ದರ್ಶನ್ ಮತ್ತು ಗ್ಯಾಂಗ್​ ನ್ಯಾಯಾಂಗ ಬಂಧನ ವಿಸ್ತರಿಸಲು ಪೊಲೀಸರು ನೀಡಿದ ಕಾರಣಗಳೇನು?

|

Updated on: Aug 28, 2024 | 3:02 PM

Darshan Thoogudeepa: ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಪೊಲೀಸರು ಮಾಡಿದ್ದ ಮನವಿಯಲ್ಲಿ ಕೆಲವು ಕಾರಣಗಳನ್ನು ನೀಡಿದ್ದರು, ಕಾರಣಗಳ ಪಟ್ಟಿ ಇಲ್ಲಿದೆ.

ದರ್ಶನ್ ಮತ್ತು ಗ್ಯಾಂಗ್​ ನ್ಯಾಯಾಂಗ ಬಂಧನ ವಿಸ್ತರಿಸಲು ಪೊಲೀಸರು ನೀಡಿದ ಕಾರಣಗಳೇನು?
Follow us on

ರೇಣುಕಾ ಸ್ವಾಮಿ ಹತ್ಯೆ ಆರೋಪಿಗಳ ನ್ಯಾಯಾಂಗ ಬಂಧನ ನಿರೀಕ್ಷೆಯಂತೆಯೇ ಮತ್ತೊಮ್ಮೆ ವಿಸ್ತರಣೆಯಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೂ ಸೆಪ್ಟೆಂಬರ್ 09 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ತನಿಖಾಧಿಕಾರಿಗಳು, ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯಲ್ಲಿ, ಆರೋಪಿಗಳ ಬಂಧನ ಅವಧಿ ಏಕೆ ವಿಸ್ತರಣೆ ಮಾಡಬೇಕೆಂದು ಎಂಟು ಅಂಶಗಳ ಕಾರಣವನ್ನು ಸಹ ನೀಡಿದ್ದರು. ಪೊಲೀಸರು ನೀಡಿದ್ದ ಕಾರಣಗಳು ಇಲ್ಲಿವೆ…

ಪ್ರಕರಣದಲ್ಲಿ ಆರೋಪಿಗಳ ಪಾತ್ರ ಎಲ್ಲಾ ರೀತಿಯಲ್ಲಿ‌ ಧೃಡವಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಲ ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ ಅವನ್ನು ಪಡೆದುಕೊಳ್ಳಬೇಕಿದೆ. ಅಗತ್ಯ ಇದ್ದರೆ 164 ಅಡಿ ಹೇಳಿಕೆ ದಾಖಲಿಸ ಬೇಕಿದೆ. ಸದ್ಯ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳಿಗೆ ಬೆದರಿಸುವ ಸಾಧ್ಯತೆ ಇದೆ. ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಭಾವಿ ಆರೋಪಿಗಳು ಮೃತನ ಕುಟುಂಬಕ್ಕೆ ಬೆದರಿಕೆ ಅಥವಾ ಆಮಿಷ ಒಡ್ಡುವ ಸಾಧ್ಯತೆ ಹೆಚ್ಚಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸಾಕ್ಷ್ಯಗಳ FSL ವರದಿಯಲ್ಲಿ ಆರೋಪಿಗಳ ಪಾತ್ರ ಸಾಬೀತಾಗಿದೆ. ಮತ್ತು ಟೆಕ್ನಿಕಲ್ ಎವಿಡೆನ್ಸ್ ಬಗ್ಗೆ ಕೆಲ ವರದಿ ಪಡೆದುಕೊಳ್ಳುವುದು ಬಾಕಿ‌ ಇದೆ. ಇನ್ನೂ ಕೆಲ ವಸ್ತುಗಳ FSL ಗೆ ಕಳುಹಿಸಿ ವರದಿ ಪಡೆಯಬೇಕಿದೆ. ಇವೆಲ್ಲ ಕಾರಣಗಳಿಂದಾಗಿ ಆರೋಪಿಗಳಿಗೆ ಈಗಲೇ ಜಾಮೀನು ನೀಡಬಾರದು, ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ:ದರ್ಶನ್​ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಆರೋಪಿಗಳ ಮನವಿ ತಿರಸ್ಕಾರ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 09 ರಂದು ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿ ತಂದು ಕೊಲೆ ಮಾಡಲಾಗಿತ್ತು. ಜೂನ್ 11 ರಂದು ನಟ ದರ್ಶನ್, ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ದರ್ಶನ್ ಬಂಧನವಾಗಿ ಈಗಾಗಲೇ ಮೂರು ತಿಂಗಳು ಆಗುತ್ತಾ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಕರಣ ಸಂಬಂಧ ಆರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಆ ಬಳಿಕ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಇನ್ನು ನಟ ದರ್ಶನ್ ಹಾಗೂ ಪ್ರಕರಣದ ಕೆಲ ಇತರೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವ ಸುದ್ದಿ ಇತ್ತೀಚೆಗೆ ಹಬ್ಬಿತ್ತು. ಅಲ್ಲದೆ ನಿಯಮ ಬಾಹಿರವಾಗಿ ಒಂದೇ ಪ್ರಕರಣದ ಬೇರೆ ಬೇರೆ ಆರೋಪಿಗಳು ಜೈಲಿನಲ್ಲಿ ಒಟ್ಟಿಗೆ ಇರುವುದು ಸಹ ತಿಳಿದು ಬಂದಿತ್ತು. ಇದರಿಂದಾಗಿ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ಪೊಲೀಸರು ನ್ಯಾಯಾಲಯದ ಒಪ್ಪಿಗೆ ಕೇಳಿದ್ದರು. ನ್ಯಾಯಾಲಯ ಒಪ್ಪಿಗೆ ನೀಡಿದ್ದು, ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ