ದರ್ಶನ್ ಸ್ಥಳಾಂತರಗೊಳ್ಳುತ್ತಿರುವ ಬಳ್ಳಾರಿ ಜೈಲಿನಲ್ಲಿ ಊಟದ ಮೆನು ಹೀಗಿದೆ
Darshan Thoogudeepa: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಈಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಅಲ್ಲಿ ದರ್ಶನ್ ವಾಸ ಹೇಗಿರಲಿದೆ. ಯಾವ ರೀತಿಯ ಊಟ ಅವರಿಗೆ ಸಿಗಲಿದೆ? ಇಲ್ಲಿದೆ ಮಾಹಿತಿ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೆಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಹಾಕಿ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿಸುತ್ತಿದ್ದಾರೆ. ನಟ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ವಾಸ ಹೇಗಿರಲಿದೆ? ಅಲ್ಲಿ ಊಟಕ್ಕೆ ಏನೇನು ಸಿಗುತ್ತದೆ? ಇಲ್ಲಿದೆ ಮಾಹಿತಿ.
ಪರಪ್ಪನ ಅಗ್ರಹಾರ ಜೈಲಿಗೆ ಹೋಲಿಸಿದರೆ ಬಳ್ಳಾರಿ ಜೈಲಿನ ವಿಸ್ತೀರ್ಣ ಕಡಿಮೆ ಎನ್ನಲಾಗುತ್ತಿದೆ. ಬ್ಯಾರಕ್ಗಳು ಸಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ವ್ಯವಸ್ಥಿತವಾಗಿಲ್ಲ ಎಂಬ ಮಾತುಗಳು ಇವೆ. ಇನ್ನು ಊಟದ ವಿಷಯಕ್ಕೆ ಬರುವುದಾದರೆ, ಸರಳವಾದ ಊಟದ ಮೆನು ಬಳ್ಳಾರಿ ಜೈಲಿನಲ್ಲಿದೆ.
ಇದನ್ನೂ ಓದಿ:ಬಳ್ಳಾರಿ ಜೈಲಿಗೆ ಕರೆತಂದರೆ ದರ್ಶನ್ ಮತ್ತೆ ಕೆಟ್ಟುಹೋಗ್ತಾರೆ: ಕಾರಾಗೃಹದ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಕೈದಿ
ಪ್ರತಿಧಿನ ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಬಿಸಿಬೇಳೆ ಬಾತ್, ಚಿತ್ರಾನ್ನ ಇಂಥಹವುಗಳು ಸಿಗಲಿವೆ. ಇನ್ನು ಮಧ್ಯಾಹ್ನದ ಊಟಕ್ಕೆ ರಾಗಿಮುದ್ದೆ, ಚಪಾತಿ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ ಕೊಡಲಾಗುತ್ತದೆ. ಬಳ್ಳಾರಿಯ ಜನರ ಸ್ಥಳೀಯ ಊಟ ಜೋಳ, ಸಜ್ಜಿ ರೊಟ್ಟಿಯೇ ಆಗಿದೆ. ದರ್ಶನ್, ರೊಟ್ಟಿ, ಚಪಾತಿ ಅಥವಾ ಮುದ್ದೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ರಾತ್ರಿ ವೇಳೆ ಅನ್ನ ಸಾಂಬಾರ್ ಲಭ್ಯವಾಗಲಿದೆ. ಪ್ರತಿ ಮಂಗಳವಾರ ಮೊಟ್ಟೆ ಕೊಡಲಾಗುತ್ತದೆ. ಇನ್ನು ಪ್ರತಿ ಭಾನುವಾರ ಮಾಂಸಾಹಾರವನ್ನು ನೀಡಲಾಗುತ್ತದೆ. ಒಂದು ಭಾನುವಾರ ಚಿಕನ್ ಕೊಟ್ಟರೆ ಮತ್ತೊಂದು ಭಾನುವಾರ ಮಟನ್ ನೀಡಲಾಗುತ್ತದೆ. ಇದು ಬಳ್ಳಾರಿ ಜೈಲಿನ ಸಾಮಾನ್ಯ ಊಟದ ಮೆನು ಆಗಿದ್ದು, ಇದೇ ಮೆನು ದರ್ಶನ್ಗೂ ಸಹ ಇರಲಿದೆ.
ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ತಮಗೆ ಊಟ ಸರಿ ಹೋಗುತ್ತಿಲ್ಲ ಎಂದಿದ್ದರು. ತಮಗೆ ಮನೆಯಿಂದ ಊಟ ಬೇಕು ಎಂದು ಮನವಿ ಮಾಡಿದ್ದರು. ಆದರೆ ಅವರ ಮನವಿ ತಿರಸ್ಕರಿಸಲಾಗಿತ್ತು. ಈಗ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದು, ಅಲ್ಲಿ ಅವರಿಗೆ ಮತ್ತೊಮ್ಮೆ ಹೊಸ ರೀತಿಯ ಊಟಕ್ಕೆ ಹೊಂದಿಕೊಳ್ಳಬೇಕಾಗಿರುತ್ತದೆ. ಅಲ್ಲದೆ ಹೊಸ ರೀತಿಯ ಪರಿಸರಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳ ಜೊತೆಗೆ ತುಸು ಆತ್ಮೀಯತೆ ಬೆಳೆಸಿಕೊಂಡಿದ್ದರು. ಆಗಾಗ್ಗೆ ಅವರೊಟ್ಟಿಗೆ ವಾಲಿಬಾಲ್ ಇನ್ನಿತರೆ ಚಟುವಟಿಕೆಗಳಲ್ಲಿ ಭಾಗಿ ಆಗಿರುತ್ತಿದ್ದರು. ಈಗ ಬಳ್ಳಾರಿ ಜೈಲಿನಲ್ಲಿ ಹೊಸ ಸಹ ಕೈದಿಗಳೊಟ್ಟಿಗೆ ಸ್ನೇಹ ಬೆಳೆಸಿಕೊಳ್ಳಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ