ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ತಮ್ಮ ಅನಿಸಿಕೆಯನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಅವರ ಹೇಳಿಕೆಗಳಿಂದ ಕೆಲವೊಮ್ಮೆ ವಿವಾದ ಆಗಿದ್ದೂ ಕೂಡ ಉಂಟು. ಹಾಗಾಂತ ಪ್ರಕಾಶ್ ರಾಜ್ ಅವರು ಸೈಲೆಂಟ್ ಆಗಿಲ್ಲ. ಈಗ ಅವರು ರಾಷ್ಟ್ರ ಪ್ರಶಸ್ತಿ ಬಗ್ಗೆ ಮಾತನಾಡಿದ್ದಾರೆ. ‘ಜೈ ಭೀಮ್’ (Jai Bhim) ಸಿನಿಮಾಗೆ ಪ್ರಶಸ್ತಿ ಸಿಗದೇ ಇರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ದಳಪತಿ ವಿಜಯ್ (Thalapathy Vijay) ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಿರುವುದರ ಬಗ್ಗೆ ತಮಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಕೂಡ ಪ್ರಕಾಶ್ ರಾಜ್ ತಿಳಿಸಿದ್ದಾರೆ. ತಮಿಳಿನ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಇತ್ತೀಚೆಗೆ ಅನೌನ್ಸ್ ಆಯಿತು. ‘ಪುಷ್ಪ’ ಸಿನಿಮಾದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಆದರೆ ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾಗೆ ಪ್ರಶಸ್ತಿ ಮಿಸ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ನಟ ಪ್ರಕಾಶ್ ರಾಜ್ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಸಿನಿಮಾಗೆ ಪ್ರಶಸ್ತಿ ನೀಡದೇ ಇರುವುದು ಅವರಿಗೆ ಬೇಸರ ಮೂಡಿಸಿದೆ. ‘ಒಂದು ಕಾರಣಕ್ಕಾಗಿಯೇ ಜೈ ಭೀಮ್ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ನೀಡಿಲ್ಲ. ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗ, ಸಿನಿಮಾ ಸೆನ್ಸಾರ್ ಮಂಡಳಿ ಕೂಡ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್; ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ: ತಮಿಳುನಾಡು ಸಿಎಂ ಸ್ಟಾಲಿನ್ ವಿರೋಧ
ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಜೋರಾಗಿದೆ. ಈ ಬಗ್ಗೆ ಪ್ರಕಾಶ್ ರಾಜ್ ಅವರು ಮಾತನಾಡಿದ್ದಾರೆ. ರಾಜಕೀಯಕ್ಕೆ ಬರಲು ದಳಪತಿ ವಿಜಯ್ ಅವರು ಸೂಕ್ತವಾದ ವ್ಯಕ್ತಿ. ಆದರೆ ಈಗ ಕಾಲ ಬದಲಾಗಿದೆ. ಎನ್ಟಿಆರ್, ಎಂಜಿಆರ್ ಕೂಡ ರಾಜಕೀಯದಲ್ಲಿ ಯಶಸ್ವಿ ಆಗಿದ್ದರು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ಸಿನಿಮಾದಲ್ಲಿನ ಜನಪ್ರಿಯತೆಯು ರಾಜಕೀಯ ಕ್ಷೇತ್ರದಲ್ಲಿ ಉಪಯೋಗಕ್ಕೆ ಬಾರದು. ಕೆಲಸ ನೋಡಿ ಜನರು ಮತ ಹಾಕುತ್ತಾರೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ‘ಚಂದ್ರಯಾನ 3’ ಬಗ್ಗೆ ಪ್ರಕಾಶ್ ರಾಜ್ ಮಾಡಿದ ಹಾಸ್ಯದ ಹಿಂದೆ ಬೇರೆಯದೇ ಕಥೆ ಇದೆ; ವಿವರಿಸಿದ ನಟ
ಹಲವು ವರ್ಷಗಳಿಂದ ಪ್ರಕಾಶ್ ರಾಜ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯ ಚಿತ್ರಗಳಲ್ಲೂ ಅವರು ಫೇಮಸ್ ಆಗಿದ್ದಾರೆ. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರು ‘ಚಂದ್ರಯಾನ 3’ ಕುರಿತು ಮಾಡಿದ ಒಂದು ಟ್ವೀಟ್ನಿಂದ ವಿವಾದ ಸೃಷ್ಟಿಯಾಗಿತ್ತು. ನಂತರ ಅವರು ಅದರ ಬಗ್ಗೆ ಸ್ಪಷ್ಟನೆ ನೀಡಿದರು. ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಅವರು ತುಂಬ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.