ಜೂ ಎನ್​ಟಿಆರ್​ ಸಿನಿಮಾಕ್ಕೆ ಕುಮಟಾನಲ್ಲಿ ಬೃಹತ್ ಸೆಟ್, ಏನೇನಿದೆ?

Prashanth Neel: ಜೂ ಎನ್​ಟಿಆರ್ ‘ವಾರ್ 2’ ಹಿಂದಿ ಸಿನಿಮಾ ಮುಗಿಸಿ ಇತ್ತೀಚೆಗಷ್ಟೆ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಕರ್ನಾಟಕದ ಕುಮುಟಾ ಬಳಿ ಸಿನಿಮಾಕ್ಕೆ ಸೆಟ್ ನಿರ್ಮಿಸಲಾಗಿದ್ದು, ಸೆಟ್​ ಹೇಗಿದೆ? ಸೆಟ್​ನಲ್ಲಿ ಏನೇನಿದೆ? ಚಿತ್ರೀಕರಣ ಹೇಗೆ ಸಾಗುತ್ತಿದೆ ಮಾಹಿತಿ ಇಲ್ಲಿದೆ...

ಜೂ ಎನ್​ಟಿಆರ್​ ಸಿನಿಮಾಕ್ಕೆ ಕುಮಟಾನಲ್ಲಿ ಬೃಹತ್ ಸೆಟ್, ಏನೇನಿದೆ?
Jr Ntr Neel

Updated on: Apr 26, 2025 | 8:54 AM

ತೆಲುಗಿನ ಸ್ಟಾರ್ ಜೂ ಎನ್​ಟಿಆರ್ (Jr NTR) ಹಿಂದಿಯ ‘ವಾರ್ 2’ (War 2) ಸಿನಿಮಾ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಇದೀಗ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಈ ಮೊದಲು ‘ಡ್ರ್ಯಾಗನ್’ ಎಂದು ಹೆಸರಿಡಲಾಗಿತ್ತು, ಆದರೆ ಸಿನಿಮಾದ ಹೆಸರನ್ನು ಬದಲಾಯಿಸಲಾಗುವುದು ಎನ್ನಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಕರ್ನಾಟಕದ ಕುಮಟಾ ಬಳಿ ಬೃಹತ್ ಸೆಟ್ ಒಂದನ್ನು ನಿರ್ಮಿಸಲಾಗಿದೆ.

ಕುಮಟಾದ ಧಾರೇಶ್ವರದಲ್ಲಿ ಭಾರಿ ಬೃಹತ್ ಸೆಟ್ ಅನ್ನು ಜೂ ಎನ್​ಟಿಆರ್ ಸಿನಿಮಾಕ್ಕಾಗಿ ನಿರ್ಮಾಣ ಮಾಡಲಾಗಿದೆ. ಜೂ ಎನ್​ಟಿಆರ್ ಹಲವು ದಿನಗಳ ಕಾಲ ಇಲ್ಲಿಯೇ ಇದ್ದು ಚಿತ್ರೀಕರಣ ಮಾಡಲಿದ್ದಾರೆ. ಸಿನಿಮಾ ಸೆಟ್​ನಲ್ಲಿ ಬೃಹತ್ ಹೆಲಿಕಾಪ್ಟರ್, ಮನೆಗಳು, ರೈಲ್ವೆ ಟ್ರ್ಯಾಕ್, ರೈಲ್ವೆ ಭೋಗಿಗಳು, ಭಾರಿ ಬೃಹತ್ ಬಂದೂಕುಗಳು, ಟ್ಯಾಂಕರ್​ಗಳನ್ನು ತಂದು ನಿಲ್ಲಿಸಲಾಗಿದೆ. ಧಾರೇಶ್ವರ ಸೆಟ್ ನೋಡಿದರೆ ಸಿನಿಮಾದ ಬೃಹತ್ತತೆ ಅರ್ಥವಾಗುವಂತಿದೆ.

ರಾಮನಗಿಂಡಿ ಕಡಲ ಕಿನಾರೆಯಲ್ಲಿ ಈ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು ಪ್ರಶಾಂತ್ ನೀಲ್ ಅವರ ‘ಸಲಾರ್’, ‘ಕೆಜಿಎಫ್​’ ಸಿನಿಮಾಗಳಿಗೆ ಸೆಟ್ ನಿರ್ಮಿಸಿದ್ದ ತಂಡವೇ ಜೂ ಎನ್​ಟಿಆರ್ ಸಿನಿಮಾಕ್ಕೂ ಸೆಟ್ ನಿರ್ಮಾಣ ಮಾಡಿದೆ. ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಸಿನಿಮಾ ಚಿತ್ರೀಕರಣ ನಿರಾತಂಕವಾಗಿ ಸಾಗುತ್ತಿದೆ. ಸಿನಿಮಾ ಸೆಟ್​ಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ.

ಇದನ್ನೂ ಓದಿ:ಜೂನಿಯರ್​ ಎನ್​ಟಿಆರ್​, ಪ್ರಶಾಂತ್ ನೀಲ್ ಫ್ಯಾನ್ಸ್ ಪಾಲಿಗೆ ಏ.22 ವಿಶೇಷ ದಿನ; ಸಿಕ್ತು ಅಪ್​ಡೇಟ್

ಸಿನಿಮಾದಲ್ಲಿ ಜೂ ಎನ್​ಟಿಆರ್ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಹಿಂದಿನ ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರು ಅವರೇ ಈ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ಭುವನ್ ಗೌಡ ಅವರು ಕ್ಯಾಮೆರಾ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಶಾಂತ್ ನೀಲ್ ಬಹುತೇಕ ತಮ್ಮ ಹಳೆಯ ತಂಡವನ್ನೇ ಈ ಸಿನಿಮಾಕ್ಕೂ ಬಳಸಿಕೊಂಡಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆಯೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಜೂ ಎನ್​ಟಿಆರ್, ಒಂದು ವಾರದ ಹಿಂದಷ್ಟೆ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಎರಡು ಶೇಡ್​ನಲ್ಲಿ ಜೂ ಎನ್​ಟಿಆರ್ ಕಾಣಿಸಿಕೊಳ್ಳಲಿದ್ದಾರೆ.

ಪ್ರಶಾಂತ್ ನೀಲ್-ಜೂ ಎನ್​ಟಿಆರ್ ಸಿನಿಮಾದ ಚಿತ್ರೀಕರಣ ಈ ವರ್ಷಾಂತ್ಯಕ್ಕೆ ಮುಗಿಯಲಿದೆ. ಆ ಬಳಿಕ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಮುಂದಿನ ವರ್ಷ ಏಪ್ರಿಲ್ ತಿಂಗಳ ವೇಳೆಗೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಳಿಕ ‘ದೇವರ 2’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಜೂ ಎನ್​ಟಿಆರ್. ಇನ್ನು ಪ್ರಶಾಂತ್ ನೀಲ್, ಈ ಸಿನಿಮಾದ ಬಳಿಕ ಪ್ರಭಾಸ್ ಜೊತೆಗೆ ‘ಸಲಾರ್ 2’ ಪ್ರಾರಂಭ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ