ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಚಿತ್ರಕ್ಕೆ ಹಲವು ಅಡೆತಡೆಗಳು ಉಂಟಾಗಿವೆ. ಅದೆಲ್ಲವನ್ನೂ ನಿವಾರಿಸಿಕೊಂಡು ತಂಡ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಕಥಾನಾಯಕನ ಗೆಳೆಯನ ಪಾತ್ರ ಮಾಡುತ್ತಿರುವ ಜಗದೀಶ್ ಪ್ರತಾಪ್ ಭಂಡಾರಿ (Jagadeesh Prathap Bandari) ಬಂಧನಕ್ಕೆ ಒಳಗಾದ ಬಳಿಕ ಶೂಟಿಂಗ್ಗೆ ತೊಂದರೆ ಆಗಿತ್ತು. ಸಹ-ನಟಿಗೆ ಕಿರುಕುಳ ನೀಡಿದ ಆರೋಪ ಅವರ ಮೇಲಿದೆ. ನಟಿಯ ಆತ್ಮಹತ್ಯೆ ಬಳಿಕ ಜಗದೀಶ್ ಬಂಧನವಾಗಿತ್ತು. ಈಗ ಜಗದೀಶ್ಗೆ ಜಾಮೀನು ಸಿಕ್ಕಿದೆ. ಕೂಡಲೇ ಅವರು ‘ಪುಷ್ಪ 2’ ಸಿನಿಮಾದ ಶೂಟಿಂಗ್ಗೆ ಹಾಜರಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆ ಜಗದೀಶ್ ಅವರ ಅನೇಕ ದೃಶ್ಯಗಳು ಇರುವುದರಿಂದ ಜಾಮೀನು ಸಿಕ್ಕ ಕೂಡಲೇ ತರಾತುರಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ.
ಕಳೆದ ಡಿಸೆಂಬರ್ನಲ್ಲಿ ಜಗದೀಶ್ ಅವರ ಬಂಧನ ಆಗಿತ್ತು. ಆ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ತೊಂದರೆ ಆಗಿತ್ತು. ಮೂಲಗಳ ಪ್ರಕಾರ ‘ಪುಷ್ಪ 2’ ತಂಡದವರು ಜಗದೀಶ್ಗೆ ಜಾಮೀನು ಕೊಡಿಸಲು ಸಹಾಯ ಮಾಡಿದ್ದಾರೆ. ಈಗ ಜಾಮೀನು ಸಿಕ್ಕಿದ್ದು, ಹೈದರಾಬಾದ್ನಲ್ಲಿ ಗಂಗಮ್ಮ ಜಾತ್ರೆಯ ದೃಶ್ಯಗಳನ್ನು ಈಗ ಚಿತ್ರಿಸಲಾಗುತ್ತಿದೆ. ಅದರಲ್ಲಿ ಜಗದೀಶ್ ಭಾಗವಹಿಸಿದ್ದಾರೆ. ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ; ‘ಪುಷ್ಪ’ ಚಿತ್ರದ ನಟ ಅರೆಸ್ಟ್
ನಟ ಜಗದೀಶ್ ಮೇಲೆ ಗಂಭೀರ ಆರೋಪಗಳು ಇವೆ. ಹಾಗಾಗಿ ಅಂಥ ಕಲಾವಿದನಿಗೆ ‘ಪುಷ್ಪ 2’ ಸಿನಿಮಾದಲ್ಲಿ ಅವಕಾಶ ನೀಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ. ಹಾಗಂತ ಈಗ ಚಿತ್ರತಂಡದವರು ಆ ನಟನನ್ನು ಹೊರಗಿಡಲು ಸಾಧ್ಯವಿಲ್ಲ. ಯಾಕೆಂದರೆ, ಇದು ‘ಪುಷ್ಪ’ ಚಿತ್ರದ ಮುಂದುವರಿದ ಭಾಗ. ಕಥೆ ಕೂಡ ಮುಂದುವರಿದಿದ್ದು, ಅದರಲ್ಲಿ ಜಗದೀಶ್ ಮಾಡಿರುವ ಕೇಶವ ಎಂಬ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ. ಆ ಪಾತ್ರವನ್ನು ಮಧ್ಯದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಜಗದೀಶ್ ಅವರು ಚಿತ್ರತಂಡದಲ್ಲಿ ಮುಂದುವರಿಯುತ್ತಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ಬಗ್ಗೆ ಗಾಸಿಪ್ ಮಾಡುವವರ ಬಾಯಿ ಮುಚ್ಚಿಸಲು ಈ ಒಂದು ಪೋಸ್ಟರ್ ಸಾಕು
‘ಪುಷ್ಪ 2’ ಚಿತ್ರದ ಬಿಡುಗಡೆ ದಿನಾಂಕ ಬದಲಾಗಲಿದೆ ಎಂದು ಇತ್ತೀಚೆಗೆ ಗಾಸಿಪ್ ಹಬ್ಬಿತ್ತು. ಆದರೆ ಅದನ್ನು ಚಿತ್ರತಂಡದವರು ತಳ್ಳಿ ಹಾಕಿದ್ದಾರೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದುಕೊಂಡ ದಿನಾಂಕದಲ್ಲೇ ‘ಪುಷ್ಪ 2’ ಸಿನಿಮಾ ತೆರೆಕಾಣಲಿದೆ ಎಂಬುದನ್ನು ತಿಳಿಸುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತೆರೆಕಾಣಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ