ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್

ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಖ್ಯಾತ ನಟರಾದ ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್
Narendra Modi, S Janaki, Vijay

Updated on: Jul 12, 2026 | 12:26 PM

ಮುಖ್ಯಾಂಶಗಳು

  • ಮೈಸೂರಿನಲ್ಲಿ ನಿಧನರಾದ ಹಿರಿಯ ಗಾಯಕಿ ಎಸ್. ಜಾನಕಿ ಅವರಿಗೆ ಗಣ್ಯರ ನಮನ.
  • ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.
  • ದಳಪತಿ ವಿಜಯ್, ಕಮಲ್ ಹಾಸನ್, ಚಿರಂಜೀವಿ ಮುಂತಾದ ಸೆಲೆಬ್ರಿಟಿಗಳ ಸಂತಾಪ.

ಭಾರತೀಯ ಚಿತ್ರರಂಗದ ಲೆಜೆಂಡರಿ ಸಿಂಗರ್, ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಗಾಯಕಿ ಎಸ್. ಜಾನಕಿ (88) ಅವರ ನಿಧನಕ್ಕೆ ದೇಶಾದ್ಯಂತ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್, ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖರು ಸೋಶಿಯಲ್ ಮೀಡಿಯಾ ಮೂಲಕ ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾವುಕರಾಗಿ ಜಾನಕಮ್ಮ ಅವರನ್ನು ಸ್ಮರಿಸಿದ್ದಾರೆ. ‘ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮನವರ ನಿಧನವು ಸಂಗೀತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿನ ಅವರ ಹಾಡುಗಳು ತಲೆಮಾರುಗಳಾದ್ಯಂತ ಜನಪ್ರಿಯವಾಗಿದ್ದವು. ಅವರು ಪ್ರತಿಯೊಂದು ಭಾವನೆಗೂ ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಗಾಯನದ ಮೂಲಕ ಧ್ವನಿಯಾಗಿದ್ದರು. ಅವರ ಸುಮಧುರ ಗೀತೆಗಳು ಮುಂಬರುವ ವರ್ಷಗಳಲ್ಲೂ ಕೇಳುಗರನ್ನು ಮಂತ್ರಮುಗ್ಧಗೊಳಿಸುವುದನ್ನು ಮುಂದುವರಿಸುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಸಂಖ್ಯಾತ ಅಭಿಮಾನಿಗಳು ಮತ್ತು ಇಡೀ ಸಂಗೀತ ಕ್ಷೇತ್ರಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.

ಭಾರತೀಯ ಸಂಗೀತ ಜಗತ್ತಿನ ಧ್ರುವತಾರೆ: ತಮಿಳುನಾಡು ಸಿಎಂ ವಿಜಯ್

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರು ಎಸ್. ಜಾನಕಿ ಅವರ ಕೊಡುಗೆಯನ್ನು ನೆನೆದು ಸಂತಾಪ ಸೂಚಿಸಿದ್ದಾರೆ. ‘ಭಾರತೀಯ ಚಲನಚಿತ್ರ ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ನೂರಾರು ತಲೆಮಾರುಗಳ ಹೃದಯ ಗೆದ್ದಿದ್ದ ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಗಲಿಕೆಯ ಸುದ್ದಿ ತೀವ್ರ ದುಃಖ ತಂದಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಅವರು ಸಂಗೀತ ಲೋಕದಲ್ಲಿ ಅಳಿಸದ ಮುದ್ರೆ ಒತ್ತಿದ್ದಾರೆ’ ಎಂದಿದ್ದಾರೆ.

‘ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅಸಂಖ್ಯಾತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು, ತಮ್ಮ ಮಧುರ ಕಂಠ, ಭಾವನೆಗಳನ್ನು ವ್ಯಕ್ತಪಡಿಸುವ ಅಸಾಧಾರಣ ಸಾಮರ್ಥ್ಯ ಮತ್ತು ಸಂಗೀತದ ಮೇಲಿನ ಅಚಲ ಭಕ್ತಿಯ ಮೂಲಕ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯುತ್ತಾರೆ. ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಸಿಎಂ ವಿಜಯ್ ಪೋಸ್ಟ್ ಮಾಡಿದ್ದಾರೆ.

ನನ್ನ ಸಿನಿ ಜರ್ನಿಯ ಹಿನ್ನೆಲೆ ಧ್ವನಿ ಅವರದ್ದಾಗಿತ್ತು: ಮೆಗಾಸ್ಟಾರ್ ಚಿರಂಜೀವಿ

ತೆಲುಗು ನಟ ಚಿರಂಜೀವಿ ಅವರು ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ‘ಜಾನಕಮ್ಮ ಅವರ ನಿಧನದ ಸುದ್ದಿ ನನ್ನ ಹೃದಯವನ್ನು ಕಲುಕಿದೆ. ನನ್ನ ಸಿನಿಮಾ ಜರ್ನಿಯಲ್ಲಿ, ಅಸಂಖ್ಯಾತ ಮರೆಯಲಾಗದ ಹಾಡುಗಳಿಗೆ ಅವರು ತಮ್ಮ ಅದ್ಭುತ ಧ್ವನಿಯನ್ನು ನೀಡಿದ್ದರು. ಪರದೆಯ ಮೇಲಿನ ನಮ್ಮ ಭಾವನೆಗಳಿಗೆ ಜೀವ ನೀಡಿದ್ದು ಅವರ ಧ್ವನಿ. ನನ್ನ ವೃತ್ತಿಜೀವನದಲ್ಲಿ ಪ್ರೇಕ್ಷಕರು ನೆನಪಿಸಿಕೊಳ್ಳುವ ನೂರಾರು ಹಾಡುಗಳ ಹಿಂದೆ ಜಾನಕಮ್ಮ ಅವರ ಮಧುರ ಧ್ವನಿಯಿದೆ. ಇಂದು ನಾವು ಸಂಗೀತ ಲೋಕದ ಎತ್ತರದ ಶಿಖರವನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಹಾಡು ತಲೆಮಾರುಗಳವರೆಗೆ ಸ್ಫೂರ್ತಿಯಾಗಿ ಸದಾ ಪ್ರತಿಧ್ವನಿಸುತ್ತದೆ’ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:

ಸೂಪರ್‌ಸ್ಟಾರ್ ರಜನಿಕಾಂತ್ ಅವರು ಎಕ್ಸ್‌ನಲ್ಲಿ ಬರೆಯುತ್ತಾ, ‘ತಮ್ಮ ಜೇನಿನಂತಹ ಮಧುರ ಧ್ವನಿಯಿಂದ ತಲೆಮಾರುಗಳ ಜನರನ್ನು ರಂಜಿಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿದ್ದಾರೆ. ಜಾನಕಿ ಅವರಿಗೆ ಕಮಲ್ ಹಾಸನ್ ಅವರು ಕಾವ್ಯಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ‘ಆ ಹಾಡು ಎಂದೆಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಅಮ್ಮಾ, ಆ ಪ್ರೀತಿಯನ್ನು ಮತ್ತೆ ಹುಡುಕಲು ನಾನು ಎಲ್ಲಿಗೆ ಹೋಗಲಿ? ನಿಮ್ಮ ಅಗಲಿಕೆಯಿಂದ ಎಷ್ಟೋ ಜನರು ಎಂದಿಗೂ ಮರೆಯಲಾಗದ ದುಃಖವನ್ನು ಹೊತ್ತಿದ್ದಾರೆ. ಅವರೆಲ್ಲರಿಗೂ ನನ್ನ ಆಳವಾದ ಸಂತಾಪಗಳು’ ಎಂದು ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us