ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಅವರು ಪ್ರತಿಭಾವಂತ ಕಲಾವಿದ ಎಂಬುದರಲ್ಲಿ ಅನುಮಾನವೇ ಇಲ್ಲ. ತಮ್ಮ ಪ್ರತಿಭೆ ಏನು ಎಂಬುದನ್ನು ಅವರು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರ ಕೈಯಲ್ಲಿ ಅನೇಕ ಬಹುನಿರೀಕ್ಷಿತ ಸಿನಿಮಾಗಳಿವೆ. ಆ ಪೈಕಿ ‘ಪುಷ್ಪ 2’ ಸಿನಿಮಾ (Pushpa 2 Movie) ಕೂಡ ಪ್ರಮುಖವಾಗಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರ ಲುಕ್ ಹೇಗಿರಲಿದೆ ಎಂಬುದನ್ನು ತಿಳಿಸುವ ಸುಲುವಾಗಿ ‘ಪುಷ್ಪ 2’ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇಂದು (ಆಗಸ್ಟ್ 8) ಫಹಾದ್ ಫಾಸಿಲ್ ಅವರ ಜನ್ಮದಿನ (Fahadh Faasil Birthday). ಆ ಪ್ರಯುಕ್ತ ಅನಾವರಣ ಆಗಿರುವ ಈ ಪೋಸ್ಟರ್ ವೈರಲ್ ಆಗಿದೆ. ಅಲ್ಲು ಅರ್ಜುನ್ ನಟನೆಯ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಪುಷ್ಪ’ ಚಿತ್ರ ಸೂಪರ್ ಹಿಟ್ ಆಗಿದ್ದರಿಂದ ಈಗ ಅದರ ಸೀಕ್ವೆಲ್ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಲು ಸುಕುಮಾರ್ ಪ್ರಯತ್ನಿಸುತ್ತಿದ್ದಾರೆ. ಅವರ ಸಿನಿಮಾಗಳಲ್ಲಿ ಹಲವು ಪಾತ್ರಗಳು ಹೈಲೈಟ್ ಆಗುತ್ತವೆ. ಅದೇ ರೀತಿ ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಮಾಡಿರುವ ಬನ್ವರ್ ಸಿಂಗ್ ಶೆಖಾವತ್ ಪಾತ್ರ ಕೂಡ ಗಮನ ಸೆಳೆಯಲಿದೆ.
ಆ ಒಂದು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್
‘ಪುಷ್ಪ’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದರು. ಪುಷ್ಪರಾಜ್ನಿಂದ ಅವಮಾನ ಎದುರಿಸುವ ಬನ್ವರ್ ಸಿಂಗ್ ಶೆಖಾವತ್ ಎಂಬ ಅರಣ್ಯಾಧಿಕಾರಿಯಾಗಿ ಅವರು ನಟಿಸಿದ್ದರು. ಬನ್ವರ್ ಸಿಂಗ್ ಶೆಖಾವತ್ ಅಂದು ಅನುಭವಿಸಿದ ಅವಮಾನಕ್ಕೆ ಸೀಕ್ವೆಲ್ನಲ್ಲಿ ಸೇಡು ತೀರಿಸಿಕೊಳ್ಳುತ್ತಾನಾ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಿಗೆ ಇದೆ. ಹೊಸ ಪೋಸ್ಟರ್ನಲ್ಲಿ ಇದೇ ಅಂಶವನ್ನು ಹೈಲೈಟ್ ಮಾಡಲಾಗಿದೆ.
‘ಪ್ರತಿಭಾವಂತ ನಟರಾದ ಫಹಾದ್ ಫಾಸಿಲ್ ಅವರಿಗೆ ಪುಷ್ಪ 2 ತಂಡದಿಂದ ಜನ್ಮದಿನದ ಶುಭಾಶಯಗಳು. ಬನ್ವರ್ ಸಿಂಗ್ ಶೆಖಾವತ್ ಸರ್ ಅವರು ಸೇಡಿನೊಂದಿಗೆ ಮತ್ತೆ ದೊಡ್ಡ ಪರದೆ ಮೇಲೆ ಬರಲಿದ್ದಾರೆ’ ಎಂದು ಈ ಪೋಸ್ಟರ್ಗೆ ಕ್ಯಾಪ್ಷನ್ ನೀಡಲಾಗಿದೆ. ಅಲ್ಲು ಅರ್ಜುನ್ ಜೊತೆ ಡಾಲಿ ಧನಂಜಯ್, ರಶ್ಮಿಕಾ ಮಂದಣ್ಣ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ. ‘ಮೈತ್ರಿ ಮೂವೀ ಮೇಕರ್ಸ್’ ಮೂಲಕ ಅದ್ದೂರಿಯಾಗಿ ‘ಪುಷ್ಪ 2’ ಚಿತ್ರ ನಿರ್ಮಾಣ ಆಗುತ್ತಿದೆ. ಈಗಾಗಲೇ ಅಲ್ಲು ಅರ್ಜುನ್ ಅವರ ಪೋಸ್ಟರ್ ವೈರಲ್ ಆಗಿದೆ. ಫಸ್ಟ್ ಗ್ಲಿಂಪ್ಸ್ ವಿಡಿಯೋ ಮೂಲಕವೂ ಹೈಪ್ ಕ್ರಿಯೇಟ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.