Puneeth Rajkumar 12th Day Rituals Highlights: ಅಭಿಮಾನಿಗಳಿಗೆ ಊಟ ಬಡಿಸಿದ ಪುನೀತ್ ಪತ್ನಿ ಅಶ್ವಿನಿ, ಶಿವಣ್ಣ
Puneeth Rajkumar Anna Santarpane: ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆಗೆ ಆಯೋಜನೆ ಮಾಡಲಾಗಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಹಿನ್ನೆಲೆ ದೊಡ್ಮನೆಯಿಂದ ಇಂದು (ನ.9) ಅನ್ನಸಂತರ್ಪಣೆಗೆ ಆಯೋಜನೆ ಮಾಡಲಾಗಿದೆ. ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆಗೆ ಆಯೋಜನೆ ಮಾಡಲಾಗಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 11 ಗಂಟೆಯಿಂದಲೇ ಅನ್ನಸಂತರ್ಪಣೆ ಆರಂಭವಾಗಲಿದೆ. ಒಂದು ಬಾರಿಗೆ 5 ಸಾವಿರ ಜನರಿಗೆ ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. 4 ಸಾವಿರ ಮಾಂಸಾಹಾರಿ, 1 ಸಾವಿರ ಸಸ್ಯಾಹಾರಿ ಕೌಂಟರ್ಗಳನ್ನ ಸಿದ್ಧಪಡಸಿಲಾಗಿದೆ. 24 ರೋಗಳಲ್ಲಿ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದ್ದು, 2 ಗೇಟ್ಗಳಲ್ಲಿ 5 ಸಾವಿರ ಕುರ್ಚಿ, ಟೇಬಲ್ ಹಾಕಲಾಗಿದೆ.
LIVE NEWS & UPDATES
-
3 ಗಂಟೆಯಾದರೂ ಕಡಿಮೆಯಾಗದ ಅಭಿಮಾನಿಗಳ ಸಂಖ್ಯೆ
ಪುನೀತ್ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯ ಮುಂದುವರಿದಿದೆ. ಬೆಳಗ್ಗೆ 11.30ರಿಂದ ನಿರಂತರವಾಗಿ ಅನ್ನಸಂತರ್ಪಣೆ ನಡೆಯುತ್ತಿದ್ದು, 3 ಗಂಟೆಯಾದರೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಈವರೆಗೆ 18 ಸಾವಿರಕ್ಕೂ ಹೆಚ್ಚು ಜನ ಊಟ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
-
ಅವಶ್ಯಕತೆ ಬಿದ್ದರೆ ಮತ್ತೆ ಅಡುಗೆ ಮಾಡ್ತೇವೆ; ಅಡುಗೆ ಗುತ್ತಿಗೆದಾರ ಮಾಹಿತಿ
ಬೆಳಿಗ್ಗೆಯಿಂದ ಇದೂವರೆಗೂ 23-25 ಸಾವಿರ ಜನ ಊಟ ಮಾಡಿದ್ದಾರೆ. ಇನ್ನೂ 6 ಸಾವಿರ ಜನರಿಗೆ ಆಗುವಷ್ಟು ಊಟವಿದೆ. ಅವಶ್ಯಕತೆ ಬಿದ್ದರೆ ಮತ್ತೆ ಅಡುಗೆ ಮಾಡುತ್ತೇವೆ ಅಂತ ಟಿವಿ9ಗೆ ಅಡುಗೆ ಗುತ್ತಿಗೆ ಪಡೆದ ಗುತ್ತಿಗೆದಾರ ಮಾಹಿತಿ ನೀಡಿದ್ದಾರೆ.
-
ಅರಮನೆ ಮೈದಾನಕ್ಕೆ ಶಿವಣ್ಣ ಪತ್ನಿ ಗೀತಾ ಆಗಮನ
ಪುನೀತ್ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯ ಮುಂದುವರಿದಿದೆ. ಅರಮನೆ ಮೈದಾನಕ್ಕೆ ನಟ ಶಿವಣ್ಣ ಮತ್ತು ಪತ್ನಿ ಗೀತಾ ಆಗಮಿಸಿದ್ದಾರೆ.
ಹೇಳಿ ಕೇಳಿ ಜೋಗಿ ಪಾತ್ರ ಮಾಡಿದ್ದೇನೆ; ಶಿವರಾಜ್‌ಕುಮಾರ್ ಭಾವನಾತ್ಮಕ ಹೇಳಿಕೆ
ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸಿದ ಶಿವಣ್ಣ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. ಹೇಳಿ ಕೇಳಿ ಜೋಗಿ ಪಾತ್ರ ಮಾಡಿದ್ದೇನೆ. ಜೋಗಿ ಹತ್ರ ಏನಿರುತ್ತೇ ? ಎಲ್ಲವೂ ಅಭಿಮಾನಿಗಳ ಆಶಿರ್ವಾದ ,ಪ್ರೀತಿ ಅಷ್ಟೇ ಅಂತ ಹೇಳಿದರು.
ಅಭಿಮಾನಿಗಳು, ಅಡುಗೆ ಬಾಣಸಿಗರಿಗೆ ಶಿವರಾಜಕುಮಾರ್ರಿಂದ ಧನ್ಯವಾದ
ಅನ್ನಸಂತರ್ಪಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅಂತ ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಅಪ್ಪು ಅಭಿಮಾನಿಗಳು
ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಅರಮನೆ ಮೈದಾನದತ್ತ ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಊಟಕ್ಕೆ ತೆರಳುತ್ತಿದ್ದಾರೆ.
7 ಸುತ್ತು ಊಟದ ವ್ಯವಸ್ಥೆ ಮುಕ್ತಾಯ
ಪುನೀತ್ ಹೆಸರಲ್ಲಿ ಬೆಳಗ್ಗೆ11:30 ರಿಂದ ಅನ್ನದಾನ ಕಾರ್ಯ ನಡೆಯುತ್ತಿದೆ. ಇಲ್ಲಿವರಗೆ ಸುಮಾರು 7 ಸುತ್ತು ಊಟದ ವ್ಯವಸ್ಥೆ ಮುಕ್ತಾಯವಾಗಿದ್ದು, ಸುಮಾರು 18 ಸಾವಿರಕ್ಕೂ ಹೆಚ್ಚು ಜನ ಊಟ ಮಾಡಿದ್ದಾರೆ.
ಹೆಸರಘಟ್ಟದಲ್ಲೂ ಅಪ್ಪು ಅಭಿಮಾನಿಗಳಿಂದ ಅನ್ನಸಂತರ್ಪಣೆ
ಪುನೀತ್ ಸ್ಮರಣಾರ್ಥವಾಗಿ ಕುಟುಂಬದವರಿಂದ ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಿದ್ದಾರೆ. ಜೊತೆಗೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲೂ ಅಭಿಮಾನಿಗಳು ನಾನ್ ವೆಜ್ ಊಟವನ್ನು ವಿತರಿಸಿದ್ದಾರೆ. ಅಕ್ಕ-ಪಕ್ಕದ ಗ್ರಾಮಗಳ ಸಾವಿರಾರು ಜನರಿಗೆ ಬಿರಿಯಾನಿ ಜೊತೆ ಮೊಟ್ಟೆ ನೀಡಿದ್ದಾರೆ. ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದ್ದಾರೆ.
ಪುನೀತ್ ನಿವಾಸದತ್ತ ತೆರಳುತ್ತಿರುವ ಅಭಿಮಾನಿಗಳು
ನಟ ಪುನೀತ್ ನಿವಾಸದತ್ತ ಅಭಿಮಾನಿಗಳು ತೆರಳುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಊಟ ಸೇವಿಸಿ ಅಪ್ಪು ಮನೆಯತ್ತ ಫ್ಯಾನ್ಸ್ ತೆರಳುತ್ತಿದ್ದಾರೆ.
ಪೌರಾಣಿಕ ವೇಷ ಭೂಷಣದಲ್ಲಿ ಆಗಮಿಸಿದ ಪುನೀತ್ ಅಭಿಮಾನಿಗಳು
ಪೌರಾಣಿಕ ವೇಷ ಭೂಷಣದಲ್ಲಿ ಪುನೀತ್ ಅಭಿಮಾನಿಗಳು ಆಗಮಿಸಿದರು. ಶಂಖ, ಜಾಗಟೆ ಭಾರಿಸುತ್ತಾ ವಿಭಿನ್ನ ವೇಷಭೂಷಣ ಧರಿಸಿ ಅಭಿಮಾನಿಗಳು ಆಗಮಿಸಿದರು.
ಪುನೀತ್ ನೆನಪು ಕಾರ್ಯಕ್ರಮ; ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಅನ್ನಸಂತರ್ಪಣೆ
ನಟ ಪುನೀತ್ ನೆನಪು ಕಾರ್ಯಕ್ರಮದ ಅಂಗವಾಗಿ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಗರದ ಮಹಾನಗರ ಪಾಲಿಕೆ ಮುಂಭಾಗ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಿದ್ಧತೆ ಪರಿಶೀಲನೆ ನಡೆಸುತ್ತಿರುವ ರಾಮಕುಮಾರ್ ಪುತ್ರ ಧಿರೇಂದ್ರ ರಾಮಕುಮಾರ್
ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಇಂದು ಅನ್ನಸಂತರ್ಪಣೆ ನಡೆಯುತ್ತಿದ್ದು, ರಾಮಕುಮಾರ್ ಪುತ್ರ ಧಿರೇಂದ್ರ ರಾಮಕುಮಾರ್ ಸಿದ್ಧತೆ ಪರಿಶೀಲನೆ ನಡೆಸುತ್ತಿದ್ದಾರೆ. ಅಭಿಮಾನಿಗಳಿಗೆ ಶಾಂತಿಯಿಂದ ಊಟ ಮಾಡುವಂತೆ ಧಿರೇಂದ್ರ ರಾಮಕುಮಾರ್ ಮನವಿ ಮಾಡುತ್ತಿದ್ದಾರೆ.
ಆಟೋ, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ಅಭಿಮಾನಿಗಳು
ಆಟೋ, ದ್ವಿಚಕ್ರ ವಾಹನಗಳಲ್ಲಿ ಹಾಗೂ ನಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಪುನೀತ್ ಹೆಸರಿನಲ್ಲಿ ನಡೆಯುತ್ತಿರುವ ಅನ್ನಸಂತರ್ಪಣೆಗೆ ಆಗಮಿಸುವವರಿಗೆ ವ್ಯವಸ್ಥಿತವಾಗಿ ಸೂಚಿಸಿದ ಆಯಕಟ್ಟಿನ ಸ್ಥಳದಲ್ಲೇ ವೆಹಿಕಲ್ ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ. ಅಲ್ಲದೇ ಜಯಮಹಲ್ ರಸ್ತೆ ಮೂಲಕ ನಿರ್ಗಮನಕ್ಕೆ ಸೂಚನೆ ನೀಡಲಾಗಿದೆ.
ಅಪ್ಪು ಅಗಲಿಕೆ ಹಿನ್ನಲೆ ಪುನಿತ್ ಅಭಿಮಾನಿಗಳಿಂದ ಶ್ರದ್ಧಾಂಜಲಿ
ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಅಪ್ಪು ಅಗಲಿಕೆ ಹಿನ್ನಲೆ ಪುನಿತ್ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಗ್ರಾಮದ ಪುನಿತ್ ಅಭಿಮಾನಿಗಳು ಅಪ್ಪುಗೆ ದೀಪನಮನ ಸಲ್ಲಿಸಿದ್ದಾರೆ. ತಡರಾತ್ರಿಯವರೆಗೂ ಅಪ್ಪುಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಆಟೋ, ದ್ವಿಚಕ್ರ ವಾಹನಗಳಲ್ಲಿ ಹಾಗೂ ನಡೆದು ಬರುತ್ತಿರುವ ಪುನೀತ್ ಅಭಿಮಾನಿಗಳು
ಅಪ್ಪು ಅಭಿಮಾನಿಗಳು ಆಟೋ, ದ್ವಿಚಕ್ರ ವಾಹನಗಳಲ್ಲಿ ಹಾಗೂ ನಡೆದು ಬರುತ್ತಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತಪಾಸಣೆ
ಸಾವಿರಾರು ಜನರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತಪಾಸಣೆ ನಡೆಯುತ್ತಿದೆ. ಅಧಿಕಾರಿಗಳು ಪ್ರತಿಯೊಂದು ಖಾದ್ಯಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಪ್ಪು ಪುಟಾಣಿ ಫ್ಯಾನ್ಸ್
ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅಪ್ಪು ಪುಟಾಣಿ ಫ್ಯಾನ್ಸ್ ಭಾಗಿದ್ದಾರೆ. ಈ ವೇಳೆ ಮೂರು ವರ್ಷದ ಮಗು ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಹಾಡನ್ನು ಹಾಡಿದೆ.
2 ಕಿಲೋಮೀಟರ್ ದೂರದವರೆಗೂ ಅಭಿಮಾನಿಗಳ ಸಾಲು
ಸಾಗರೋಪಾದಿಯಲ್ಲಿ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. 2 ಕಿಲೋಮೀಟರ್ ದೂರದವರೆಗೂ ಅಭಿಮಾನಿಗಳ ಸಾಲು ನಿಂತಿದೆ. ಅಭಿಮಾನಿಗಳ ಸಾಲು ತಡೆಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ನಿಯಂತ್ರಣಕ್ಕೆ ಸಿಗದ ಅಭಿಮಾನಿಗಳ ದಂಡು
ಈಗಾಗಲೇ ಅರಮನೆ ಮೈದಾನದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಸಾಗರೋಪಾದಿಯಲ್ಲಿ ಬರುತ್ತಿರುವ ಅಭಿಮಾನಿಗಳ ದಂಡನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪ್ಯಾಲೇಸ್ ಗ್ರೌಂಡ್‌ಗೆ ಸಾಲಾಗಿ ಬರುತ್ತಿರುವ ಪುನೀತ್ ಅಭಿಮಾನಿಗಳು
ಪ್ಯಾಲೇಸ್ ಗ್ರೌಂಡ್‌ಗೆ ಅಪ್ಪು ಅಭಿಮಾನಿಗಳು ಸಾಲಾಗಿ ಬರುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಪುನೀತ್ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಅರಮನೆ ಮೈದಾನದಲ್ಲಿ ನಟ ಶಿವಣ್ಣರಿಂದ ರಕ್ತದಾನ
ಅರಮನೆ ಮೈದಾನದಲ್ಲಿ ನಟ ಶಿವರಾಜ್‌ಕುಮಾರ್ ರಕ್ತದಾನ ಮಾಡಿದ್ದಾರೆ. ಅಭಿಮಾನಿಗಳಿಗೆ ಊಟ ಬಡಿಸಿದ ಬಳಿಕ ಶಿವಣ್ಣ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದರು.
ನಾನ್ ವೆಜ್ ಊಟದ ಕಡೆ ಹೋಗುತ್ತಿರುವ ಅಭಿಮಾನಿಗಳು
ಸದ್ಯ ವೆಜ್ ಕೌಂಟರ್ಗಳು ಖಾಲಿ ಖಾಲಿಯಾಗಿದೆ. ಹೆಚ್ಚು ನಾನ್ ವಜ್ ಊಟದ ಕಡೆ ಅಭಿಮಾನಿಗಳು ಹೋಗುತ್ತಿದ್ದಾರೆ.
ಎಡಗೈ ಮಾಡಿದ್ದು ಬಲಗೈಗೆ ಗೊತ್ತಾಗಬಾರದು; ಶಿವಣ್ಣ ಹೇಳಿಕೆ
ಪುನೀತ್ ಆಸೆ ಈ ರೀತಿ ನೆರವೇರಬೇಕೆಂಬುದು ದೇವರಿಚ್ಛೆ. ದೇವರ ಇಚ್ಛೆ ಈ ರೀತಿ ಇತ್ತು ಎಂದು ಅನಿಸುತ್ತೆ. ಅಪ್ಪುನಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಎಡಗೈ ಮಾಡಿದ್ದು ಬಲಗೈಗೆ ಗೊತ್ತಾಗಬಾರದು. ಅದನ್ನೇ ನಾವೆಲ್ಲರೂ ಅನುಸರಿಸಬೇಕು ಅಂತ ಶಿವರಾಜ್‌ಕುಮಾರ್ ಅಭಿಪ್ರಾಯಪಟ್ಟರು. ಎಲ್ಲರಿಗೂ ಉಟದ ವ್ಯವಸ್ಥೆ ಆಗುತ್ತಿದೆ. ನ.16ರಂದು ಚಿತ್ರರಂಗದಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಜನರಿಗೆ ಊಟ ಹಾಕಬೇಕೆಂಬ ಅಪ್ಪು ಕನಸು ನನಸಾಗುತ್ತಿದೆ; ರಾಘವೇಂದ್ರ ರಾಜ್‌ಕುಮಾರ್ ಹೇಳಿಕೆ
ಜನರಿಗೆ ಊಟ ಹಾಕಬೇಕೆಂಬ ಅಪ್ಪು ಕನಸು ನನಸಾಗುತ್ತಿದೆ ಅಂತ ಅರಮನೆ ಮೈದಾನದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹೇಳಿದರು. ಅಪ್ಪು ನಿಮ್ಮ ಜೊತೆ ಬದುಕುತ್ತಿದ್ದಾರೆ. ಅಪ್ಪು ಒಳ್ಳೆಯ ಕೆಲಸಗಳನ್ನು ಬಿಟ್ಟು ಹೋಗಿದ್ದಾನೆ. ಅದನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗೋಣ. ಎಲ್ಲರೂ ನಿಧಾನವಾಗಿ ಊಟ ಮಾಡಿ ಅಂತ ರಾಘಣ್ಣ ಹೇಳಿದರು.
ಪ್ರೀತಿಗೆ ಏನೂ ಮಾತೇ ಬರುವುದಿಲ್ಲ- ಶಿವರಾಜ್‌ಕುಮಾರ್
ಗದ್ದಲ ಆಗದ ರೀತಿಯಲ್ಲಿ ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಪ್ರೀತಿಗೆ ಏನೂ ಮಾತೇ ಬರುವುದಿಲ್ಲ ಅಂತ ಅರಮನೆ ಮೈದಾನದಲ್ಲಿ ನಟ ಶಿವರಾಜ್‌ಕುಮಾರ್ ಹೇಳಿದರು.
ಅರಮನೆ ಮೈದಾನದಿಂದ ಹೊರಟ ಅಶ್ವಿನಿ
ಅರಮನೆ ಮೈದಾನಕ್ಕೆ ಆಗಮಿಸಿದ್ದ ನಟ ಪುನೀತ್ ಪತ್ನಿ ಮನೆಯತ್ತ ಹೊರಟಿದ್ದಾರೆ.
ಅಭಿಮಾನಿಗಳಿಗೆ ಊಟ ಬಡಿಸಿದ ರಾಘಣ್ಣ, ಶಿವಣ್ಣ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ಆರಂಭವಾಗಿದೆ. ಈ ವೇಳೆ ಪುನೀತ್ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸದರು.
ಅಭಿಮಾನಿಗಳಿಗೆ ಊಟ ಬಡಿಸಿದ ಪುನೀತ್ ಪತ್ನಿ ಅಶ್ವಿನಿ
ಅಭಿಮಾನಿಗಳಿಗೆ ನಟ ಪುನೀತ್ ಪತ್ನಿ ಅಶ್ವಿನಿ ಊಟ ಬಡಿಸಿದರು.
ರಾಘವೇಂದ್ರ ರಾಜ್‌ಕುಮಾರ್ ಜೊತೆ ಬಂದ ಶಿವಣ್ಣ
ಅರಮನೆ ಮೈದಾನಕ್ಕೆ ನಟ ಶಿವ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಆಗಮಿಸಿದರು.
ಪತಿಯನ್ನು ನೆನೆದು ಕಣ್ಣೀರು ಹಾಕುತ್ತಿರುವ ಅಶ್ವಿನಿ
ಪತಿ ಪುನೀತ್ ರಾಜ್‌ಕುಮಾರ್ ನೆನೆದು ಪತ್ನಿ ಅಶ್ವಿನಿ ಅರಮನೆ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.
ಅರಮನೆ ಮೈದಾನ ತಲುಪುತ್ತಿರುವ ದೊಡ್ಮನೆ ಕುಟುಂಬ
ಅಪ್ಪು ಹೆಸರಿನಲ್ಲಿ ಇಂದು ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಈ ಹಿನ್ನೆಲೆ ದೊಡ್ಮನೆ ಕುಟುಂಬ ಅರಮನೆ ಮೈದಾನಕ್ಕೆ ಆಗಮಿಸುತ್ತಿದೆ.
ಪುನೀತ್ ನಿವಾಸದಿಂದ ಹೊರಟ ಪತ್ನಿ ಅಶ್ವಿನಿ
ಪುನೀತ್ ರಾಜ್‌ಕುಮಾರ್ ಪತ್ನಿ ಅರಮನೆ ಮೈದಾನಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಸದಾಶಿವನಗರ ನಿವಾಸದಿಂದ ಹೊರಟಿದ್ದಾರೆ.
ಬಾಳೆ ಎಲೆ ಹಾಕಿ ಊಟಕ್ಕೆ ಸಿದ್ಧತೆ
ಬಾಳೆ ಎಲೆಯನ್ನು ಟೇಬಲ್ ಮೇಲೆ ಹಾಕಿ ಊಟಕ್ಕೆ ಸಿದ್ದತೆ ಮಾಡುತ್ತಿದ್ದಾರೆ. ಕೆಲವೇ ಸಮಯದಲ್ಲಿ ಊಟ ಆರಂಭವಾಗುತ್ತದೆ.
ಪುನೀತ್ ನಿವಾಸದ ಬಳಿ ಬಂದಿರುವ ಅಭಿಮಾನಿಗಳು
ಸದಾಶಿವನಗರದ ಪುನೀತ್ ನಿವಾಸದ ಬಳಿ ಅಭಿಮಾನಿಗಳು ಬಂದಿದ್ದಾರೆ. ಈ ವೇಳೆ ಮಾತನಾಡಿದ ಅಪ್ಪು ಫ್ಯಾನ್ಸ್, ಅಪ್ಪು ಅವರು ಇಲ್ಲಾ ಅಂದ್ರೂ ನೋಡಲು ಬಂದಿದ್ದೇವೆ. ಅವರು ಇಲ್ಲಾ ಅನ್ನೋದನ್ನ ನಂಬಲು ಆಗ್ತಾ ಇಲ್ಲ. ಅಪ್ಪು ಅವರು ಇಲ್ಲ, ಅವರ ಮನೆಯನ್ನಾದ್ರು ನೋಡೋಣ ಎಂದು ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
11.30ರ ನಂತರ ಅಭಿಮಾನಿಗಳಿಗೆ ಅನ್ನಸಂತರ್ಪಣೆ
ಬೆಳಿಗ್ಗೆ 11.30ರ ನಂತರ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಆರಂಭವಾಗಲಿದೆ. ನಟ ಶಿವರಾಜ್‌ಕುಮಾರ್ ಬಂದ ಬಳಿಕ ಅನ್ನಸಂತರ್ಪಣೆ ಆರಂಭವಾಗುತ್ತದೆ. ಈಗಾಗಲೇ ಬೆಂಗಳೂರಿನ ಅರಮನೆ ಮೈದಾನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಅರಮನೆ ಮೈದಾನಕ್ಕೆ ಅಭಿಮಾನಿಗಳು ಆಗಮನ: ಊಟ ಬಡಿಸಲು 750 ಸಿಬ್ಬಂದಿ ನಿಯೋಜನೆ
ಬೆಂಗಳೂರಿನ ಅರಮನೆ ಮೈದಾನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಊಟ ಬಡಿಸಲು ಒಟ್ಟು 750 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಾನ್ ವೆಜ್ ಊಟ ಬಡಿಸಲು 400 ಸಿಬ್ಬಂದಿ, ವೆಜ್ ಊಟ ಬಡಿಸಲು 250 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
11 ಘಂಟೆ ನಂತರ ಪ್ಯಾಲೇಸ್ ಗ್ರೌಂಡ್‌ಗೆ ಆಗಮಿಸಿಲಿದೆ ಅಪ್ಪು ಫ್ಯಾಮಿಲಿ
ಅಪ್ಪು ಆಸೆಯಂತೆಯೇ ದೊಡ್ಮನೆ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುತ್ತಿದೆ. 11 ಘಂಟೆ ನಂತರ ಪ್ಯಾಲೇಸ್ ಗ್ರೌಂಡ್‌ಗೆ ಅಪ್ಪು ಕುಟುಂಬಸ್ಥರು ಆಗಮಿಸುತ್ತಾರೆ. ಅಶ್ವಿನಿ ಹಾಗು ಶಿವರಾಜ್ ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಅಭಿಮಾನಿಗಳನ್ನ ಭೇಟಿ ಮಾಡಲಿದ್ದಾರೆ.
ಇನ್ನೊಂದು ಗಂಟೆಯಲ್ಲಿ ಅನ್ನಸಂತರ್ಪಣೆ ಆರಂಭ
ಇನ್ನೊಂದು ಗಂಟೆಯಲ್ಲಿ ಅನ್ನಸಂತರ್ಪಣೆ ಆರಂಭವಾಗುತ್ತದೆ. ಸಿಬ್ಬಂದಿ ಕೊನೆ ಕ್ಷಣದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆಹಾರ ಬಡಿಸಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆಹಾರ ಬಡಿಸುವ ಸಾಲುಗಳಲ್ಲಿ 15 ರಿಂದ 20 ಸಿಬ್ಬಂದಿ ಇರುತ್ತಾರೆ.
ಅಭಿಮಾನಿಗಳು ಹೆಚ್ಚಾಗಿ ಆಗಮಿಸಿದರೆ ಪರ್ಯಾಯ ವ್ಯವಸ್ಥೆ
ಪುನೀತ್ ಅಭಿಮಾನಿಗಳು, ಗಣ್ಯರಿಗೆ ಇಂದು ಅನ್ನಸಂತರ್ಪಣೆ ಮಾಡಲಾಗುತ್ತದೆ. ಅಭಿಮಾನಿಗಳು ಹೆಚ್ಚಾಗಿ ಆಗಮಿಸಿದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. 15ರಿಂದ 20 ಕೌಂಟರ್ ತೆರೆದು ಊಟ ವಿತರಣೆಗೆ ಪ್ಲ್ಯಾನ್ ಮಾಡಲಾಗಿದೆ.
ನಟ ಪುನೀತ್ ಸಮಾಧಿ ದರ್ಶನ ಪಡೆದ ವೃದ್ಧ ದಂಪತಿ
ಜಾಗಟೆ ಬಾರಿಸಿ, ಶಂಖ ಊದಿ ಅಪ್ಪು ಸಮಾಧಿಗೆ ತುಮಕೂರು ಜಿಲ್ಲೆ ತಿಪಟೂರಿನ ವೃದ್ಧ ದಂಪತಿ ನಮನ ಸಲ್ಲಿಸಿದ್ದಾರೆ. ದಾಸಪ್ಪ ದಂಪತಿಯಿಂದ ಪುನೀತ್ ಸಮಾಧಿಗೆ ನಮನ ಸಲ್ಲಿಸಲಾಗಿದೆ. ನಿನ್ನೆ ರಾತ್ರಿ ಬಂದು ಮಗಳ ಮನೆಗೆ ಬಂದು ಉಳಿದುಕೊಂಡಿದ್ವಿ, ಬೆಳಗ್ಗೆ ಎದ್ದು ಮನೆಯಲ್ಲಿ ಶಂಖ ಜಾಗಟಿಗೆ ಪೂಜೆ ಮಾಡಿದ್ವಿ. ಸಮಾಧಿ ಬಳಿ ಬಂದು ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಾಗಟಿ, ಶಂಖ ಊದಿದ್ದೇವೆ ಎಂದು ದಂಪತಿ ತಿಳಿಸಿದ್ದಾರೆ.
ಪುನೀತ್ ಮನೆ ಬಳಿ ಹೆಚ್ಚಿದ ಬಂದೋಬಸ್ತ್
ಎಸಿಪಿ, ಇನ್ಸ್‌ಪೆಕ್ಟರ್ ಸೇರಿ 40ಕ್ಕೂ ಹೆಚ್ಚು ಪೊಲೀಸರನ್ನು ಪುನೀತ್ ರಾಜ್ ಕುಮಾರ್ ನಿವಾಸದ ಮುಂದೆ ನಿಯೋಜನೆ ಮಾಡಲಾಗಿದೆ. ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಹಿನ್ನಲೆ, ಪುನೀತ್ ಮನೆ ಕಡೆಗೆ ಅಭಿಮಾನಿಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಅನ್ನು ಪೊಲೀಸರು ಕಲ್ಪಿಸಿದ್ದಾರೆ. ಅಲ್ಲದೇ ಪುನೀತ್ ಮನೆ ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದಾರೆ.
ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡೋ ದಿನ ರಾಘಣ್ಣ ಭಾವುಕ ಟ್ವಿಟ್
ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿರುವ ರಾಘವೇಂದ್ರ ರಾಜ್ ಕುಮಾರ್ ಅಪ್ಪುವನ್ನು ನೆನೆದು ಭಾವುಕರಾಗಿದ್ದಾರೆ. ನಾನು ನಿರುದ್ಯೋಗಿಯಾಗಿದ್ದೆ. ನೀನು ನನಗೆ ಸಮಾಜ ಸೇವೆ ಕೆಲಸ ಕೊಟ್ಟಿದ್ದೀಯಾ. ಸಮಾಜ ಸೇವೆ ಮಾಡುವ ಉದಾತ್ತ ಕೆಲಸದಲ್ಲಿ ಮುನ್ನಡೆಯುವಂತೆ ಮಾಡಿದ್ದೀಯಾ. ಸೇವೆ ಮಾಡುವಾಗ ಕಿವುಡರಾಗಿ ಮತ್ತು ಕುರುಡರಾಗಿರಿ ನಿಮ್ಮ ಆಲೋಚನೆಗಳೊಂದಿಗೆ ಶಾಶ್ವತವಾಗಿ ಬದುಕುವ ಆ ಪ್ರೀತಿ ನಿಮಗೆ ಶಕ್ತಿ ನೀಡುತ್ತದೆ. ನಿನ್ನ ಆಲೋಚನೆಗಳ ಜೊತೆ ಪ್ರೀತಿಸುತ್ತಾ ಬದುಕುತ್ತೇನೆ ಎಂದು ಭಾವುಕರಾಗಿ ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅನ್ನಸಂತರ್ಪಣೆಗೆ ಊಟ ರೆಡಿ
ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿ 12 ದಿನ ಹಿನ್ನೆಲೆ ಪುನೀತ್ ಅಭಿಮಾನಿಗಳು, ಗಣ್ಯರಿಗೆ ಇಂದು ಅನ್ನಸಂತರ್ಪಣೆ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆಗೆ ಸಕಲ ಸಿದ್ಧತೆ ನಡೆದಿದೆ. ಅನ್ನಸಂತರ್ಪಣೆಗೆ ಸಸ್ಯಾಹಾರಿ, ಮಾಂಸಾಹಾರಿ ಖಾದ್ಯ ಸಿದ್ಧವಾಗಿದೆ. ಸಸ್ಯಾಹಾರಿಗಳಿಗೆ ಘೀ ರೈಸ್, ವೆಜ್ ಕುರ್ಮಾ, ಅಕ್ಕಿ ಪಾಯಸ, ಆಲೂ ಕಬಾಬ್, ಗೋಬಿ ಮಂಚೂರಿ, ಮಸಾಲಾ ವಡೆ, ಅನ್ನ, ಸಾಂಬಾರ್, ರಸಂ, ಹಪ್ಪಳದ ಊಟ ಸಿದ್ಧಪಡಿಸಲಾಗಿದೆ. ಮಾಂಸಾಹಾರಿಗಳಿಗಾಗಿ ಚಿಕನ್ ಚಾಪ್ಸ್, ಕಬಾಬ್, ಮೊಟ್ಟೆ, ಘೀ ರೈಸ್, ಅನ್ನ, ರಸಂ, ಅಕ್ಕಿ ಪಾಯಸ ಸಿದ್ಧಪಡಿಸಲಾಗಿದೆ. ಸಿಬ್ಬಂದಿಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಏಕ ಕಾಲಕ್ಕೆ 4 ಸಾವಿರ ಜನರಿಗೆ ಊಟದ ವ್ಯವಸ್ಥೆ
ಸರತಿ ಸಾಲಿನಲ್ಲಿ ಬಂದು ಊಟ ಮಾಡಬಹುದು. ಒಂದೇ ಸಲ 4 ಸಾವಿರಕ್ಕೂ ಹೆಚ್ಚು ಜನ ಊಟ ಮಾಡಬಹುದು. ಜನ ಜಾಸ್ತಿ ಆದರೆ ಬೋಫೆ ಸಿಸ್ಟಮ್ ಮಾಡಲಾಗುತ್ತದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ
ಪುನೀತ್ ಹೆಸರಲ್ಲಿ ಅಭಿಮಾನಿಗಳಿಗೆ ಊಟ ಸಿದ್ಧ
ಪುನೀತ್ ಹೆಸರಲ್ಲಿ ಇಂದು ನಡೆಯುತ್ತಿರುವ ಊಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾದ್ಯಗಳನ್ನ ಸರ್ವ್ ಮಾಡಲು ಸಿಬ್ಬಂದಿಗಳನ್ನು ರೆಡಿಯಾಗಿದ್ದಾರೆ .
ಪುನೀತ್ ಸಮಾಧಿ ವೀಕ್ಷಣೆಗೆ ಅಭಿಮಾನಿಗಳನ್ನ ಒಳ ಬಿಟ್ಟ ಪೊಲೀಸರು
ಪುನೀತ್ ಸಮಾಧಿ ವೀಕ್ಷಣೆಗೆ ಬಂದ ಅಭಿಮಾನಿಗಳನ್ನ ಪೊಲೀಸರು ಒಳ ಬಿಟ್ಟಿದ್ದಾರೆ. ಬೆಳಿಗ್ಗೆಯಿಂದಲೇ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಕಾಯುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂದೆ ಸಾಲಿನಲ್ಲಿ ನಿಂತಿದ್ದರು. ಹೂವಿನ ಹಾರ ಹಾಕಿ ಅಭಿಮಾನಿಗಳು ನಮಿಸುತ್ತಿದ್ದಾರೆ.
ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಭದ್ರತೆ
ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ. ಒಟ್ಟು 1123 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಅದರಲ್ಲಿ ಎಸಿಪಿ 5, ಇನ್ಸ್‌ಪೆಕ್ಟರ್ 30, ಪಿಎಸ್ ಐ 90 ಮತ್ತು 850 ಕಾನ್ಸ್ಟೇಬಲ್ಗಳು ಎಂದು ತಿಳಿದುಬಂದಿದೆ.
ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳ ಸಾಗರ
ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 12 ದಿನ. ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಅಪ್ಪು ನಿಧನಕ್ಕೂ ಮೂರು ದಿನ ಮುಂಚೆ ಅವರ ಮನೆಗೆ ಅಡುಗೆ ತೆಗೆದುಕೊಂಡು ಹೋಗಿದ್ವಿ: ಬಾಣಸಿಗರ ಕಣ್ಣೀರು
ಅಪ್ಪು ನಿಧನಕ್ಕೂ ಮೂರು ದಿನ ಮುಂಚೆ ಅವರ ಮನೆಗೆ ಅಡುಗೆ ತೆಗೆದುಕೊಂಡು ಹೋಗಿದ್ವಿ ಅಂತ ಬಾಣಸಿಗರ ಕಣ್ಣೀರು ಹಾಕಿದ್ದಾರೆ. ಅಪ್ಪು ಮನೆಯಲ್ಲಿ ಏನೇ ಕಾರ್ಯಕ್ರಮವಿದ್ದರೂ ನಾವೇ ಹೋಗ್ತಾಯಿದ್ವಿ. ಅಪ್ಪು ಸರ್ ಬದುಕಿದ್ದಾಗ ನೂರಾರು ಜನರಿಗೆ ಊಟ ಹಾಕಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಎಲ್ಲರೂ ನಗ್ತಾಯಿದ್ದರು. ಇವತ್ತು ಅವರ ಕಾರ್ಯಕ್ಕೆ ಅಡುಗೆ ಮಾಡ್ತಾಯಿರೋದು ನೋವು ತಂದಿದೆ ಅಂತ ಬಾಣಸಿಗರು ಬೇಸರ ವ್ಯಕ್ತಪಡಿಸಿದರು.
ಪೊಲೀಸರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ
ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ಭದ್ರತೆಗೆ ಬಂದ ಪೊಲೀಸರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಒಂದು ಸಾವಿರ ಜನ ಪೊಲೀಸ್ ಅಧಿಕಾರಿಗಳಿಗೆ ಉಪ್ಪಿಟ್ಟು, ಚಿತ್ರನ್ನ ಸಿದ್ಧಪಡಿಸಿದ್ದಾರೆ.
ನಟ ಪುನೀತ್ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್
ಬೆಂಗಳೂರಿನ ಸದಾಶಿವನಗರದಲ್ಲಿರುವ ನಟ ಪುನೀತ್ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪುನೀತ್ ಮನೆಗೆ ಅಭಿಮಾನಿಗಳ ಭೇಟಿಗೆ ಅವಕಾಶವಿಲ್ಲ.
10 ಗಂಟೆಗೆ ಅರಮನೆ ಮೈದಾನಕ್ಕೆ ಆಗಮಿಸಲಿದೆ ರಾಜ್ ಕುಟುಂಬ
ಡಾ.ರಾಜ್ ಕುಟುಂಬಸ್ಥರು ಇಂದು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಅರಮನೆ ಮೈದಾನಕ್ಕೆ ಕುಟುಂಬಸ್ಥರು ಆಗಮಿಸುತ್ತಾರೆ.
ಮೈಸೂರಿನ ಪ್ರಮುಖ ರಸ್ತೆ, ವೃತ್ತಕ್ಕೆ ಪುನೀತ್ ಹೆಸರಿಡಿ; ಅಭಿಮಾನಿಗಳ ಮನವಿ
ಮೈಸೂರಿನ ಪ್ರಮುಖ ರಸ್ತೆ, ವೃತ್ತಕ್ಕೆ ಪುನೀತ್ ಹೆಸರಿಡಿ ಅಂತ ಮೈಸೂರು ಮೇಯರ್ ಸುನಂದಾ ಪಾಲನೇತ್ರಗೆ ಪುನೀತ್ ಅಭಿಮಾನಿಗಳು ಮನವಿ ಸಲ್ಲಿಸಿದ್ದಾರೆ.
ಭಾವನಾತ್ಮಕ ಪೋಸ್ಟ್ ಮಾಡಿದರಾಘವೇಂದ್ರ ರಾಜ್‌ಕುಮಾರ್
ನಟ ರಾಘವೇಂದ್ರ ರಾಜ್‌ಕುಮಾರ್ ಪುನೀತ್ ನೆನೆದು ಫೇಸ್ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಯಾರಿಗೂ ಗೊತ್ತಾಗದಂತೆ ನೀನು ಸಮಾಜ ಸೇವೆ ಮಾಡಿದೆ. ನಿನ್ನಂತೆ ಸಮಾಜಸೇವೆ ಮಾಡುವ ಶಕ್ತಿಯನ್ನು ನನಗೆ ನೀಡು. ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ ಅಂತ ರಾಘಣ್ಣ ಬರೆದುಕೊಂಡಿದ್ದಾರೆ.
50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ಸಾಧ್ಯತೆ
ಇಂದು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ಸಾಧ್ಯತೆಯಿದೆ. ಹೆಚ್ಚು ಜನರು ಬಂದರೆ 8 ಪ್ರತ್ಯೇಕ ಕೌಂಟರ್ಗಳನ್ನ ಮಾಡಬಹುದು.
ಭದ್ರತೆಗಾಗಿ 1 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ
ಅರಮನೆ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ 1 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ. ಗಾಯತ್ರಿ ವಿಹಾರದ ಗೇಟ್ ನಂ. 4ರಲ್ಲಿ VIP ವಾಹನಗಳಿಗೆ, ಕೃಷ್ಣ ವಿಹಾರ್ ಗೇಟ್ ನಂ.1ರಲ್ಲಿ ಜನರ ವಾಹನಕ್ಕೆ ಪಾರ್ಕ್ ಮಾಡಲು ವ್ಯವಸ್ಥೆಯಾಗಿದೆ. ಗೇಟ್ ನಂ.2 ಗಾಯತ್ರಿ ವಿಹಾರ್ ಮೂಲಕ ಜನರಿಗೆ, ಗೇಟ್ ನಂಬರ್ 2ರಲ್ಲಿಯೇ ವಿಐಪಿಗಳಿಗೆ ಪ್ರತ್ಯೇಕ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭ
ದೊಡ್ಮನೆಯಿಂದ ಇಂದು ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭವಾಗುತ್ತದೆ. 25 ಸಾವಿರಕ್ಕೂ ಹೆಚ್ಚು ಜನರಿಗೆ ನಾನ್‌ವೆಜ್, 10 ಸಾವಿರಕ್ಕೂ ಹೆಚ್ಚು ಜನರಿಗೆ ವೆಜ್ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ ರೆಡಿ
ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ ರೆಡಿಯಾಗುತ್ತಿದೆ. 25 ಸಾವಿರ ಸೋನಾ ಮಸೂರಿ ಅಕ್ಕಿ, 750 ಲೀ. ಅಡುಗೆ ಎಣ್ಣೆ, 100 ಕಟ್ಟು ಪುದೀನ ಸೊಪ್ಪು, 100 ಕೆ.ಜಿ ಟೊಮ್ಯಾಟೋ, ತಲಾ 50 ಕೆ.ಜಿ ಈರುಳ್ಳಿ, ಬೆಳ್ಳುಳ್ಳಿ, 3 ಸಾವಿರ ಕೆ.ಜಿ. ಚಿಕನ್, 8,500 ಕೋಳಿ ಮೊಟ್ಟೆ, ಒಂದು ಸಾವಿರ ಕೆ.ಜಿ ಗೀರೈಸ್ ತಯಾರಿ ಮಾಡಲಾಗುತ್ತಿದೆ.
ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ
ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಗೀ ರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ, ಮೊಟ್ಟೆ, ಅಕ್ಕಿಪೇಣಿ ಪಾಯಸ ಹಾಗೂ ಅನ್ನ, ರಸಂ ಮಾಡಲಾಗುತ್ತಿದೆ. ಸಸ್ಯಹಾರಿಗಳಿಗಾಗಿ ಗಿರೈಸ್, ಕುರ್ಮ, ಬೇಬಿಕಾರ್ನ್ ಲಾಲಿಪಪ್, ಆಲೂ ಕಬಾಬ್, ಮಸಾಲೆ ವಡೆ, ಅನ್ನ ಸಾಂಬಾರ್ ಸಿದ್ಧವಾಗುತ್ತಿವೆ.
ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ಹೆಡ್ ಕುಕ್
ಅಪ್ಪು ಅವರ ಮದುವೆಗೆ ನಾವೇ ಅಡುಗೆ ಮಾಡಿದ್ದು. ಅವರ ಯಾವುದೇ ಶುಭಸಮಾರಂಭಗಳಿಗೆ ನಮ್ಮ ಡಿಎಲ್ಎಸ್ ಕ್ಯಾಟರ್ಸ್ನಿಂದ ಅಡುಗೆ ಮಾಡುತ್ತಿದ್ದೆವು. ಅವರ ಮನೆಗೆ ನಾವು ಊಟ ಬಡಿಸಲು ಹೋದಾಗ ಆತ್ಮೀಯವಾಗಿ ನಡೆಸಿಕೊಳ್ತಿದ್ರು. ನಮ್ಮ ಪಕ್ಕ ನಿಂತು ಪೋಟೋ ತೆಗೆಸಿಕೊಳ್ತಿದ್ರು. ಇವತ್ತು ಅವರು ಇಲ್ಲಾಂದ್ರೆ ನಂಬಲು ಸಾಧ್ಯವಾಗ್ತಿಲ್ಲ. ಬಹಳ ಬೇಸರವಾಗ್ತಿದೆ. ವೆಜ್, ನಾನ್ ವೆಜ್ ಎರಡು ವ್ಯವಸ್ಥೆ ಮಾಡಲಾಗ್ತಿದೆ. ಬಾಳೆ ಎಲೆ ಊಟದ ವ್ಯವಸ್ಥೆ ಇದೆ. ಗೀರೈಸ್ ಮತ್ತು ಕುರ್ಮ, ಕಬಾಬ್, ಬೇಬಿ ಕಾರ್ನ್, ಲಾಲಿ ಪಾಪ್, ಅಕ್ಕಿಪೇರಣಿ ಪಾಯಸ, ಮಸಾಲೆ ವಡೆ ಹಾಗೂ ಅನ್ನರಸಂಗೆ ರೆಡಿ ಮಾಡಿಕೊಳ್ತಿದ್ದೀವಿ. ಹತ್ತು ಗಂಟೆ ಸುಮಾರಿಗೆ ಎಲ್ಲಾ ಅಡುಗೆ ರೆಡಿ ಆಗಿರುತ್ತದೆ ಅಂತ ಹಿರಿಯ ಹೆಡ್ ಕುಕ್ ಹೊನಪ್ಪ ಹೇಳಿದರು.
ಅರಮನೆ ಮೈದಾನದಲ್ಲಿ ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆ ಆಯೋಜನೆ
ಅಪ್ಪು ಹೆಸರಿನಲ್ಲಿ ಇಂದು ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿದೆ. ಅರಮನೆ ಮೈದಾನದಲ್ಲಿ ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.
Published On - Nov 09,2021 8:35 AM