ಫ್ಯಾನ್ಸ್ ಹೆಸರಲ್ಲಿ ನಕಲಿ ಖಾತೆ, ಕೆಟ್ಟ ಭಾಷೆ: ಖಡಕ್ ಎಚ್ಚರಿಕೆ ನೀಡಿದ ಅಲ್ಲು ಅರ್ಜುನ್

|

Updated on: Dec 22, 2024 | 5:09 PM

ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳ ಹಾವಳಿ ಮಿತಿ ಮೀರುತ್ತಿದೆ. ಇದರ ಬಗ್ಗೆ ಅಲ್ಲು ಅರ್ಜುನ್ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ತಮ್ಮ ಅಭಿಮಾನಿಗಳು ಎಂದು ಹೇಳಿಕೊಂಡು ಯಾರಾದರೂ ಅಸಭ್ಯವಾಗಿ ಪೋಸ್ಟ್ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಲ್ಲು ಅರ್ಜುನ್ ಅವರು ಎಚ್ಚರಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ...

ಫ್ಯಾನ್ಸ್ ಹೆಸರಲ್ಲಿ ನಕಲಿ ಖಾತೆ, ಕೆಟ್ಟ ಭಾಷೆ: ಖಡಕ್ ಎಚ್ಚರಿಕೆ ನೀಡಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್
Follow us on

ಟಾಲಿವುಡ್​ ನಟ ಅಲ್ಲು ಅರ್ಜುನ್ ಅವರ ಸದ್ಯಕ್ಕೆ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾ ಪ್ರದರ್ಶನ ಆಗುವಾಗ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತದಿಂದ ಅಭಿಮಾನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಅಲ್ಲು ಅರ್ಜುನ್ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮಿತಿ ಮೀರಿದ ವರ್ತನೆ ತೋರಿಸುತ್ತಿದ್ದಾರೆ. ಅಂಥವರಿಗೆ ಅಲ್ಲು ಅರ್ಜುನ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಕ್ಕೆ ಅನೇಕರಿಗೆ ಕೋಪ ಬಂತು. ಹಾಗಾಗಿ ತೆಲಂಗಾಣ ಸರ್ಕಾರದ ವಿರುದ್ಧ ಹಲವರು ಕಿಡಿಕಾರಿದರು. ಅದರ ಜೊತೆಗೆ ಕೆಲವರು ಅಶ್ಲೀಲ ಪದ ಬಳಕೆ ಕೂಡ ಮಾಡಿದ್ದಾರೆ. ಇದನ್ನು ಅಲ್ಲು ಅರ್ಜುನ್ ಅವರು ಖಂಡಿಸುತ್ತಿದ್ದಾರೆ. ಯಾರೂ ಕೂಡ ಅಸಭ್ಯವಾಗಿ ಪೋಸ್ಟ್ ಮಾಡಬಾರದು ಎಂದು ಅಲ್ಲು ಅರ್ಜುನ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಯಾರನ್ನೂ ದೂರಲ್ಲ, ಇಲ್ಲಿ ನನ್ನ ಚಾರಿತ್ರ್ಯ ಹರಣ ಆಗುತ್ತಿದೆ’; ಅಲ್ಲು ಅರ್ಜುನ್ ಬೇಸರ

‘ನಿಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಿ ಎಂದು ನಾನು ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಆನ್​ಲೈನ್​ ಮತ್ತು ಆಫ್​ಲೈನ್​ನಲ್ಲಿ ಯಾವುದೇ ರೀತಿಯ ಅಸಭ್ಯ ಭಾಷೆ ಬಳಸಬೇಡಿ’ ಎಂದು ಅಭಿಮಾನಿಗಳಿಗೆ ಅಲ್ಲ ಅರ್ಜುನ್ ಅವರು ಕಿವಿಮಾತು ಹೇಳಿದ್ದಾರೆ. ಅದೇ ರೀತಿ, ನಕಲಿ ಖಾತೆಯಲ್ಲಿ ಇಂಥ ಕೆಲಸ ಮಾಡುವವರಿಗೆ ವಾರ್ನಿಂಗ್ ನೀಡಿದ್ದಾರೆ.

‘ನಕಲಿ ಖಾತೆಗಳ ಮೂಲಕ ನನ್ನ ಅಭಿಮಾನಿಗಳು ಎಂದು ಹೇಳಿಕೊಂಡು ಯಾರಾದರೂ ಅಶ್ಲೀಲ ಭಾಷೆ ಬಳಕೆ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ಪೋಸ್ಟ್​ಗಳ ಕಡೆಗೆ ಗಮನ ಕೊಡಬಾರದು ಎಂದು ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಅಲ್ಲು ಅರ್ಜುನ್ ಅವರು ಇನ್​ಸ್ಟಾಗ್ರಾಮ್​ ಮತ್ತು ‘ಎಕ್ಸ್​’ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ವಿಶ್ವಾದ್ಯಂತ 1500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುತ್ತಿದೆ. ಈ ನಡುವೆ ಸಿನಿಮಾಗೆ ಪೈರಸಿ ಕಾಟ ಕೂಡ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.