್ ಬಿಡುಗಡೆಗೆ ಮುಂದಾದರಾದರೂ ಟ್ರೈಲರ್ ಇನ್ನೂ ಪೂರ್ಣವಾಗಿ ರೆಡಿ ಆಗಿರಲೇ ಇಲ್ಲ. ಆದರೆ ಪವನ್ ಕಲ್ಯಾಣ್, ಈಗಲೇ ಟ್ರೈಲರ್ ಬಿಡುಗಡೆ ಮಾಡಬೇಕು, ಅದು ಹೇಗಾದರೂ ಇದ್ದರೂ ಸರಿಯೇ ಎಂದರು. ಕೊನೆಗೆ ಪವನ್ ಕಲ್ಯಾಣ್ ಒತ್ತಾಯಕ್ಕೆ ಮಣಿದು ನಿರ್ದೇಶಕ ಸುಜಿತ್ ಇನ್ನೂ ಪೂರ್ಣಗೊಳ್ಳದ ಟ್ರೈಲರ್ ಅನ್ನೇ ಪ್ರದರ್ಶಿಸಿದರು. ಟ್ರೈಲರ್ ಪ್ರದರ್ಶನದ ಬಳಿಕ ಕಾರ್ಯಕ್ರಮದ ಲೈವ್ ನಿಂತೇ ಹೋಯ್ತು.

ಸಿನಿಮಾದ ಟ್ರೈಲರ್ ಅನ್ನು ವೇದಿಕೆ ಮೇಲೆ ಒಮ್ಮೆ ಪ್ರದರ್ಶಿಸಿದರಾದರೂ ಆ ಬಳಿಕ ಯೂಟ್ಯೂಬ್​​​ಗೆ ಬಿಡುಗಡೆ ಮಾಡಲಿಲ್ಲ. ಅತಿಥಿಯಾಗಿ ಬಂದಿದ್ದ ಅಲ್ಲು ಅರವಿಂದ್ ಅವರು ವೇದಿಕೆಗೇ ಬರಲಿಲ್ಲ. ಒಟ್ಟಾರೆ ಇಡೀ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 pm, Sun, 21 September 25