ಖ್ಯಾತ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪ್ರಭಾಸ್ ನಟನೆಯ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಅಚ್ಚರಿ ಎಂದರೆ, ಈ ಸಿನಿಮಾ ತೆರೆಗೆ ಬರೋಕೆ ಇನ್ನೂ ಹಲವು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಸಿನಿಮಾ ಮೇಕಿಂಗ್.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 1’ 2018ರ ಡಿಸೆಂಬರ್ನಲ್ಲಿ ತೆರೆಗೆ ಬಂದಿತ್ತು. ಇದಾಗಿ ಸುಮಾರು ಮೂರು ವರ್ಷ ಕಳೆಯುತ್ತಾ ಬಂದಿದೆ. ಆದಾಗ್ಯೂ ಚಾಪ್ಟರ್ 2 ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಚಿತ್ರೀಕರಣ ವಿಳಂಬವಾಗಿದ್ದು ಸಿನಿಮಾ ರಿಲೀಸ್ ಮುಂದೂಡಲ್ಪಡಲು ಪ್ರಮುಖ ಕಾರಣ ಎನ್ನಬಹುದು. ಇನ್ನು, ಯಶ್ ಈ ಸರಣಿಗೆ ಸುಮಾರು ಐದು ವರ್ಷ ಮುಡಿಪಿಟ್ಟಿದ್ದಾರೆ. ಪ್ರಭಾಸ್ ಕೂಡ ಬಾಹುಬಲಿ ಸರಣಿಗಾಗಿ ಸಾಕಷ್ಟು ವರ್ಷಗಳನ್ನು ವ್ಯಯಿಸಿದ್ದರು. ಈಗ ಬಾಹುಬಲಿ, ಕೆಜಿಎಫ್ ಮಾದರಿಯಲ್ಲೇ ಸಲಾರ್ ಮೂಡಿ ಬರಲಿದೆ. ಅಂದರೆ, ಎರಡು ಪಾರ್ಟ್ಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರತಂಡ ಇತ್ತೀಚೆಗೆ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈಗ ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಇದೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ರೀತಿ ಮಾಡೋಕೆ ಪ್ರಮುಖ ಕಾರಣ ಚಿತ್ರದ ಕಥೆ. ಸಿನಿಮಾದ ಕಥೆ ಹೆಚ್ಚಿನ ಅವಧಿ ಕೇಳುತ್ತಿದೆಯಂತೆ. ಒಂದೊಮ್ಮೆ ಎಲ್ಲವನ್ನೂ ಒಂದರಲ್ಲೇ ತೋರಿಸಲು ಹೋದರೆ, ಕೆಲವು ಕಡೆ ಕತ್ತರಿ ಹಾಕಬೇಕು ಅಥವಾ ಸಿನಿಮಾದ ಅವಧಿ ವಿಸ್ತರಣೆ ಮಾಡಬೇಕು. ಈ ಎರಡೂ ಮಾರ್ಗಗಳು ಅಷ್ಟು ಸೂಕ್ತವಲ್ಲ. ಈ ಕಾರಣಕ್ಕೆ ಸಲಾರ್ ಸಿನಿಮಾ ಎರಡು ಪಾರ್ಟ್ಗಳಲ್ಲ ರಿಲೀಸ್ ಮಾಡಲು ಚಿಂತಿಸಲಾಗಿದೆ ಎನ್ನುವ ಮಾಹಿತಿ ಹರಿದಾಡಿದೆ.
ಪ್ರಶಾಂತ್ ನೀಲ್ ಸಿನಿಮಾ ಮಾಡೋಕೆ ಇಳಿದರು ಎಂದರೆ ಅಲ್ಲಿ ಒಂದು ಅಚ್ಚುಕಟ್ಟುತನ ಇರುತ್ತದೆ. ಇದೇ ಕಾರಣಕ್ಕೆ ಸಿನಿಮಾ ಶೂಟಿಂಗ್ಗೆ ಹೆಚ್ಚಿನ ಸಮಯ ಹಿಡಿಯುತ್ತದೆ. ಈಗ ಸಲಾರ್ ಈಗತಾನೇ ಶೂಟಿಂಗ್ ಆರಂಭಿಸಿದೆ. ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಎಲ್ಲವೂ ಸೇರಿದರೆ ತುಂಬಾನೇ ಸಮಯ ಹಿಡಿಯಲಿದೆ. ಇದಾದ ನಂತರ ಪಾರ್ಟ್ 2 ಕೆಲಸಗಳಿಗೆ ಮತ್ತೊಂದಷ್ಟು ವರ್ಷಗಳು ಉರುಳಲಿವೆ. ಹೀಗಾಗಿ, ಸಲಾರ್ ಎರಡನೇ ಪಾರ್ಟ್ ತೆರೆಗೆ ಬರಲು ಇನ್ನೂ 3-5 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಸಲಾರ್ ಸಿನಿಮಾ 150 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿದೆ. 2022ರ ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರಭಾಸ್ಗೆ ಜತೆಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರೂ ಕನ್ನಡಿಗರಿಗೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್ ಮುಂದುವರಿಸಿದೆ ಅನ್ನೋದು ವಿಶೇಷ.
ಇದನ್ನೂ ಓದಿ: ಸಲಾರ್ ಬಳಿಕ ಕಾದಿದೆ ಸರ್ಪ್ರೈಸ್; ಪ್ರಭಾಸ್ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್ ನೀಲ್?