‘ಆಕಾಶ ಗಡಿಯ ದಾಟಿ’ ಗೆಳೆತನವನ್ನು ಸಂಭ್ರಮಿಸುವ ‘ಸಲಾರ್’ ಹಾಡು ಬಿಡುಗಡೆ

|

Updated on: Dec 13, 2023 | 8:19 PM

Salaar Song: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಎಮೋಷನಲ್ ಹಾಡೊಂದು ಇಂದು ಬಿಡುಗಡೆ ಆಗಿದೆ.

‘ಆಕಾಶ ಗಡಿಯ ದಾಟಿ’ ಗೆಳೆತನವನ್ನು ಸಂಭ್ರಮಿಸುವ ‘ಸಲಾರ್’ ಹಾಡು ಬಿಡುಗಡೆ
ಸಲಾರ್
Follow us on

ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಸಿನಿಮಾವು ಗೆಳೆತನದ ಕುರಿತಾದ ಕತೆಯನ್ನು ಒಳಗೊಂಡಿದೆ ಎಂಬುದು ಟ್ರೈಲರ್​ನಿಂದ ಸ್ಪಷ್ಟವಾಗಿತ್ತು. ಅಲ್ಲದೆ, ಈ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಎಂಬುದು ಸಹ ಸ್ಪಷ್ಟವಾಗಿತ್ತು. ‘ಕೆಜಿಎಫ್’ ಕತೆಗೆ ತಾಯಿ ಸೆಂಟಿಮೆಂಟ್ ಪ್ರಧಾನ ಅಂಶವಾಗಿದ್ದರೆ, ‘ಸಲಾರ್’ ಸಿನಿಮಾದ ಕತೆಗೆ ಗೆಳೆತನವೇ ಕೇಂದ್ರ. ಇಂದು (ಡಿಸೆಂಬರ್ 13) ‘ಸಲಾರ್’ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಹಾಡು ಪ್ರಭಾಸ್ ಹಾಗೂ ಪೃಥ್ವಿರಾಜ್ ಗೆಳೆತನ ಎಷ್ಟು ಗಾಢವಾದದ್ದು ಎಂದು ಸಾರಿ ಹೇಳುತ್ತಿದೆ.

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಹಾಡು ಬಿಡುಗಡೆ ಆಗಿದೆ. ಹಾಡಿನ ನಡುವೆ ಸಣ್ಣ ವಿಡಿಯೋ ತುಣುಕುಗಳನ್ನು ಸಹ ಬಳಸಲಾಗಿದೆ. ಹಾಡಿನಲ್ಲಿ ಪ್ರಭಾಸ್​ ಪಾತ್ರದ ಒಳ್ಳೆಯತನದ ಜೊತೆಗೆ ಆ ಪಾತ್ರ ಗೆಳೆತನಕ್ಕೆ ನೀಡುವ ಗೌರವದ ಬಗ್ಗೆ ಕೊಂಡಾಡಲಾಗಿದೆ. ಕನ್ನಡದಲ್ಲಿ ‘ಆಕಾಶ ಗಡಿಯ ದಾಟಿ ತಂದಾನು ಬೆಳಕು ಕೋಟಿ’ ಎಂದು ಹಾಡು ಶುರುವಾಗುತ್ತಿದೆ. ಮೆಲೋಡಿಯಸ್ ಆಗಿರುವ ಈ ಹಾಡು ನೆನಪಿನಲ್ಲಿ ಉಳಿವ ಗುಣವನ್ನು ಹೊಂದಿದೆ.

‘ಕೆಜಿಎಫ್’ ಸಿನಿಮಾದಲ್ಲಿದ್ದ ಮದರ್ ಸೆಂಟಿಮೆಂಟ್ ಹಾಡಿನಂತೆಯೇ ‘ಸಲಾರ್’ನಲ್ಲಿ ಗೆಳೆತನದ ಸೆಂಟಿಮೆಂಟ್ ಹಾಡನ್ನು ಪ್ರಶಾಂತ್ ನೀಲ್ ಬಳಸಿದ್ದಾರೆ. ಹಾಡಿನ ನಡುವೆ ಬಳಸಲಾಗಿರುವ ವಿಡಿಯೋ ತುಣುಕಿನಲ್ಲಿ, ಪ್ರಭಾಸ್, ತಮ್ಮ ಗೆಳೆಯ ಪೃಥ್ವಿರಾಜ್ ಸುಕುಮಾರನ್ ಅನ್ನು ಎಷ್ಟು ಕಾಳಜಿ ಮಾಡುತ್ತಾನೆ ಎಂಬುದನ್ನು ತೋರಿಸಲಾಗಿದೆ. ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಯಾವುದೋ ಕಾರಣಕ್ಕೆ ಬಹಳ ಡಿಸ್ಟರ್ಬ್ ಆಗಿರುವ ಹಾಗೆಯೂ ತೋರಿಸಲಾಗಿದೆ.

ಇದನ್ನೂ ಓದಿ:‘ಕೆಜಿಎಫ್’, ‘ಸಲಾರ್’ ರೀತಿ ಎರಡು ಪಾರ್ಟ್​ನಲ್ಲಿ ಬರಲಿದೆ ‘ಗೇಮ್ ಚೇಂಜರ್’ ಸಿನಿಮಾ?

ಹಾಡು ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಕನ್ನಡದ ಹಾಡನ್ನು ಒಂದು ಗಂಟೆಯಲ್ಲಿ 1.25 ಲಕ್ಷ ಬಾರಿ ವೀಕ್ಷಿಸಲಾಗಿದೆ. ತೆಲುಗಿನಲ್ಲಿ 9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ತಮಿಳು ಆವೃತ್ತಿಯ ಹಾಡನ್ನು 64 ಸಾವಿರ ಬಾರಿ ವೀಕ್ಷಿಸಲಾಗಿದೆ. ಮಲಯಾಳಂ ಆವೃತ್ತಿಯನ್ನು 79 ಸಾವಿರ ಬಾರಿ ವೀಕ್ಷಿಸಲಾಗಿದೆ. ಹಿಂದಿ ಆವೃತ್ತಿಯ ಹಾಡನ್ನು 3.85 ಲಕ್ಷ ಬಾರಿ ವೀಕ್ಷಿಸಲಾಗಿದೆ.

‘ಸಲಾರ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ನಾಯಕಿಯಾಗಿ ಶೃತಿ ಹಾಸನ್ ನಟಿಸಿದ್ದಾರೆ. ಜಗಪತಿ ಬಾಬು, ಕನ್ನಡದ ಮಧು ಗುರುಸ್ವಾಮಿ, ಗರುಡ ರಾಮಚಂದ್ರ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಹೊಂಬಾಳೆಯ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ