ನಟ ರಾಮ್ ಚರಣ್ (Ram Charan) ಅವರ ಅಭಿಮಾನಿಗಳಿಗೆ ಹೋಳಿ ಹಬ್ಬದ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ‘ಆರ್ಆರ್ಆರ್’ ಸಿನಿಮಾದ ಗೆಲುವಿನ ಬಳಿಕ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಗ್ಲೋಬಲ್ ಸ್ಟಾರ್’ ಎಂದು ಕರೆಯುತ್ತಿದ್ದಾರೆ. ಪ್ರಸ್ತುತ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಅವರ ಮುಂದಿನ ಸಿನಿಮಾಗಳ ಬಗ್ಗೆ ಎಗ್ಸೈಟಿಂಗ್ ಮಾಹಿತಿ ಹೊರಬಿದ್ದಿದೆ. ರಾಮ್ ಚರಣ್ ನಟಿಸಲಿರುವ 17ನೇ ಸಿನಿಮಾಗೆ ಸುಕುಮಾರ್ (Sukumar) ಅವರು ನಿರ್ದೇಶನ ಮಾಡಲಿದ್ದಾರೆ.
ರಾಮ್ ಚರಣ್ ಅವರ 15ನೇ ಚಿತ್ರವಾಗಿ ‘ಗೇಮ್ ಚೇಂಜರ್’ ಮೂಡಿಬರುತ್ತಿವೆ. 16ನೇ ಸಿನಿಮಾಗೆ ‘ಉಪ್ಪೆನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಲಿದ್ದು ಕೆಲವೇ ದಿನಗಳ ಹಿಂದೆ ಆ ಚಿತ್ರಕ್ಕೆ ಮುಹೂರ್ತ ನೆರವೇರಿತು. ಅದರ ಬೆನ್ನಲ್ಲೇ ರಾಮ್ ಚರಣ್ ನಟನೆಯ 17ನೇ ಸಿನಿಮಾ ಅನೌನ್ಸ್ ಆಗಿದೆ. ಆ ಸಿನಿಮಾಗೆ ಸುಕುಮಾರ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ ಎಂಬುದು ತಿಳಿದು ಅಭಿಮಾನಿಗಳ ಖುಷಿ ಡಬಲ್ ಆಗಿದೆ.
#RC17 the force reunites 💥@aryasukku @ThisIsDSP @MythriOfficial pic.twitter.com/yyXv7Fnx9N
— Ram Charan (@AlwaysRamCharan) March 25, 2024
ಸುಕುಮಾರ್ ಮತ್ತು ರಾಮ್ ಚರಣ್ ಅವರು ಜೊತೆಯಾಗಿ ‘ರಂಗಸ್ಥಲಂ’ ಸಿನಿಮಾ ಮಾಡಿದ್ದರು. ಆ ಸಿನಿಮಾ ಯಶಸ್ವಿ ಆಗಿತ್ತು. ಈಗ ಸುಕುಮಾರ್ ಅವರು ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆಗಸ್ಟ್ 15ರಂದು ಬಿಡುಗಡೆ ಆಗಲಿರುವ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವುದು ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು. ಆ ಬಳಿಕ ಸುಕುಮಾರ್ ಅವರು ರಾಮ್ ಚರಣ್ ಜೊತೆಗಿನ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಹೊಸ ಚಿತ್ರಕ್ಕೆ ನಡೆಯಿತು ಅದ್ದೂರಿ ಮುಹೂರ್ತ; ಇಲ್ಲಿವೆ ಫೋಟೋಸ್
ರಾಮ್ ಚರಣ್ ಮತ್ತು ಸುಕುಮಾರ್ ಅವರ ಕಾಂಬಿನೇಷನ್ನಲ್ಲಿ ಬಂದಿದ್ದ ‘ರಂಗಸ್ಥಲಂ’ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡಿತ್ತು. ಈಗ ಅವರಿಬ್ಬರ ಜೊಸ ಸಿನಿಮಾ ಕೂಡ ಇದೇ ಪ್ರೊಡಕ್ಷನ್ಸ್ ಹೌಸ್ ಮೂಲಕ ನಿರ್ಮಾಣ ಆಗಲಿದೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಲಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸಿದ್ಧವಾಗಲಿದೆ. ಇನ್ನು, ‘ಪುಷ್ಪ’, ‘ರಂಗಸ್ಥಲಂ’ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದ ದೇವಿಶ್ರೀ ಪ್ರಸಾದ್ ಅವರೇ ಆರ್ಸಿ17 ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.