ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಮ್ಮನ್ನೆಲ್ಲಾ ಅಗಲಿ ವರ್ಷವೇ ಆಗಿದ್ದರೂ ಅವರ ನೆನಪು ಮಾತ್ರ ನಮ್ಮೊಂದಿಗೆ ಇನ್ನು ಜೀವಂತವಾಗಿದೆ. ಇಂದಿಗೂ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಪ್ರತಿನಿತ್ಯ ನೆನಪಿಸಿಕೊಳ್ಳುವ ಕೋಟ್ಯಂತರ ಜೀವಗಳು ನಮ್ಮ ಮಧ್ಯೆ ಇದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇತ್ತ ಸರ್ಕಾರವು ಸಹ ಪುನೀತ್ ಹೆಸರಿನಲ್ಲಿ ಅಜರಾಮರಗೊಳಿಸುವ ಕೆಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ಹಿನ್ನೆಲೆ ನಾಳೆ(ಫೆ. 6) ಬೆಂಗಳೂರಿನ ದ್ಮನಾಭನಗರದ ವಾಜಪೇಯಿ ಕ್ರೀಡಾಂಗಣದಲ್ಲಿ ಬಾನದಾರಿಯಲ್ಲಿ ಪುನೀತ್ ಪಯಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಕಂದಾಯ ಇಲಾಖೆ ಸಚಿವ ಆರ್.ಅಶೋಕ್, ಕಾರ್ಯಕ್ರಮಕ್ಕೆ ನಟ ಸುದೀಪ್, ಪುನೀತ್ ಕುಟುಂಬಸ್ಥರು ಬರುತ್ತಾರೆ. ರಾಜೇಶ್, ಸಾಧುಕೋಕಿಲ, ರಘು ದೀಕ್ಷಿತ್ ಹಾಡು ಹಾಡಲಿದ್ದಾರೆ. ಯಾವುದೇ ಸಂಭಾವನೆ ಪಡೆಯದೆ ಗಾಯಕರು ಹಾಡು ಹಾಡುತ್ತಾರೆ. ನಾಳೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಟ ಪುನೀತ್ ಹೆಸರಿನ ನಾಮಫಲಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅನಾವರಣ ಮಾಡಲಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್
ಸುಮಾರು 4 ಗಂಟೆ ಕಾಲ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಯಾರಿಗೂ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಿದ್ದು, ಸುಮಾರು 12ರಿಂದ 13 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇನ್ನು ಬೆಂಗಳೂರಿನ ರಸ್ತೆಯೊಂದಕ್ಕೆ ನಟ ಪುನೀತ್ ರಾಜ್‌ಕುಮಾರ್ ಹೆಸರನ್ನು ನಾಮಕರಣ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಬೆಂಗಳೂರಿನ ನಾಯಂಡಳ್ಳಿ ಜಂಕ್ಷನ್ ಇಂದ, ಬನ್ನೇರುಘಟ್ಟ ರಸ್ತೆವರೆಗೆ ಅಂದರೆ ಸುಮಾರು 12 ಕಿ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಲಾಗುತ್ತಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ, ಕಂದಾಯ ಸಚಿವ ಆರ್. ಅಶೋಕ್ ಮುಂದಾಳತ್ವದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಟ ಪುನೀತ್ ಒಬ್ಬ ಮಾನವತಾವಾದಿ. ಅವರ ಹೆಸರು ರಸ್ತೆಗೆ ಇಡಬೇಕೆಂದು ನಾನು ಮನವಿ ಮಾಡಿದ್ದೆ. ಸಿಎಂ ಬೊಮ್ಮಾಯಿ ಅವರು ಮನವಿಯನ್ನು ಪರಿಗಣಿಸಿ ಗೆಜೆಟ್ನಲ್ಲಿ ಆದೇಶ ಸಹ ಮಾಡಿದರು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.