ಎಷ್ಟೇ ಪ್ರಯತ್ನಿಸಿದರೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿ ದಿನ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕಿತ್ಸೆ ಸಿಗದೇ ಸಾವಿರಾರು ಜನರು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ವೈರಸ್ ಪಾಸಿಟಿವ್ ವರದಿ ಬರುತ್ತಿದೆ. ಈಗ ನಟಿ ಪೂಜಾ ಹೆಗ್ಡೆ ಅವರಿಗೂ ಕೊರೊನಾ ಸೋಂಕು ತಗುಲಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಪೂಜಾ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಕರ್ನಾಟಕ ಮೂಲದ ಪೂಜಾ ಹೆಗ್ಡೆ ಅವರಿಗೆ ಪರಭಾಷೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ತಮಿಳು, ತೆಲುಗು ಮತ್ತು ಹಿಂದಿಯ ಅನೇಕ ಸ್ಟಾರ್ ನಟರ ಸಿನಿಮಾಗಳಿಗೆ ಅವರು ನಾಯಕಿ ಆಗಿದ್ದಾರೆ. ಕೈಯಲ್ಲಿ ಅನೇಕ ಪ್ರಾಜೆಕ್ಟ್ಗಳನ್ನು ಇಟ್ಟುಕೊಂಡಿರುವ ಅವರು ಸದಾ ಕಾಲ ಶೂಟಿಂಗ್, ಡಬ್ಬಿಂಗ್, ರಿಹರ್ಸಲ್ ಎಂದು ತಿರುಗಾಡುತ್ತಲೇ ಇರುತ್ತಾರೆ. ಈ ನಡುವೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಆ ಬಗ್ಗೆ ಸ್ವತಃ ಅವರು ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಪೂಜಾ ಹೆಗ್ಡೆ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮತ್ತು ಟ್ವೀಟ್ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ನನಗೆ ಕೊವಿಡ್ ಪಾಸಿಟಿವ್ ಆಗಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ನಿಯಮಗಳ ಪ್ರಕಾರ ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ’ ಎಂದು ಪೂಜಾ ಹೇಳಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಎಲ್ಲರೂ ಮನೆಯಲ್ಲೇ ಇದ್ದು ಸೇಫ್ ಆಗಿರಿ ಎಂದು ಸಲಹೆ ನೀಡಿದ್ದಾರೆ.
??? pic.twitter.com/fwdd9Cq1Go
— Pooja Hegde (@hegdepooja) April 25, 2021
ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ರಾಧೆ ಶ್ಯಾಮ್ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಅಕ್ಕಿನೇನಿ ಅಖಿಲ್ ನಟನೆಯ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಚಿತ್ರದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಪಾತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ಪೂಜಾ ನಟಿಸುತ್ತಿದ್ದಾರೆ. ಅದು ನೀಲಾಂಬರಿ ಎಂಬ ಅತಿಥಿ ಪಾತ್ರವಾಗಿದ್ದು, ಅಭಿಮಾನಿಗಳಲ್ಲಿ ಆ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಸದ್ಯ ಅವರಿಗೆ ಕೊರೊನಾ ವೈರಸ್ ತಗುಲಿರುವುದರಿಂದ ಈ ಎಲ್ಲ ಸಿನಿಮಾ ಕೆಲಸಗಳಿಗೆ ಅವರು ಬ್ರೇಕ್ ಹಾಕುವುದು ಅನಿವಾರ್ಯ ಆಗಿದೆ.
ಇದನ್ನೂ ಓದಿ: Pooja Hegde: ರಶ್ಮಿಕಾಗೆ ಪೈಪೋಟಿ ನೀಡುವ ಕನ್ನಡತಿ ಪೂಜಾ ಹೆಗ್ಡೆಗೆ ಕಾಲಿವುಡ್ನಲ್ಲಿ ಸಿಕ್ತು ಬಂಪರ್ ಆಫರ್!