ಆಗಸ್ಟ್ 31ಕ್ಕೆ ಪವಿತ್ರಾ ಗೌಡ ಜಾಮೀನು ಅರ್ಜಿ ಆದೇಶ, ಮಂಡಿಸಿದ ವಾದವೇನು?
Pavithra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ವಿನಯ್, ಅನುಕುಮಾರ್, ಕೇಶವಮೂರ್ತಿ ಅವರುಗಳ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿದೆ. ನ್ಯಾಯಾಲಯದಲ್ಲಿ ನಡೆದ ವಾದ ಏನು?
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಜೂನ್ 11 ರಂದು ಅವರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೆ ಪವಿತ್ರಾ ಗೌಡ ಪರ ವಕೀಲರು ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂದು (ಆಗಸ್ಟ್ 28) ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ವಿಚಾರಣೆ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿದ್ದಾರೆ.
ಮೊದಲು ವಾದ ಮಂಡಿಸಿದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೆಲವು ವಿಷಯಗಳನ್ನು ಬಿಚ್ಚಿಟ್ಟರು. ಅಲ್ಲದೆ ಪ್ರಕರಣದಲ್ಲಿ ಪವಿತ್ರಾ ಗೌಡರ ಪಾತ್ರವನ್ನು ವಿವರಿಸಿದರು. ಆರೋಪಿ 3, ಪವನ್ ಮೊಬೈಲ್ ಮೂಲಕ ರೇಣುಕಾ ಸ್ವಾಮಿ ಜೊತೆಗೆ ಪವಿತ್ರಾ ಮಾತನಾಡಿದ್ದರು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಹೇಳಿದ್ದಾರೆ. ಮುಂದುವರೆದು, ಮಹಳೆ ಎಂಬ ಕಾರಣಕ್ಕೆ ಪವಿತ್ರಾ ಗೌಡಗೆ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ನ ಕೆಲವು ಆದೇಶಗಳನ್ನು ಉದಹಾರಣೆಯಾಗಿ ನೀಡಿದರು.
ಬಳಿಕ ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸೆಬಾಸ್ಟಿಯನ್, ಪವಿತ್ರಾಗೌಡ ಗೂ ದರ್ಶನ್ಗೆ ಒಂದು ರೀತಿಯ ಸಂಬಂಧ ಇರಬಹುದು ನಿಜವಿರಬಹುದು. ಆದರೆ ರೇಣುಕಾ ಸ್ವಾಮಿ ಕೊಲೆಯಲ್ಲ ಪವಿತ್ರಾಗೌಡ ಯಾವುದೇ ಪಾತ್ರ ವಹಿಸಿಲ್ಲ. ರೇಣುಕಾ ಸ್ವಾಮಿ ಇನ್ ಸ್ಟಾಗ್ರಾಮ್ ನಲ್ಲಿ ಅಸಭ್ಯ ಫೋಟೋ ಕಳುಹಿಸಿದ್ದಾನೆ. ಸಹಜವಾಗೇ ಈ ವಿಷಯವನ್ನು ಸಹಾಯಕನಾಗಿರುವ ಎ 3 ಪವನ್ಗೆ ಪವಿತ್ರಾಗೌಡ ತಿಳಿಸಿದ್ದಾಳೆ. ಎ 3 ಪವನ್, ದರ್ಶನ್ ಗೆ ವಿಷಯ ತಿಳಿಸಿದ್ದಾನೆ.
ಇದನ್ನೂ ಓದಿ:ದರ್ಶನ್ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಹಿಂದೆ ರಾಜಕೀಯ ಉದ್ದೇಶವಿಲ್ಲ: ಎನ್ ಎಸ್ ಬೋಸರಾಜು
ರೇಣುಕಾ ಸ್ವಾಮಿ ಕೊಲೆ ಆದ ದಿನವೂ ಸಹ ದರ್ಶನ್ ಆಕೆಯನ್ನು ಷೆಡ್ ಕರೆದೊಯ್ದಿದ್ದಾನೆ. ಪವಿತ್ರಾಗೌಡ, ದರ್ಶನ್ ಜೊತೆಯಲ್ಲಿ ಹೋಗಿದ್ದರೂ ಸಹ ಕೊಲೆಯಲ್ಲಿ ಭಾಗಿಯಾಗಿಲ್ಲ. ಆಕೆ ಹಲ್ಲೆ ನಡೆಸಿದ್ದಾಳೆಂದೂ ಆರೋಪವಿಲ್ಲ. ಹೀಗಿರುವಾಗ ಕೊಲೆಯಲ್ಲಿ ಪವಿತ್ರಾಗೌಡ ಪಾತ್ರವೇನು? ಎಂದು ವಕೀಲ ಸೆಬಾಸ್ಟಿಯನ್ ಪ್ರಶ್ನಿಸಿದರು.
ಪವಿತ್ರಾಗೌಡ ಕಪಾಳಮೋಕ್ಷ ನಡೆಸಿದ್ದರೆಂದು ಹೇಳಿದ್ದಾರೆ. ಆದರೆ ಕಪಾಳಮೋಕ್ಷದಿಂದ ಸಾವಾಗಿದೆ ಎಂಬ ವರದಿಯಿಲ್ಲ. ಎದೆಗೂಡಿನ ಮೂಳೆ ಮುರಿದು ಅದು ಶ್ವಾಸಕೋಶಕ್ಕೆ ಚುಚ್ಚಿ ಸಾವಾಗಿದೆ. ಕಪಾಳಮೋಕ್ಷ ದಿಂದ ಸಾವಾಗಿರಲು ಸಾಧ್ಯವೇ ಇಲ್ಲ. ಎದೆಗೂಡಿನ ಮೂಳೆ ಮುರಿತಕ್ಕೂ ಪವಿತ್ರಾಗೌಡಗೂ ಯಾವುದೇ ಸಂಬಂಧ ಇಲ್ಲ. ಪವಿತ್ರಾಗೌಡ ಕೂಡಾ ಮಹಿಳೆಯಾಗಿದ್ದು ಅಪ್ರಾಪ್ತ ಮಗಳಿದ್ದಾಳೆ…. ಆಕೆಗೆ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು’ ಎಂದು ಪವಿತ್ರಾ ಗೌಡ ಪರ ವಕೀಲರು ಮನವಿ ಸಲ್ಲಿಸಿದ್ದರು.
ಪವಿತ್ರಾ ಗೌಡ ಮಾತ್ರವೇ ಅಲ್ಲದೆ, ಸ್ಟೋನಿ ಬ್ರೂಕ್ ಮಾಲೀಕ ಎ10 ಆರೋಪಿ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಅವರುಗಳು ಸಹ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಪರವಾಗಿಯೂ ಸಹ ವಕೀಲರು ವಾದ ಮಂಡಿಸಿದರು. ಎಲ್ಲರ ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ