‘ಚಂದ್ರಯಾನ 3’ ಬಗ್ಗೆ ಪ್ರಕಾಶ್ ರಾಜ್ ಮಾಡಿದ ಹಾಸ್ಯದ ಹಿಂದೆ ಬೇರೆಯದೇ ಕಥೆ ಇದೆ; ವಿವರಿಸಿದ ನಟ
ತಾವು ಹಂಚಿಕೊಂಡಿರುವ ಟ್ವೀಟ್ನ ಹಿಂದೆ ಇರುವ ಕತೆಯೇ ಬೇರೆ ಎಂದು ಪ್ರಕಾಶ್ ರಾಜ್ ವಿವರಿಸಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಒಂದು ಲಿಂಕ್ ಅನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅದು ಬಹಳ ವರ್ಷಗಳ ಹಿಂದಿನ ಜೋಕ್. ಅದನ್ನು ಈಗ ಪ್ರಕಾಶ್ ರಾಜ್ ಮತ್ತೆ ನೆನಪಿಸಿಕೊಂಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ಈಗ ಚರ್ಚೆಯ ಕೇಂದ್ರಬಿಂದು ಆಗಿದ್ದಾರೆ. ಭಾರತವು ನಡೆಸಿದ ‘ಚಂದ್ರಯಾನ 3’ (Chandrayaan 3) ಬಗ್ಗೆ ಅವರು ಅಪಹಾಸ್ಯ ಮಾಡಿದ್ದಾರೆ ಎಂದು ಟ್ರೋಲಿಗರು ಗರಂ ಆಗಿದ್ದಾರೆ. ಪ್ರಕಾಶ್ ರಾಜ್ ಹಂಚಿಕೊಂಡ ಒಂದು ಕಾರ್ಟೂನ್ ಇದಕ್ಕೆಲ್ಲ ಪ್ರಮುಖ ಕಾರಣ. ಆದರೆ ಚಂದ್ರಯಾನ ಯೋಜನೆಯನ್ನು ಅಪಹಾಸ್ಯ ಮಾಡುವ ಉದ್ದೇಶ ತಮ್ಮದಲ್ಲ ಎಂದು ಈಗ ಅವರು ಸ್ಪಷ್ಟನೆ ನೀಡಿದ್ದಾರೆ. ತಾವು ಹಂಚಿಕೊಂಡಿರುವ ಟ್ವೀಟ್ನ (Prakash Raj Tweet) ಹಿಂದೆ ಇರುವ ಕತೆಯೇ ಬೇರೆ ಎಂದು ಪ್ರಕಾಶ್ ರಾಜ್ ವಿವರಿಸಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಒಂದು ಲಿಂಕ್ ಅನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅದು ಬಹಳ ವರ್ಷಗಳ ಹಿಂದಿನ ಜೋಕ್. ಅದನ್ನು ಈಗ ಪ್ರಕಾಶ್ ರೈ ಮತ್ತೆ ನೆನಪಿಸಿಕೊಂಡಿದ್ದಾರೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಅನೇಕರು ಸುಮ್ಮನೇ ಕೂಗಾಡಿದ್ದಾರೆ ಎಂಬುದು ಪ್ರಕಾಶ್ ರಾಜ್ ವಾದ.
1969ರಲ್ಲಿ ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಅವರು ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟರು. ಆ ಸಮಯದಲ್ಲಿ ಮಲಯಾಳಿಗಳ ಕುರಿತು ಒಂದು ಜೋಕ್ ಹುಟ್ಟಿಕೊಂಡಿತ್ತು. ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಅಲ್ಲಿ ಅವರಿಗೆ ಮೊದಲು ಕಾಣಿಸಿದ್ದು ಮಲಯಾಳಿ ಚಾಯ್ವಾಲಾ. ಅಂದರೆ, ನೀಲ್ ಆರ್ಮ್ಸ್ಟ್ರಾಂಗ್ ಅವರಿಗಿಂತಲೂ ಮುನ್ನವೇ ಮಲಯಾಳಿಗಳು ಚಂದ್ರಲೋಕದಲ್ಲಿ ಚಹದ ಅಂಗಡಿ ತೆರೆದಿದ್ದರು ಎಂಬುದು ಆ ಜೋಕ್ನ ಸಾರಾಂಶ. ಕೇರಳದವರು ಎಲ್ಲ ಕಡೆಗಳಲ್ಲಿ ವ್ಯಾಪಾರ ನಡೆಸುತ್ತಾರೆ ಎಂಬ ಅರ್ಥದಲ್ಲಿ ಆ ಜೋಕ್ ಚಾಲ್ತಿಯಲ್ಲಿತ್ತು. ಅದನ್ನು ನೆನಪಿಸುವ ರೀತಿಯಲ್ಲಿ ಪ್ರಕಾಶ್ ರಾಜ್ ಅವರು ಈ ಕಾರ್ಟೂನ್ ಹಂಚಿಕೊಂಡಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳದೇ ಎಲ್ಲರೂ ಟ್ರೋಲ್ ಮಾಡಿದ್ದಾರೆ.
‘ಎಲ್ಲರ ಗಮನಕ್ಕೆ.. ಗೋದಿ ಮೀಡಿಯಾದವರಿಗೆ ಮತ್ತು ಅನಕ್ಷರಸ್ಥ ಟ್ರೋಲ್ನವರಿಗೆ ತಿಳಿದಿರುವುದು ಒಬ್ಬರೇ ಚಾಯ್ವಾಲಾ. 1960ರ ಕಾಲದಿಂದಲೂ ಸ್ಫೂರ್ತಿದಾಯಕವಾಗಿರುವ ನಮ್ಮ ಮಲಯಾಳಿ ಚಾಯ್ವಾಲಾ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದೇನೆ. ತಿಳಿದುಕೊಳ್ಳಬೇಕಾದರೆ ಇದನ್ನು ಓದಿ’ ಎಂದು ಮೂಲ ಜೋಕ್ ಇರುವ ಲಿಂಕ್ ಅನ್ನು ಪ್ರಕಾಶ್ ರಾಜ್ ಅವರು ಹಂಚಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್:
ATTENTION:-dear #Unacedemy trolls and #godimedia who know only one #Chaiwala .. proudly presenting .. the ever inspiring our own malayali chaiwala since 1960 s ..if you want to be educated please read #justasking https://t.co/KGOnSIBmjq
— Prakash Raj (@prakashraaj) August 22, 2023
ಪ್ರಕಾಶ್ ರಾಜ್ ವಿರುದ್ಧ ಬಾಗಲಕೋಟೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಹಿಂದೂ ಸಂಘಟನೆಯ ಮುಖಂಡ ನಂದು ಗಾಯಕವಾಡ ಅವರು ಪ್ರಕಾಶ್ ರಾಜ್ ವಿರುದ್ಧ ದೂರು ನೀಡಿದ್ದಾರೆ. ‘ಪ್ರಕಾಶ್ ರೈ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನ ತಕ್ಷಣ ಬಂಧಿಸಬೇಕು. ಇಸ್ರೋ ವಿಜ್ಞಾನಿಗಳು ಕಳಿಸಿರುವ ಚಂದ್ರಯಾನ ನೌಕೆಯ ಕಾರಣದಿಂದ ಭಾರತದ ಶಕ್ತಿ ಇಮ್ಮಡಿಯಾಗಿದೆ. ಅದಕ್ಕಾಗಿ ಎಲ್ಲರೂ ನಮ್ಮ ವಿಜ್ಞಾನಿಗಳನ್ನು ಹೊಗಳುತ್ತಿದ್ದಾರೆ. ಹಾಗಿದ್ದರೂ ಕೂಡ, ಪ್ರಕಾಶ್ ರಾಜ್ ಅವರು ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿ ವಿಕೃತಿ ತೋರಿದ್ದಾರೆ. ಪ್ರಕಾಶ್ ರಾಜ್ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದೇವೆ’ ಎಂದು ನಂದು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.