ತಿರುಪತಿ ಲಡ್ಡು ವಿವಾದ: ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್

|

Updated on: Sep 22, 2024 | 7:24 AM

Pawan Kalyan: ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ 11 ದಿನಗಳ ದೀಕ್ಷೆ ಸ್ವೀಕರಿಸಿದ್ದಾರೆ. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾದ ಬೆನ್ನಲ್ಲೆ ದೇವರಿಗೆ ಕ್ಷಮೆ ಕೇಳುವ ಕಾರಣಕ್ಕಾಗಿ ಈ 11 ದಿನಗಳ ದೀಕ್ಷೆಯನ್ನು ಪವನ್ ಕಲ್ಯಾಣ್ ಸ್ವೀಕಾರ ಮಾಡಿದ್ದಾರೆ.

ತಿರುಪತಿ ಲಡ್ಡು ವಿವಾದ: ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್
ತಿರುಪತಿ ಲಡ್ಡು
Follow us on

ದೇಶದ ಪ್ರಮುಖ ಧಾರ್ಮಿಕ ಸ್ಥಳ ತಿರುಪತಿ, ಈ ಕ್ಷೇತ್ರದ ಪ್ರಸಾದವಾದ ಲಡ್ಡುಗೆ ವಿಶೇಷ ಮಹತ್ವವಿದೆ. ಆದರೆ ಇದೀಗ ತಿರುಪತಿ ಲಡ್ಡು ಮಾಡಲು ಬಳಸಲಾಗುತ್ತಿದ್ದ ತುಪ್ಪದಲ್ಲಿ ದನದ ಕೊಬ್ಬು, ಹಂದಿ ಕೊಬ್ಬು, ಮೀನಿನ ಎಣ್ಣೆ ಪತ್ತೆಯಾಗಿದ್ದು ಭಕ್ತರಿಗೆ ತೀವ್ರ ಆತಂಕ ಎದುರಾಗಿದೆ. ತಿರುಪತಿ ಲಡ್ಡು ಮಾಡಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಪತ್ತೆಯಾಗಿರುವ ವಿಷಯ ರಾಷ್ಟ್ರದಾದ್ಯಂತ ದೊಡ್ಡ ಸುದ್ದಿಯಾಗಿದೆ. ಆಂಧ್ರ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದ್ದು, ದೂರು ಸಹ ದಾಖಲಾಗಿದೆ. ಇದರ ನಡುವೆ ಆಂಧ್ರ ಡಿಸಿಎಂ, ತಿರುಪತಿ ವೆಂಕಟೇಶ್ವರ ಸ್ವಾಮಿಯ ಕ್ಷಮೆ ಕೋರಿ 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಳ್ಳುತ್ತಿದ್ದಾರೆ.

ಈ ಬಗ್ಗೆ ಹೇಳಿಕೆ ಹೊರಡಿಸಿರುವ ನಟ, ಡಿಸಿಎಂ ಪವನ್ ಕಲ್ಯಾಣ್, ‘ತಿರುಪತಿ ಲಡ್ಡು ಅಂದರೆ, ಅಮೃತ ಸಮವಾಗಿ, ಪರಮ ಪವಿತ್ರವಾಗಿ ಭಾವಿಸಲ್ಪಡುತ್ತದೆ. ಅದು, ಹಿಂದಿನ ಪಾಲಕರ ವಿಕೃತ ಚೇಷ್ಠೆಗಳ ಫಲವಾಗಿ ಅಪವಿತ್ರವಾಗಿದೆ. ಜಂತು ಅವಶೇಷಗಳಿಂದ ಮಲಿನವಾಗಿದೆ. ಮನುಷ್ಯತ್ವವನ್ನು ಕಳೆದುಕೊಂಡವರು ಮಾತ್ರ ಇಂಥಹ ಪಾಪಕಾರ್ಯವನ್ನು ಮಾಡಬಲ್ಲರು. ಈ ಪಾಪವನ್ನು ಮೊದಲೇ ಕಂಡು ಹಿಡಿಯಲಾಗದ್ದು ನಮ್ಮ ದುರಾದೃಷ್ಟವೆಂದು ಹೇಳಬಹುದು. ಲಡ್ಡು ಪ್ರಸಾದದಲ್ಲಿ ಜಂತು ಅವಶೇಷಗಳಿವೆಯೆಂದು ಗೊತ್ತಾದ ತಕ್ಷಣ ನನ್ನ ಮನಸ್ಸು ವ್ಯಾಕುಲಗೊಂಡಿತು. ಅಪರಾಧಭಾವನೆಗೀಡಾಗಿತ್ತು. ಪ್ರಜೆಗಳ ಕ್ಷೇಮ ಮತ್ತು ಅಭಿವೃದ್ಧಿಗಳ ಬಗ್ಗೇನೇ ಯೋಚನೆ ಮಾಡುತ್ತ ಹೋರಾಡುವ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಈ ವಿಚಾರವನ್ನು ಮೊದಲೇ ಕಂಡುಹಿಡಿಯಲಾಗದ ನನ್ನ ಪರಿಸ್ಥಿತಿಯನ್ನು ಕಂಡು ಅತೀವ ಖೇದವುಂಟಾಗಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇ ಬೇಕಾಗಿದೆ’ ಎಂದಿದ್ದಾರೆ.

‘ಅದೇ ಕಾರಣಕ್ಕೆ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡುವ ಸಂಕಲ್ಪವನ್ನು ಕೈಗೊಂಡಿದ್ದೇನೆ. 22 ಸೆಪ್ಟೆಂಬರ್ 2024 ರಂದು ಅಂದರೆ ಭಾನುವಾರದ ಬೆಳಗ್ಗೆ ಗುಂಟೂರು ಜಿಲ್ಲೆಯ ನಂಬೂರಿನಲ್ಲಿ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ಕೈಗೊಳ್ಳುತ್ತಿದ್ದೇನೆ. ಅಂದಿನಿಂದ ಹನ್ನೊಂದು ದಿನಗಳ ಕಾಲವು ದೀಕ್ಷೆಯನ್ನು ಮಾಡುತ್ತೇನೆ. ಅನಂತರ ತಿರುಮಲ ಶ್ರೀ ವೇಂಕಟೇಶ್ವರ ಸ್ವಾಮಿಯವರ ದರ್ಶನಮಾಡಿಕೊಳ್ಳುತ್ತೇನೆ. “ಓ ದೇವಾಧಿ ದೇವಾ… ಹಿಂದಿನ ಪಾಲಕರು ಮಾಡಿದ ಪಾಪಗಳನ್ನು ಶುದ್ಧೀಕರಿಸುವ ಶಕ್ತಿಯನ್ನು ಪ್ರಸಾದಿಸು ತಂದೇ” ಅಂತ ಬೇಡಿಕೊಳ್ಳುತ್ತೇನೆ. ದೇವರಲ್ಲಿ ನಂಬಿಕೆ ಪಾಪಭೀತಿ ಇಲ್ಲದವರು ಮಾತ್ರ ಇಂಥಹ ಅಕೃತ್ಯಗಳನ್ನು ಮಾಡ ಬಲ್ಲರು. ನನ್ನ ವೇದನೆ ಏನಂದರೆ, ತಿರುಮಲ ತಿರುಪತಿ ದೇವಸ್ಥಾನವೆಂಬ ದೈವಿಕ ವ್ಯವಸ್ಥೆಯಲ್ಲಿ ಬೋರ್ಡು ಸದಸ್ಯರಾಗಲಿ ಅಧಿಕಾರಿಗಳು ಉದ್ಯೋಗಿಗಳಾಗಲಿ ಯಾರೂ ಈ ವಿಚಾರವನ್ನು ಕಂಡುಹಿಡಿಯದಿರುವುದು, ನೋಡಿದರೂ ಸುಮ್ಮನಿರುವುದು. ಅಂದಿನ ಪಾಲಕರ ದುರ್ಮಾರ್ಗ ದೌಷ್ಟ್ಯಗಳಿಗೆ ಹೆದರಿಕೊಂಡು ಸುಮ್ಮನಿದ್ದರಬಹುದು. ಕಲಿಯುಗದ ಭೂಲೋಕ ವೈಕುಂಠವೆಂದೇ ಭಾವಿಸುವ ತಿರುಮಲೆಯ ಪವಿತ್ರತೆ ಮತ್ತು ವಿಶಿಷ್ಟತೆತೆಗಳಿಗೆ ಕುಂದು ತರುವಂಥಹ ಈ ಹೀನಾಯವಾದ ಕೆಲಸವು ಹಿಂದು ಧರ್ಮಾವಲಂಬಿಗಳಿಗೆ ಮಾತ್ರವಲ್ಲ ಮನುಷ್ಯತ್ವವಿರುವ ಮಾನವರೆಲ್ಲದಿಗೂ ಖೇದವನ್ನುಂಟುಮಾಡಿತು. ಲಡ್ಡು ತಯಾರಿಯಲ್ಲಿ ಪ್ರಾಣಿಗಳ ಅವಶೇಷಗಳನ್ನು ಬೆರೆಸಿದ ತುಪ್ಪವನ್ನು ಬಳಸಿದರೆಂಬ ವಿಚಾರವು ತಿಳಿದಾಗಲಿಂದ ಎಲ್ಲರೂ ಕಗ್ಗಾಲಾದರು. ಹಿಂದೂಧರ್ಮವನ್ನು ಅದರ ಸಂಸ್ಕೃತಿಯನ್ನು ಉದ್ದರಿಸಬೇಕಾದ ಕಾಲವಿದು. ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳ ಬೇಕಾದ ಕಾಲವಿದು. ನಮ್ಮಧರ್ಮವನ್ನು ನಾವು ಕಾಪಾಡಿಕೊಳ್ಳೋಣ’ ಎಂದಿದ್ದಾರೆ.

ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ಜಗನ್​ ಮೋಹನ್​ ರೆಡ್ಡಿಯನ್ನ ಬಂಧಿಸಿ ಎಂದ ಯತ್ನಾಳ್​

ಪವನ್ ಕಲ್ಯಾಣ್ ಅವರ ಈ ದೀಕ್ಷೆ ಆಚರಣೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸ್ತುತ ಕೃತ್ಯಕ್ಕೆ ಹಿಂದಿನ ಸರ್ಕಾರವನ್ನು ಹೊಣೆ ಮಾಡುವ ಉದ್ದೇಶದಿಂದಲೇ ಈ ದೀಕ್ಷೆ ಆಚರಿಸುವುದಾಗಿ ಹೇಳಿಕೆ ಬಿಡುಗಡೆ ಮಾಡಿದಂತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪವನ್ ಕಲ್ಯಾಣ್ ಕೈಗೊಂಡಿರುವ ದೀಕ್ಷೆಯನ್ನು ಬೆಂಬಲಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ