‘ಫೌಜಿ’ ನಟಿ ಇಮಾನ್ವಿ ಜನ್ಮದಿನಕ್ಕೆ ಪ್ರಭಾಸ್ ಕಡೆಯಿಂದ ಭೋಜನ ಸತ್ಕಾರ
ಪ್ರಭಾಸ್ ತಮ್ಮ ಸಹನಟಿಗೆ ವಿಶೇಷವಾಗಿ ಮನೆಯಿಂದ ರುಚಿಕರವಾದ ಭೋಜನವನ್ನು ಕಳುಹಿಸಿಕೊಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ‘ಫೌಜಿ’ ಚಿತ್ರದ ನಾಯಕಿ ಇಮಾನ್ವಿ ಅವರಿಗೆ ಪ್ರಭಾಸ್ ಭರ್ಜರಿ ಊಟ ಕಳುಹಿಸಿದ್ದು, ನಟಿ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಮುಖ್ಯಾಂಶಗಳು
- ‘ಫೌಜಿ’ ನಾಯಕಿಗೆ ಪ್ರಭಾಸ್ ರಾಜಭೋಜನ ಸತ್ಕಾರ
- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
- ಪ್ರಭಾಸ್ ಮನೆಯ ಊಟ ಫೌಜಿ ನಾಯಕಿ ಇಮಾನ್ವಿ
ತೆಲುಗು ನಟ ಪ್ರಭಾಸ್ ಅವರು ಯಾವಾಗಲೂ ತಮ್ಮ ಊಟದ ಸತ್ಕಾರಕ್ಕೆ ಹೆಸರುವಾಸಿ. ಸೆಟ್ನಲ್ಲಿರುವ ಸಹ ಕಲಾವಿದರಿಗೆ ಮನೆಯಿಂದ ರುಚಿಕರವಾದ ಅಡುಗೆಯನ್ನು ಕಳುಹಿಸಿಕೊಡುವುದು ಅವರ ಅಭ್ಯಾಸ. ಈಗ ‘ಫೌಜಿ’ ಸಿನಿಮಾದ ನಾಯಕಿ ಇಮಾನ್ವಿ ಅವರಿಗೂ ಕೂಡ ಪ್ರಭಾಸ್ ಭರ್ಜರಿ ಊಟವನ್ನು ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಖುಷಿಯಿಂದ ಹಂಚಿಕೊಂಡಿದ್ದಾರೆ.
ಇಮಾನ್ವಿ ಅವರ ಜನ್ಮದಿನವಾಗಿತ್ತು. ಈ ವಿಶೇಷ ದಿನದಂದು ತಮಗೆ ಬಂದ ವಿಶೇಷ ಭೋಜನದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮನಸ್ಸು ಹಾಗೂ ಹೊಟ್ಟೆ ಎರಡೂ ತುಂಬಿ ತುಳುಕುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ಪ್ರಭಾಸ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಈ ಮೂಲಕ ಪ್ರಭಾಸ್ ಅವರ ಅತಿಥಿ ಸತ್ಕಾರದ ಗುಣವು ಮತ್ತೊಮ್ಮೆ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ.
ಈ ಹಿಂದೆ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಪೂಜಾ ಹೆಗ್ಡೆ ಹಾಗೂ ನಿಧಿ ಅಗರ್ವಾಲ್ ಸೇರಿದಂತೆ ಹಲವು ನಾಯಕಿಯರು ಪ್ರಭಾಸ್ ಕಳುಹಿಸಿದ ರಾಜಭೋಜನದ ರುಚಿಯನ್ನು ಸವಿದಿದ್ದಾರೆ. ಪ್ರಭಾಸ್ ಅವರ ಈ ಪ್ರೀತಿಯ ಸತ್ಕಾರವು ಈಗ ಸಿನಿಮಾ ರಂಗದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ. ಅವರೊಂದಿಗೆ ಕೆಲಸ ಮಾಡುವ ಪ್ರತಿ ನಾಯಕಿಯರಿಗೂ ಈ ರೀತಿಯ ಅದ್ಭುತವಾದ ಅನುಭವ ಸಿಗುತ್ತದೆ ಎಂಬುದು ವಿಶೇಷವಾಗಿದೆ.
View this post on Instagram
ಇನ್ನು ‘ಫೌಜಿ’ ಸಿನಿಮಾದ ಶೂಟಿಂಗ್ ಕೆಲಸಗಳು ಪ್ರಸ್ತುತ ನಿಧಾನವಾಗಿ ಸಾಗುತ್ತಿವೆ. ನಿರ್ಮಾಪಕರು ಡಿಸೆಂಬರ್ 4ರಂದು ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದ್ದರು. ಆದರೆ ಸದ್ಯ ಆ ದಿನಾಂಕವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದ್ದಾರೆ. ಇಮಾನ್ವಿಯವರ ಈ ಪೋಸ್ಟ್ನಿಂದ ಸಿನಿಮಾ ಯಾವುದೇ ಕಾರಣಕ್ಕೂ ನಿಂತಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ‘ಸ್ಪಿರಿಟ್’ ಸಿನಿಮಾದ ನಟಿ ತೃಪ್ತಿ ದಿಮ್ರಿ ಕೂಡ ಇಂತಹ ಫೋಟೋ ಹಂಚಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಪ್ರಭಾಸ್ ‘ಫೌಜಿ’ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಜಿತಿನ್
ಪ್ರಭಾಸ್ ಅವರ ಈ ರೀತಿಯ ಸರಳತೆ ಹಾಗೂ ಪ್ರೀತಿಯು ಅಭಿಮಾನಿಗಳನ್ನು ಮತ್ತಷ್ಟು ಆಕರ್ಷಿಸಿದೆ. ದೊಡ್ಡ ಸ್ಟಾರ್ ನಟರಾದರೂ ತಮ್ಮ ಸಹನಟಿಯರಿಗೆ ನೀಡುವ ಗೌರವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




